ಹಾಸನ: ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ನಡೆದಿದ್ದು ಶುಲ್ಕ ವಸೂಲಿಗಾರರು ರಕ್ತ ಬರುವಂತೆ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿರುವ (Assault Case) ಆರೋಪವೊಂದು ಕೇಳಿ ಬಂದಿದೆ. ಹಾಸನದ ಬೇಲೂರು ಪಟ್ಟಣದ ಚನ್ನಕೇಶವ ಸ್ವಾಮಿ ದೇವಾಯದ ಆವರಣದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆದಿದೆ.
ದಾವಣಗೆರೆ ಮೂಲದ ವೀಣಾ ಬಸವರಾಜು ಹಲ್ಲೆಗೊಳಗಾದವರು. ಐತಿಹಾಸಿಕ ಶ್ರೀ ಚನ್ನಕೇಶವ ದೇವಾಲಯ ವೀಕ್ಷಣೆಗೆ ಕುಟುಂಬ ಸಮೇತರಾಗಿ ವೀಣಾ ಬಂದಿದ್ದರು. ಈ ವೇಳೆ ವೀಣಾ ಪುತ್ರ ವಾಹನ ಪಾರ್ಕಿಂಗ್ ಮಾಡುತ್ತಿದ್ದಾಗ ಶುಲ್ಕ ವಸೂಲಿ ಮಾಡುವ ವ್ಯಕ್ತಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಜಗಳ ಬಿಡಿಸಲು ಮುಂದಾದ ವೀಣಾ ಅವರೊಟ್ಟಿಗೆ ಕ್ಯಾತೆ ತೆಗೆದಿದ್ದು, ರಭಸವಾಗಿ ತಳ್ಳಿದ್ದಾರೆ. ಪರಿಣಾಮ ಮುಖಕ್ಕೆ ತೀವ್ರ ಗಾಯವಾಗಿದೆ. ರಕ್ತ ಬರುವ ರೀತಿ ಹಲ್ಲೆ ಮಾಡಿರುವ ಫೋಟೊ ವೈರಲ್ ಆಗಿದೆ.
ಕೂಡಲೇ ಅಲ್ಲಿದ್ದವರು ವೀಣಾ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ವೀಣಾ ಮುಖಕ್ಕೆ ಹೊಲಿಗೆ ಹಾಕಿಸಿದ್ದಾರೆ. ಈ ಎಲ್ಲ ಫೋಟೊವನ್ನು ವೀಣಾ ಅವರು ಸೋಶಿಯಲ್ ಮೀಡಿಯಾದಲ್ಲಿ ಅಪಲೋಡ್ ಮಾಡಿದ್ದಾರೆ. ವಿಶ್ವ ಪರಂಪರೆ ಪಟ್ಟಿಗೆ ಸೇರಿರುವ ದೇವಾಲಯದಲ್ಲಿ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಇಲ್ಲದಿರುವುದು ವಿಪರ್ಯಾಸ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: Road Accident : ಯಮಸ್ವರೂಪಿ ಟಿಪ್ಪರ್ ಲಾರಿ ಹರಿದು ಒಬ್ಬ ಮೃತ್ಯು, ಮತ್ತೊಬ್ಬ ಗಂಭೀರ
ಕಳೆದ ಒಂದು ವಾರದ ಹಿಂದೆ ದೇಗುಲದ ಹಿಂದಿನ ಜಾಗವನ್ನು ಖಾಸಗಿ ವ್ಯಕ್ತಿ ಗುತ್ತಿಗೆ ಪಡೆದಿದ್ದಾನೆ. ದೇಗುಲದ ಹಿಂಭಾಗ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಬೇಕಿರುವ ಗುತ್ತಿಗೆದಾರ, ದೇಗುಲದ ಮುಂಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಪ್ರವಾಸಿಗರ ಮೇಲೆ ಹಲ್ಲೆ ನಡೆದರೂ ಕ್ರಮ ಕೈಗೊಳ್ಳದ ತಾಲ್ಲೂಕು ಆಡಳಿತ, ದೇಗುಲದ ವ್ಯವಸ್ಥಾಪನ ಸಮಿತಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಐತಿಹಾಸಿಕ ಪ್ರವಾಸಿ ತಾಣಗಳಿಗೆ ಯಾವುದೇ ಪ್ರವಾಸಿಗರು ಬಾರದಂತೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇತ್ತ ಹಲ್ಲೆಗೊಳಗಾದವರು ಪೊಲೀಸ್ ಠಾಣೆಗೆ ದೂರು ನೀಡದೆ ತೆರಳುತ್ತಿದ್ದಾರೆ. ದೂರಾದೂರಿನಿಂದ ಬರುವುದರಿಂದ ಪುನಃ ಬೇಲೂರು ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಕಾರಣಕ್ಕೆ ಸುಮ್ಮನಾಗುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ