ಉಡುಪಿ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಮೇಲೆ ಗುಂಪು ಹಲ್ಲೆ ಮಾಡಿರುವ ಘಟನೆ (Assault Case) ತಾಲೂಕಿನ ಮಣಿಪಾಲದ ಸರಳಬೆಟ್ಟುವಿನಲ್ಲಿ ನಡೆದಿದೆ. ವಿದ್ಯಾರ್ಥಿಯನ್ನು ಬೆನ್ನಟ್ಟಿ ಹೋಗಿರುವ ಪುಂಡರು, ಅಪಾರ್ಟ್‌ಮೆಂಟ್‌ಗೆ ನುಗ್ಗಿ ಯದ್ವಾತದ್ವಾ ಥಳಿಸಿದ್ದಾರೆ.
ಮಣಿಪಾಲದ ಎಂಐಟಿಯ ಬಿ.ಟೆಕ್ ವಿದ್ಯಾರ್ಥಿ ಅಭಿಷೇಕ್ (23) ಹಲ್ಲೆಗೊಳಗಾದವರು. ಮಣಿಪಾಲದ ಸರಳಬೆಟ್ಟುವಿನ ಅಪಾರ್ಟ್‌ಮೆಂಟ್ ಘಟನೆ ನಡೆದಿದೆ. ಆಟೋದಲ್ಲಿ ಬಂದಿದ್ದ ವಿದ್ಯಾರ್ಥಿಯನ್ನು ಬೆನ್ನಟ್ಟಿದ ಸುಮಾರು 5-6 ಮಂದಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತನ್ನ ರೂಮ್‌ನೊಳಗೆ ಹೋಗುವ ಮುನ್ನವೇ ಅಭಿಷೇಕ್ ಮೇಲೆ ದಾಳಿ ನಡೆಸಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೀಟರ್ ಬಡ್ಡಿ ಕಿರುಕುಳ; ನೇಣು ಬಿಗಿದುಕೊಂಡ ಎಲ್‌ಎಲ್‌ಬಿ ವಿದ್ಯಾರ್ಥಿನಿ
ತುಮಕೂರು: ನಿನ್ನ ಮಗಳನ್ನು ಯಾರಿಗಾದರೂ ತಲೆ ಹಿಡಿದು ಬಡ್ಡಿ ಹಣ ತಂದುಕೊಂಡು ಎಂದು ಅಮ್ಮನಿಗೆ ಬೈದಿದ್ದಕ್ಕೆ ಮನನೊಂದ ಎಲ್‌ಎಲ್‌ಬಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು (Self Harming) ಮೃತಪಟ್ಟಿದ್ದಾಳೆ. ಕೆ.ಜಿ ಚೈತ್ರಾ (20) ಮೃತ ದುರ್ದೈವಿ. ತುಮಕೂರಿನ ಕುಣಿಗಲ್ ತಾಲೂಕಿನ ಕೋಡಿಹಳ್ಳಿಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಚೈತ್ರಾಳ ತಾಯಿ ಲಲಿತಮ್ಮ ಅದೇ ಗ್ರಾಮದ ಶಾಂತಮ್ಮ ಎಂಬುವವರಿಂದ ವಾರಕ್ಕೆ 10 ಪರ್ಸೆಂಟ್ ಬಡ್ಡಿಯಂತೆ ಸುಮಾರು 18,000 ರೂ. ಕೈ ಸಾಲ ಮಾಡಿಕೊಂಡಿದ್ದರು. ಪ್ರತಿವಾರ 1,800 ರೂಪಾಯಂತೆ ಕಂತಿನ ಮೂಲಕ ಸಾಲದ ಹಣ ಮರು ಪಾವತಿ ಮಾಡುತ್ತಿದ್ದರು.
ಕಳೆದ ವಾರ ಊರ ಹಬ್ಬ ಇದ್ದ ಕಾರಣಕ್ಕೆ ಲಲಿತಮ್ಮ ಒಂದು ವಾರದ ಕಂತಿನ ಹಣ ಪಾವತಿಸುವುದನ್ನು ತಡ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಬಡ್ಡಿ ಕೊಡಲಿಲ್ಲ ಎಂದು ಶಾಂತಮ್ಮ ಸಿಟ್ಟಾಗಿದ್ದರು. ನಿನ್ನೆ ಶನಿವಾರ ಬೆಳಗ್ಗೆ 11 ಗಂಟೆಗೆ ಲಲಿತಮ್ಮರ ಮನೆಯ ಬಳಿ ಬಂದ ಶಾಂತಮ್ಮ ಗಲಾಟೆ ಮಾಡಿ ರಂಪಾಟ ನಡೆಸಿದ್ದರಂತೆ.
ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಣ ಪಾವತಿ ಮಾಡುವಂತೆ ಹೇಳಿದ್ದಾರೆ. ಈ ವೇಳೆ ಶಾಂತಮ್ಮ ಹಾಗೂ ಲಲಿತಮ್ಮರ ನಡುವೆ ಮಾತಿನ ಚಕಮಕಿ ಆಗಿದೆ. ಹಣಕ್ಕಾಗಿ ಪಟ್ಟು ಹಿಡಿದ ಶಾಂತಮ್ಮ ನಿನ್ನ ಮಗಳನ್ನು ತಲೆ ಹಿಡಿದಾದರೂ ಹಣ ತಂದು ಕೊಡು ಎಂದು ನಿಂದಿಸಿದ್ದರಂತೆ. ಈ ಮಧ್ಯೆ ಅಕ್ಕ ಪಕ್ಕದ ಮನೆಯವರು ಜಗಳ ಬಿಡಿಸಿ, ಇನ್ನೆರಡು ದಿನಗಳಲ್ಲಿ ಬಡ್ಡಿ ಹಣ ಪಾವತಿ ಮಾಡುತ್ತಾರೆ ಎಂದು ಹೇಳಿ ಕಳಿಸಿದ್ದಾರೆ.
ಈ ಗಲಾಟೆ ನಡೆದಾಗ ಮನೆಯಲ್ಲೇ ಇದ್ದ ಚೈತ್ರಾ ಮನನೊಂದಿದ್ದಾಳೆ. ಸ್ನಾನದ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ನಾನಕ್ಕೆ ಹೋದ ಮಗಳು ಗಂಟೆ ಕಳೆದರು ಬಾರದ ಕಾರಣ ಬಾಗಿಲು ಹೊಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ | Murder case : ಚಿಕ್ಕಬಳ್ಳಾಪುರದಲ್ಲಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ
ಸದ್ಯ ಈ ಸಂಬಂಧ ಮೃತ ಕುಟುಂಬಸ್ಥರು ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಾಂತಮ್ಮನ ಮಾತಿನಿಂದಲೇ ನೊಂದು ಮಗಳು ನೇಣು ಬಿಗಿದುಕೊಂಡಳು ಎಂದು ಆರೋಪಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ