Site icon Vistara News

ಜಮೀನಿನಲ್ಲಿ ಎಣ್ಣೆ ಪಾರ್ಟಿ ಬೇಡ ಎಂದಿದ್ದಕ್ಕೆ ಮಾಲೀಕನಿಗೆ ಬಿಯರ್‌ ಬಾಟಲಿಯಿಂದ ಹಲ್ಲೆ

Shivamogga galate

ಶಿವಮೊಗ್ಗ : ʻʻನಮ್ಮ ಜಮೀನಿನಲ್ಲಿ ಮದ್ಯಪಾನ ಮಾಡಬೇಡಿ. ಬೇರೆ ಕಡೆ ಹೋಗಿʼʼ ಎಂದಿದ್ದಕ್ಕೆ ಜಮೀನು ಮಾಲೀಕನ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಕೆರೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜೂನ್‌ 7ರಂದು ಕೆರೆಹಳ್ಳಿ ನಿವಾಸಿ ಸತೀಶ್‌ ಎಂಬುವವರು ಮಧ್ಯಾಹ್ನ ತಮ್ಮ ಜಮೀನು ಸರ್ವೇ ನಂ. 24/4 ರಲ್ಲಿ ಶುಂಠಿಯನ್ನು ಬಿತ್ತನೆ ಮಾಡಲು ಪಟ್ಟಿ ಮಾಡುತ್ತಿದ್ದಾಗ ಅವರ ಜಮೀನಿನಲ್ಲಿ ಇಬ್ಬರು ಹುಡುಗರು ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ಜಮೀನು ಮಾಲೀಕ ಸತೀಶ್‌, ʻʻಇಲ್ಲಿ ಮದ್ಯಪಾನ ಮಾಡಬೇಡಿ. ಬೇರೆ ಕಡೆಗೆ ಹೋಗಿʼ ಎಂದು ಹೇಳಿದಾಗ ಯುವಕರು ಆಯ್ತು ಎಂದು ಹೇಳಿದ್ದಾರೆ. ಹೀಗಾಗಿ ಸತೀಶ್‌ ಕೂಡ ತಮ್ಮ ಜಮೀನು ಕೆಲಸವನ್ನು ಮುಂದುವರೆಸಿದ್ದಾರೆ.

ಇದನ್ನು ಓದಿ| ಬಾರ್‌ನಲ್ಲಿ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ

ಆದರೆ, ಪಾನಮತ್ತರಾಗಿದ್ದ ಯುವಕರು ಚೆನ್ನಾಗಿ ಕುಡಿದು ಬಿಯರ್‌ ಬಾಟಲಿಗಳನ್ನು ಜಮೀನಿನಲ್ಲಿ ಒಡೆಯುತ್ತಿರುವುದನ್ನು ಗಮನಿಸಿದ ಸತೀಶ್‌  ಕೂಡಲೇ ಅವರ ಬಳಿ ಹೋಗಿ, ಬಾಟಲಿಗಳನ್ನು ಒಡೆಯಬೇಡಿ, ಜಮೀನಿನಲ್ಲಿ ಗಾಜಿನ ಚೂರು ಬಿದ್ದರೆ, ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಯುವಕ ಸತೀಶ್‌ಗೆ ಬಿಯರ್‌ ಬಾಟಲಿಯಿಂದ ಎಡಗೆನ್ನೆಗೆ ಒಡೆದು ಹಲ್ಲೆ ಮಾಡಿದ್ದಾನೆ. ಈ ವೇಳೆ ಸತೀಶ್‌ ಜೋರಾಗಿ ಕಿರುಚಿಕೊಂಡಿದ್ದಾನೆ. ತಕ್ಷಣವೇ ಸ್ಥಳದಲ್ಲಿದ್ದ ಸಂದೀಪ್‌ ಹಾಗೂ ಮುರುಳೀಧರ್‌ ಎಂಬುವವರು ಬಂದು ಗಲಾಟೆ ಬಿಡಿಸಿದ್ದಾರೆ.

ಗಲಾಟೆ ಬಿಡಿಸಿದ ಬಳಿಕವೂ ಪಾನಮತ್ತರಾಗಿದ್ದ ಯುವಕರು ಸತೀಶ್‌ಗೆ ಬೆದರಿಕೆ ಹಾಕಿದ್ದಲ್ಲದೆ, ಮತ್ತೆ ಸಿಕ್ಕರೆ ಜೀವ ತೆಗೆಯುತ್ತೇವೆ ಎಂದು ಹೆದರಿಸಿದ್ದಾರೆ. ಬಳಿಕ ಗಾಯಗೊಂಡಿದ್ದ ಸತೀಶ್‌ನನ್ನು ಸಂದೀಪ್‌ ರವರು ತಮ್ಮ ಬೈಕ್‌ನಲ್ಲೇ ಚಿಕಿತ್ಸೆಗೆಂದು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನು ಓದಿ|ಹಿರಿಯ ನಟ ಜೈ ಜಗದೀಶ್‌ ವಿರುದ್ಧ ಹಲ್ಲೆ ಆರೋಪ

ಸತೀಶ್‌ ಮೇಲೆ ಹಲ್ಲೆ ಮಾಡಿದ ಯುವಕರು ಶಿವಮೊಗ್ಗ ನಿವಾಸಿಗಳಾಗಿದ್ದು, ಅಮಾನುಲ್ಲಾ ಮತ್ತು ಕಿರಣ್‌ ಎಂದು ಗುರುತಿಸಲಾಗಿದೆ. ಇನ್ನು ಆರೋಪಿಗಳ ವಿರುದ್ಧ ಸತೀಶ್‌ ನೀಡಿದ್ದ ದೂರಿನನ್ವಯ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Exit mobile version