ಆನೇಕಲ್: ನಡುರಸ್ತೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಮೇಲೆ ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕ ಬಿ.ಶಿವಣ್ಣ ಆಪ್ತ ಹಲ್ಲೆ ನಡೆಸಿ ಗೂಂಡಾಗಿರಿ ಮಾಡಿರುವ ಘಟನೆ ಪಟ್ಟಣದ ರಾಮದೇವರ ಸರ್ಕಲ್‌ನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ (Assault Case) ಮಾಡಿರುವ ಆರೋಪ ಕೇಳಿಬಂದಿದೆ.
ಅಶೋಕ್ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ. ಬೆಸ್ತಮಾನಹಳ್ಳಿ ಯಲ್ಲಪ್ಪ ಹಲ್ಲೆ ಆರೋಪಿ. ಕಾರು ಪಾರ್ಕ್ ಮಾಡಿ ಕಾನ್‌ಸ್ಟೇಬಲ್ ಅಶೋಕ್ ತೆರಳುತ್ತಿದ್ದಾಗ, ಏನೋ ಗುರಾಯಿಸುತ್ತಿಯಾ ಎಂದು ಯಲ್ಲಪ್ಪ ಕೇಳಿದ್ದಾನೆ. ನಾನು ನಿನ್ನನ್ನು ಗುರಾಯಿಸಿಲ್ಲ ಎಂದು ಅಶೋಕ್ ಮುಂದೆ ಸಾಗಿದ್ದಾರೆ. ಈ ವೇಳೆ ಯಲ್ಲಪ್ಪ ಹಿಂಬದಿಯಿಂದ ಹೋಗಿ ಪೊಲೀಸ್ ತಲೆಗೆ ಹಾಲಿನ ಟ್ರೇಯಿಂದ ಹೊಡೆದಿದ್ದಾನೆ.
ತಲೆಗೆ ಗಂಭೀರ ಗಾಯವಾಗಿದ್ದರಿಂದ ಅಶೋಕ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ಮಾಡಿದ ಯಲ್ಲಪ್ಪನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆನೇಕಲ್ ತಾಲೂಕಿನಲ್ಲಿ ಚುನಾವಣೆ ಹೊಸ್ತಿಲಿನಲ್ಲಿ ಪುಡಿ ರೌಡಿಗಳ ಗೂಂಡಾಗಿರಿ ಮಿತಿಮೀರಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆನೇಕಲ್ ಪೊಲೀಸರು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಆನೇಕಲ್‌ನ ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ!
ಆನೇಕಲ್: ಇತ್ತೀಚೆಗೆ ಬೆಂಗಳೂರಿನ 48ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ ಬೆನ್ನಲ್ಲೇ ಮತ್ತೊಂದು ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಹಾಕಿರುವುದು ಕಂಡುಬಂದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹುಲಿಮಂಗಲದ ಟ್ರೀಮಿಸ್ ವರ್ಲ್ಡ್ ಸ್ಕೂಲ್‌ಗೆ ಶುಕ್ರವಾರ ಮಧ್ಯಾಹ್ನ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿದೆ.
ಶಾಲಾ ಕೊಠಡಿಯ ಡೆಸ್ಕ್ ಕೆಳಗಡೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದಿದೆ. ಹೀಗಾಗಿ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ದೌಡಾಯಿಸಿ, ಇಡೀ ಶಾಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಶಾಲೆಯಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಇದರಿಂದ ಬೆಚ್ಚಿ ಬಿದ್ದಿದ್ದ ಶಾಲೆ ಆಡಳಿತ ಮಂಡಳಿ ನಿಟ್ಟಿಸಿರು ಬಿಟ್ಟಿದೆ.
ಡಿಸೆಂಬರ್‌ನಲ್ಲಿ ಬೆಂಗಳೂರಿನ 48ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ನಂತರ ಮಾರ್ಚ್ 1ರಂದು ಮಾರ್ಚ್ 1 ರಂದು ಬೆಂಗಳೂರಿನ ಬ್ರೂಕ್ ಫೀಲ್ಡ್‌ನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದರು. ಅದಾದ ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಹಲವು ನಾಯಕರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. 25 ಲಕ್ಷ ಡಾಲರ್ (20 ಕೋಟಿ ರೂ.) ನೀಡದೇ ಹೋದರೆ ಅನಾಹುತ ಖಚಿತ ಎಂದೂ ದುಷ್ಕರ್ಮಿ ಇ-ಮೇಲ್‌ನಲ್ಲಿ ಬೆದರಿಕೆ ಹಾಕಿದ್ದ. ಇದೀಗ ಮತ್ತೊಂದು ಶಾಲೆಗೆ ಬೆದರಿಕೆ ಸಂದೇಶ ಬಂದಿರುವುದು ಆತಂಕ ಮೂಡಿಸಿದೆ.