ಬೆಂಗಳೂರು: ಪಾರ್ಕಿಂಗ್ ವಿಚಾರಕ್ಕೆ ಟೆಕ್ಕಿ ದಂಪತಿ ಮೇಲೆ ಹಲ್ಲೆ (Assault Case) ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ದೊಡ್ಡನೆಕ್ಕುಂದಿ ಬಳಿ ನಡೆದಿದೆ. ಖಾಲಿ ಜಾಗದಲ್ಲಿ ಕಾರು ಪಾರ್ಕಿಂಗ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪಕ್ಕದ ಮನೆಯ ಮಾಲೀಕ ಸೇರಿ ಮೂವರು, ಟೆಕ್ಕಿ ದಂಪತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ರೋಹಿಣಿ ಹಾಗೂ ಸಹಿಷ್ಣು ಹಲ್ಲೆಗೊಳಗಾದ ದಂಪತಿ. ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಟೆಕ್ಕಿ ದಂಪತಿ ಮೇಲೆ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತನೆ ಮಾಡಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮನೆ ಪಕ್ಕದ ಖಾಲಿ ಜಾಗದಲ್ಲಿ ಪ್ರತಿನಿತ್ಯ ಹಲವರು ಕಾರು ನಿಲ್ಲಿಸುತ್ತಿದ್ದರು. ನೋ ಪಾರ್ಕಿಂಗ್ ಬೋರ್ಡ್ ಇಲ್ಲದ ಕಾರಣ ಟೆಕ್ಕಿ ದಂಪತಿ ಕೂಡ ಅಲ್ಲೇ ಕಾರು ನಿಲ್ಲಿಸುತ್ತಿದ್ದರು. ಆದರೆ, ಈ ಬಗ್ಗೆ ಪಕ್ಕದ ಮನೆ ಮಾಲೀಕ ಅನಂತ ಮೂರ್ತಿ ಎಂಬಾತ ಜಗಳ ತೆಗೆದು, ಯುವಕನ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಅನಂತಮೂರ್ತಿ, ಆತನ ಪತ್ನಿ, ಪ್ರಶಾಂತ್ ಎಂಬುವವರು ಸೇರಿ ಯುವ ದಂಪತಿ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ | Assault Case : ಮೊಬೈಲ್ ಶಾಪ್‌ನಲ್ಲಿ ಭಜನೆ ಹಾಡು ಹಾಕಿದ್ದಕ್ಕೆ ಕಿರಿಕ್; ಯುವಕನ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದ ಪುಂಡರು
ಯವ ದಂಪತಿ ಕಾರು ಪಾರ್ಕಿಂಗ್ ಮಾಡಿದ್ದಾಗ ಕಾರಿನ ಮೇಲೆ, ಅನಂತಮೂರ್ತಿ ಕುಟುಂಬಸ್ಥರು ಉಗುಳಿ, ಮಣ್ಣು ಹಾಕಿದ್ದರು. ಅಷ್ಟೇ ಅಲ್ಲದೆ ಕಾರಿನ ಚಕ್ರದ ಗಾಳಿ ಕೂಡ ತೆಗೆದು ತೊಂದರೆ ಕೊಟ್ಟಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಯುವಕ ದಂಪತಿ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆ. ನಂತರ ದಂಪತಿ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸುಲ್ತಾನ್ ಪಾಳ್ಯದಲ್ಲಿ ಮಚ್ಚು ಲಾಂಗ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ಬೆಂಗಳೂರು: ಬೆಂಗಳೂರಿನ ಬೀದಿಗಳಲ್ಲಿ ಮಚ್ಚು- ಲಾಂಗ್‌ಗಳನ್ನು ಬೀಸಿ ಅಟ್ಟಹಾಸ ಮೆರೆಯುವ ಪುಂಡಾಟಿಕೆಯ ಘಟನೆಗಳು (rowdies in bengaluru) ಹೆಚ್ಚುತ್ತಿವೆ. ಆರ್.ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ಪುಡಿ ರೌಡಿಗಳು ಹಾಡಹಗಲೇ ಮಾರಕಾಸ್ತ್ರಗಳನ್ನು ಹಿಡಿದು (Bengaluru News) ಓಡಾಡಿದ್ದಾರೆ.
ಏರಿಯಾದಲ್ಲಿ ಹವಾ ಮೈಟೈನ್ ಮಾಡಲು ಬೈಕ್‌ನಲ್ಲಿ ಬಂದ ಯುವಕರು ಕೈಯಲ್ಲಿ ಲಾಂಗ್‌ಗಳನ್ನು ಹಿಡಿದು ಜನರಿಗೆ ಬೆದರಿಸಿದ್ದಾರೆ. ಪುಡಿರೌಡಿಗಳ ಆರ್ಭಟವು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೊಹಮದ್ ಫರನ್, ಅದ್ನಾನ್ ಶರೀಫ್, ಅಬ್ದುಲ್ ರಿಯಾನ್ ಎಂಬ ಪುಂಡರ ಗ್ಯಾಂಗ್ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಮಚ್ಚು ಹಿಡಿದು ಕೂಗಾಡಿದ್ದಾರೆ.
ರಸ್ತೆ ಬದಿಯಲ್ಲಿ ನಿಂತಿದ್ದ ಜನರಿಗೆ ಬೈಕ್‌ನಲ್ಲಿ ವ್ಹೀಲಿಂಗ್ ಮಾಡಿ ಲಾಂಗ್ ತೋರಿಸಿ ದಾಂಧಲೆ ನಡೆಸಿದ್ದಾರೆ. ಜತೆಗೆ ಎದುರಿಗೆ ಬರುವ ಕಾರು, ಬೈಕ್ ಸವಾರರಿಗೆ ತಮ್ಮ ಬೈಕ್‌ನಿಂದ ಡಿಕ್ಕಿ ಹೊಡೆಯುವಂತೆ ಹೆದರಿಸುವುದು ಮಾಡಿದ್ದಾರೆ.
ಸದ್ಯ ಪುಡಿ ರೌಡಿಗಳ ವಿರುದ್ಧ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ವಿನೋದ್ ನಾಯಕ್ ತನಿಖೆಯನ್ನು ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದರಿಂದ ಹೆಣ್ಮಕ್ಕಳು ನಿರ್ಭೀತಿಯಾಗಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರು ಕೂಡಲೇ ಪುಂಡರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.