Site icon Vistara News

Jai Shree Ram slogan: ಜೈ ಶ್ರೀರಾಮ್ ಎಂದು ಕೂಗಿದ್ದಕ್ಕೆ ಹಲ್ಲೆ; ಕಾರು ಅಡ್ಡಗಟ್ಟಿ ಮುಸ್ಲಿಂ ಯುವಕರ ಪುಂಡಾಟ!

Jai Shree Ram slogan

ಬೆಂಗಳೂರು: ಜೈ ಶ್ರೀರಾಮ್ ಎಂದು ಕೂಗಿದ್ದಕ್ಕೆ (Jai Shri Ram Slogan) ಕಾರಿನಲ್ಲಿ ಹೋಗುತ್ತಿದ್ದ ಹಿಂದು ಯುವಕರ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿರುವ ಘಟನೆ ನಗರದ ವಿದ್ಯಾರಣ್ಯಪುರದ ಚಿಕ್ಕ ಬೆಟ್ಟಳ್ಳಿ ಮಸೀದಿ ಬಳಿ ಬುಧವಾರ ನಡೆದಿದೆ. ಶ್ರೀರಾಮನವಮಿ (Ram Navami) ಆಗಿದ್ದರಿಂದ ಜೈ ಶ್ರೀರಾಮ್ ಎಂದು ಹೇಳುತ್ತಾ ಹಿಂದು ಯುವಕರು ಕಾರಿನಲ್ಲಿ ಹೋಗುತ್ತಿದ್ದಾಗ, ಅವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲಾಗಿದೆ.

ಶ್ರೀ ರಾಮನವಮಿ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಹಿಂದು ಯುವಕರು ತೆರಳುತ್ತಿದ್ದಾಗ, ಜೈ ಶ್ರೀರಾಮ್ ಎಂದು ಕೂಗಿದ್ದಾರೆ. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ಮುಸ್ಲಿಂ ಯುವಕರು, “ಜೈ ಶ್ರೀರಾಮ್‌ ಹೇಳಬಾರದು, ಅಲ್ಲಾಹ್ ಅಂತ ಹೇಳಬೇಕು” ಎಂದು ಹಿಂದು ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ | Road Accident: ವಾಟರ್‌ ಟ್ಯಾಂಕರ್‌ಗೆ ಡಿಕ್ಕಿಯಾಗಿ ಬೈಕ್‌ ಹಿಂಬದಿ ಸವಾರ ಸಾವು; ಬೆಚ್ಚಿ ಬೀಳಿಸುವ ಅಪಘಾತದ ದೃಶ್ಯ!

ಬೈಕ್‌ನಲ್ಲಿ ಬಂದ ಯುವಕರು, ಜೈ ಶ್ರೀ ರಾಮ್ ಇಲ್ಲಾ… ಓನ್ಲೀ ಅಲ್ಲಾ ಹು ಅಕ್ಬರ್ ಎಂದು ಹೇಳಿದ್ದಾರೆ. ಇದಲ್ಲದೆ ಕಾರಿನಲ್ಲಿ ಇದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇದೇ ವೇಳೆ ನಾವು ನಿಮ್ಮ ಹಬ್ಬದಲ್ಲಿ ಹೀಗೆ ಮಾಡುತ್ತೀವಾ ಎಂದು ಹಿಂದು ಯುವಕರು ಪ್ರಶ್ನೆ ಮಾಡಿದ್ದಾರೆ. ಸದ್ಯ ರಸ್ತೆಯಲ್ಲಿ ಪುಂಡಾಟ ಮಾಡಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲು

ಹಿಂದು ಯುವಕರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಡಿ. ಪವನ್ ಕುಮಾರ್ ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ನೇಹಿತರಾದ ವಿನಾಯಕ ಮತ್ತು ರಾಹುಲ್ ಜತೆ ಚಿಕ್ಕಬೆಟ್ಟಹಳ್ಳಿ ರಸ್ತೆಯಲ್ಲಿ ಮಧ್ಯಾಹ್ನ ಕಾರಿನಲ್ಲಿ ಹೋಗುತ್ತಿದ್ದೆ. ಕಾರಿನ ಮುಂದೆ ಶ್ರೀರಾಮನ ಧ್ವಜ ಕಟ್ಟಿದ್ದನ್ನು ನೋಡಿದ ಇಬ್ಬರು ಮುಸ್ಲಿಂ ಯುವಕರು, ನಮ್ಮ ಬಳಿ ಬಂದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಅಲ್ಲಾ ಹು ಅಕ್ಬರ್” ಎಂದು ಕೂಗಬೇಕು ಎಂದು ಒತ್ತಾಯಿಸಿದರು. ನಾವು ಹಾಗೆ ಕೂಗುವುದಿಲ್ಲವೆಂದು ಹೇಳಿದಾಗ, ನಮ್ಮ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದು, ರಾಹುಲ್ ತಲೆಗೆ ಪೆಟ್ಟು ಬಿದ್ದು ಮೂಗಿನಿಂದ ರಕ್ತಸ್ರಾವವಾಗಿದೆ. ಹೇಗೋ ನಾವು ಅಲ್ಲಿಂದ ತಪ್ಪಿಸಿಕೊಂಡು ಬಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳ ಗುರುತು ಪತ್ತೆಯಾಗಿದೆ

ಈ ಬಗ್ಗೆ ಈಶಾನ್ಯ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾತನಾಡಿ, ಐಪಿಸಿ ಸೆಕ್ಷನ್ 295a, 298, 143, 147, 504,324, 326, 149, 506 ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮೂವರು ಯುವಕರು ಕಾರಿನಲ್ಲಿ ಹೋಗುವಾಗ ಬಾವುಟ ಹಿಡಿದುಕೊಂಡು ಜೈ ಶ್ರೀರಾಮ್ ಅಂದಿದ್ದಾರೆ. ಈ ವೇಳೆ ಇಬ್ಬರು ಯುವಕರು ಕಾರು ಅಡ್ಡಗಟ್ಟಿದ್ದಾರೆ. ಜೈ ಶ್ರೀರಾಮ್ ಅಂತಾ ಯಾಕೆ ಕೂಗ್ತಿರಾ, ಅಲ್ಲಾಹ್ ಅನ್ನಿ ಅಂತ ಗಲಾಟೆ ಮಾಡಿದ್ದಾರೆ. ಮತ್ತಷ್ಟು ಯುವಕರನ್ನು ಕರೆತಂದಿದ್ದಾರೆ. ಒಟ್ಟು ಐದು ಜನ ಸೇರಿ ಹಲ್ಲೆ ಮಾಡಿದ್ದಾರೆ. ಕೇಸ್ ರಿಜಿಸ್ಟರ್ ಆಗಿದ್ದು, ಆರೋಪಿಗಳ ಗುರುತು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಏರ್‌ಪೋರ್ಟ್‌ ನಿರ್ಬಂಧಿತ ಪ್ರದೇಶದಲ್ಲಿ ವಿಡಿಯೊ ಮಾಡಿದ ಯುಟ್ಯೂಬರ್ ಅರೆಸ್ಟ್

ದೇವನಹಳ್ಳಿ: ಯುಟ್ಯೂಬರ್ಸ್ ವೀವ್ಸ್ ಹೆಚ್ಚಿಸಿಕೊಳ್ಳಲು ಏನೇನೋ ಮಾಡಿದರೆ ಕೇಸ್ ಬೀಳೋದು ಪಕ್ಕಾ. ಯಾಕೆಂದರೆ ಇಲ್ಲೊಬ್ಬ ಯುವಕ ಏರ್‌ಪೋರ್ಟ್‌ನಲ್ಲಿ ವಿಡಿಯೊ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಪಟ್ಟಣದ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಬಂಧಿತ ಪ್ರದೇಶದಲ್ಲಿ ವಿಡಿಯೊ ಮಾಡಿದ ಯುಟ್ಯೂಬರ್‌ನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಯುಟ್ಯೂಬ್‌ ಚಾನೆಲ್‌ನಲ್ಲಿ ವೀವ್ಸ್ ಹೆಚ್ಚಿಸಿಕೊಳ್ಳುವ ಭರದಲ್ಲಿ ನಿಯಮ ಮೀರಿ ವಿಡಿಯೊ ಮಾಡಿದ್ದರಿಂದ ಯುವಕನನ್ನು ಏರ್‌ಪೋರ್ಟ್‌ ಠಾಣೆ ಪೊಲೀಸರು ಬಂಧಿಸಿ, ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಯಲಹಂಕ ಮೂಲದ ಯುಟ್ಯೂಬರ್ ವಿಕಾಸ್ ಗೌಡ ಬಂಧಿತ. ಏರ್ಪೋರ್ಟ್‌ ರನ್ ವೇ ಚಿತ್ರೀಕರಣ ಮಾಡಿ ಯುಟ್ಯೂಬರ್‌ ಸಿಕ್ಕಿಹಾಕಿಕೊಂಡಿದ್ದು, ಟಿಕೆಟ್ ಇಲ್ಲದೆ ಒಳಗಡೆ ಹೋಗಿದ್ದೆ, 24 ಗಂಟೆ ರನ್ ವೇ ಬಳಿಯೇ ಇದ್ದೆ ಎಂದು ವಿಡಿಯೊದಲ್ಲಿ ಯುವಕ ಹೇಳಿಕೊಂಡಿದ್ದಾನೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರಿಂದ ಸಿಐಎಸ್ಎಫ್ ಅಧಿಕಾರಿಗಳು ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಏರ್‌ಪೋರ್ಟ್‌ ಠಾಣೆ ಪೊಲೀಸರು ಯುಟ್ಯೂಬರ್ ವಿಕಾಸ್ ಗೌಡನನ್ನು ಬಂಧಿಸಿದ್ದಾರೆ.

ವಿಡಿಯೊ ಮಾಡುವ ವೇಳೆ ಟಿಕೆಟ್‌ ಪಡೆಯದೆ ಒಳಗೆ ಹೋಗಿರುವುದಾಗಿ ಯುವಕ ಹೇಳಿಕೊಂಡಿದ್ದ. ಆದರೆ, ಪೊಲೀಸರ ವಿಚಾರಣೆ ವೇಳೆ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಪಡೆದಿರುವುದಾಗಿ ಹೇಳಿದ್ದಾನೆ. ಟಿಕೆಟ್ ಪಡೆದು ಪ್ರಯಾಣ ಮಾಡದೇ ಯುವಕ ರನ್ ವೇನಲ್ಲಿ ಉಳಿದುಕೊಂಡಿದ್ದ. ಸುಮಾರು ನಾಲ್ಕೈದು ಗಂಟೆಗಳ ಕಾಲ ಅಲ್ಲೇ ಇದ್ದು, ವಿಡಿಯೊ ಮಾಡಿಕೊಂಡು ಬಂದಿದ್ದ.

ಇದನ್ನೂ ಓದಿ | Bengaluru News: ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್‌ ಸೇವೆ ಆರಂಭ

ಎಲ್ಲಾ ಅಧಿಕಾರಿ, ಸಿಬ್ಬಂದಿ ಕಣ್ತಪ್ಪಿಸಿ ಏರ್ಪೋರ್ಟ್ ಪ್ರವೇಶ ಮಾಡಿದ್ದಾಗಿ ವಿಡಿಯೋ ಮಾಡಿದ್ದರಿಂದ ವಿಕಾಸ್‌ನನ್ನು ಏರ್ಪೋರ್ಟ್ ಠಾಣೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version