Site icon Vistara News

Assault Case: ಹಣಕಾಸಿನ ಕಿರಿಕ್‌; ರಾಜಿಗೆಂದು ಕರೆಸಿ ಮಚ್ಚು, ಲಾಂಗು ಬೀಸಿದರು

Assault Case in tumakuru

ತುಮಕೂರು: ಇಲ್ಲಿನ ತುರುವೇಕೆರೆ ತಾಲೂಕಿನ ಕರೇಕಲ್ಲು ಗ್ರಾಮದಲ್ಲಿ ರಾಜಿಗೆಂದು ಕರೆದು ಮಾರಕಾಸ್ತ್ರಗಳಿಂದ ಹಲ್ಲೆ (Assault Case) ನಡೆಸಿರುವ ಘಟನೆ ನಡೆದಿದೆ. ದಿಲೀಪ್ ಎಂಬಾತ ಗಂಭೀರ ಗಾಯಗೊಂಡಿದ್ದಾನೆ. ಕಾಮಸಂದ್ರ ಪ್ರಸಾದಿ, ಅಬುಕನಹಳ್ಳಿ ಮಂಜ ಅಲಿಯಾಸ್ ಕೋಳಿ‌‌ ಮಂಜ, ಮನು ಅಲಿಯಾಸ್ ಅಲ್ಲ ಎಂಬವರು ಹಲ್ಲೆ ಮಾಡಿದ್ದಾರೆ.

ಪ್ರಸಾದಿ ಹಾಗೂ ಕಿರಣ್ ಕುಮಾರ್ ಎಂಬುವವರ ನಡುವೆ ಹಣದ ವ್ಯವಹಾರವಾಗಿ ಕಳೆದ ಮಾರ್ಚ್ 29 ರಂದು ಗಲಾಟೆ ನಡೆದಿತ್ತು. ಈ ವಿಚಾರವಾಗಿ ಪ್ರಸಾದಿ ಮೇಲೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು. ಹೀಗಾಗಿ ಇಬ್ಬರ ನಡುವೆ ವೈಷಮ್ಯವೂ ಬೆಳೆದಿತ್ತು.

ಈ ಮಧ್ಯೆ ಪ್ರಸಾದಿ ರಾಜಿ ಮಾಡಿಕೊಳ್ಳೋಣಾ ಎಂದು ಕಿರಣ್ ಕುಮಾರ್‌ನನ್ನು ಕರೆದಿದ್ದ. ಕಿರಣ್ ತನ್ನ ಜತೆಗೆ ಸ್ನೇಹಿತರಾದ ದಿಲೀಪ್ ಕುಮಾರ್, ಸಂಜು, ಮೋಹನ್, ಮಂಜುನಾಥ್‌ ಕರೆದುಕೊಂಡು ಹೋಗಿದ್ದ. ಕಳೆದ ಜೂನ್ 3ರ ರಾತ್ರಿ ಕರೆಕಲ್ಲು ಗ್ರಾಮದ ಬಳಿ ಪ್ರಸಾದಿ ಹಾಗೂ ಕಿರಣ್ ಕುಮಾರ್ ಮಾತನಾಡುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪ್ರಸಾದಿ ಸ್ನೇಹಿತರು, ಕಿರಣ್ ಕುಮಾರ್ ಹಾಗೂ ಸ್ನೇಹಿತರ ಮೇಲೆ ಲಾಂಗ್ ಮಚ್ಚುಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಕಿರಣ್ ಕುಮಾರ್, ಸಂಜು, ಮಂಜುನಾಥ್ ಹಾಗೂ ಮೋಹನ್ ತಪ್ಪಿಸಿಕೊಂಡಿದ್ದರು. ಆದರೆ ದಿಲೀಪ್ ಸಿಕ್ಕಿಬಿದ್ದ ಕಾರಣ ಆತನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದರು.

ಹಲ್ಲೆ ನಡೆಸಿ ಬಳಿಕ ಕಿರಣ್‌ ಸ್ನೇಹಿತರ ಬೈಕ್‌ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಮಾತ್ರವಲ್ಲದೆ ಕಿರಣ್ ಕುಮಾರ್ ಸ್ನೇಹಿತರ ಮೂರು ಬೈಕ್‌ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಬಳಿಕ ಗಂಭೀರ ಗಾಯಗೊಂಡಿದ್ದ ದಿಲೀಪ್‌ನನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ, ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ನೇಹಿತನ ಜತೆ ಹೋದ ಆಟೋ ಚಾಲಕ ಶವವಾಗಿ ಪತ್ತೆ

ತುಮಕೂರಿನ ಮಧುಗಿರಿ- ಗೌರಿಬಿದನೂರು ಬೈಪಾಸ್ ರಸ್ತೆಯಲ್ಲಿರುವ ಇಟ್ಟಿಗೆ ಫ್ಯಾಕ್ಟರಿ ಬಳಿ ಮೃತದೇಹ ಪತ್ತೆಯಾಗಿದೆ. ಮಧುಗಿರಿ ಪಟ್ಟಣದ ಶ್ರೀಧರ್ ಮೂರ್ತಿ (45) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಸ್ನೇಹಿತನ ಜತೆ ಹೋದ ಶ್ರೀಧರ್‌ ಮೂರ್ತಿ ಶವವಾಗಿ ಪತ್ತೆ ಆಗಿದ್ದಾರೆ.

ಆಟೋ ಚಾಲಕ ಶ್ರೀಧರ್‌ ಮೂರ್ತಿ

ಆಟೋ ಚಾಲಕನಾಗಿದ್ದ ಶ್ರೀಧರ್‌ ಮೂರ್ತಿ ಪಟ್ಟಣದ ಅಗ್ನಿಶಾಮಕ ಠಾಣೆ ಬಳಿ ವಾಸವಿದ್ದರು. ಶ್ರೀಧರ್ ಮೂರ್ತಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ನೇಹಿತ ವೆಂಕಟೇಶ್ ಜತೆ ಬಾಡಿಗೆ ಇದೆ ಎಂದು ಮನೆಯಿಂದ ಹೋಗಿದ್ದ, ಆದರೆ ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಕುಟುಂಬಸ್ಥರು ಗಾಬರಿಯಾಗಿದ್ದಾರೆ. ಈ ಬಗ್ಗೆ ವೆಂಕಟೇಶ್‌ಗೆ ಕರೆ ಮಾಡಿ ಕೇಳಿದಾಗ ಯಾರೋ ಮೂವರ ಜತೆ ಕಾರಿನಲ್ಲಿ ತೆರಳಿದ್ದಾಗಿ ಹೇಳಿದ್ದಾರೆ. ಆದರೆ ಬೆಳಗ್ಗೆ ಶ್ರೀಧರ್ ಮೂರ್ತಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಸದ್ಯ ಮೃತನ ಕುಟುಂಬಸ್ಥರು ಸ್ನೇಹಿತ ವೆಂಕಟೇಶ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕಾರಿನಲ್ಲಿ ಕರೆದುಕೊಂಡು ಹೋದ ಅಪರಿಚಿತರನ್ನು ಪತ್ತೆ ಹಚ್ಚಿ ನ್ಯಾಯ ಓದಗಿಸಬೇಕೆಂದು ಆಗ್ರಹಿಸಿದ್ದಾರೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case: ಜಸ್ಟ್‌ 40 ಸೆಕೆಂಡ್‌ನಲ್ಲಿ 26 ಬಾರಿ ಮಚ್ಚಿನಿಂದ ಕೊಚ್ಚಿ ಕೊಚ್ಚಿ ಕೊಂದರು!

ರೈಲಿಗೆ ಸಿಲುಕಿ ವ್ಯಕ್ತಿ ಸಾವು

ಮಂಡ್ಯದ ಮದ್ದೂರಿನ ನಂಜಪ್ಪ ಕಲ್ಯಾಣ ಮಂಟಪದ ಬಳಿ ಇರುವ ರೈಲಿಗೆ ಸಿಲುಕಿ ವ್ಯಕ್ತಿ ಮೃತಪಟ್ಟಿದ್ದಾರೆ. ಕನಕಪುರ ಮೂಲದ ನಾಗೇಶ್ (35) ಮೃತ ದುರ್ದೈವಿ. ಮದ್ದೂರು ಪಟ್ಟಣದ ಶಿಂಷಾ ಬಾರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ನಾಗೇಶ್‌, ಮಾನಸಿಕವಾಗಿ ಮನನೊಂದಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮದ್ದೂರು ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version