ಬೆಂಗಳೂರು: ಕರ್ನಾಟಕ ವಿಧಾನಮಂಡಲ ವರದಿಗಾರಿಕೆಯನ್ನು ಮಾಡಲು ಖಾಸಗಿ ಸುದ್ದಿ ಸಂಸ್ಥೆಗಳ ಕ್ಯಾಮೆರಾವನ್ನು ನಿರ್ಬಂಧಿಸಿರುವ ವಿಧಾನಸಭೆ ಸಚಿವಾಲಯ ಇದೀಗ ಕಾರ್ಯಕಲಾಪ (Assembly Session) ಚಿತ್ರೀಕರಣಕ್ಕೆ 50 ಲಕ್ಷ ರೂ. ವ್ಯಯಿಸಲು ಮುಂದಾಗಿದೆ.
ವಿಧಾನಮಂಡಲದ ವರದಿಗಾರಿಕೆಗೆ ತನ್ನದೇ ಇತಿಹಾಸವಿದೆ. ಇದೇ ಕಾರಣಕ್ಕೆ ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಪತ್ರಕರ್ತರಿಗೇ ಪ್ರತ್ಯೇಕ ಆಸನ ವ್ಯವಸ್ಥೆಯೂ ಇದೆ. ಇತ್ತೀಚಿನ ದಶಕದಲ್ಲಿ ಖಾಸಗಿ ಎಲೆಕ್ಟ್ರಾನಿಕ್ ಮಾಧ್ಯಮಗಳು ವಿಧಾನಸಭೆ ಕಾರ್ಯಕಲಾಪಗಳ ಜತೆಗೆ ವಿಧಾನಸಭೆಯಲ್ಲಿ ಸದಸ್ಯರ ಹಾವಭಾವಗಳನ್ನೂ ಚಿತ್ರೀಕರಿಸಿದ್ದವು.
ಸದನದಲ್ಲಿ ಇಂತಹ ಚಟುವಟಿಕೆಗಳನ್ನು ಚಿತ್ರೀಕರಿಸಿ ಜನರ ಮುಂದಿಟ್ಟ ನಂತರದಲ್ಲಿ, ಖಾಸಗಿ ಸಂಸ್ಥೆಗಳ ಕ್ಯಾಮೆರಾಗಳಿಗೆ ನಿರ್ಬಂಧವನ್ನು ವಿಧಾನಸಭೆ ಸಚಿವಾಲಯ ವಿಧಿಸಿದೆ. ಆದರೆ ಸದನದ ಸಂಪೂರ್ಣ ಚಿತ್ರೀಕರಣವನ್ನು ನಡೆಸಿ ಅದರ ಫೀಡ್ ಅನ್ನು ಖಾಸಗಿ ಸುದ್ದಿ ಚಾನೆಲ್‌ಗಳಿಗೆ ಹಾಗೂ ಸಾರ್ಜನಿಕರಿಗೆ ನೀಡುವ ಕಾರ್ಯವನ್ನು ಸರ್ಕಾರಿ ಸ್ವಾಮ್ಯದ ದೂರದರ್ಶನ ವಾಹಿನಿ ನಡೆಸುತ್ತಿತ್ತು.
ಆದರೆ ಈ ಬಾರಿ ವಿಧಾನಸಭೆ ಚಿತ್ರೀಕರಣ ಹಾಗೂ ಲೈವ್ ಫೀಡ್ ಅನ್ನು ನೀಡುವ ಕಾರ್ಯಕ್ಕೆ ಖಾಸಗಿ ಸಂಸ್ಥೆಯನ್ನು ಗೊತ್ತುಪಡಿಸಲಾಗಿದೆ. ಸುಮಾರು ಹತ್ತು ದಿನಗಳು ನಡೆಯುವ ಪ್ರಸಕ್ತ ಅಧೀವೇಶನವನ್ನು ಚಿತ್ರೀಕರಿಸಲು ಖಾಸಗಿ ಕಂಪನಿಯೊಂದಕ್ಕೆ ಬರೊಬ್ಬರಿ 50 ಲಕ್ಷ ರೂ.ಗೆ ಗುತ್ತಿಗೆ ನೀಡಲಾಗಿದೆ ಎಂದು ʼವಿಸ್ತಾರ ನ್ಯೂಸ್ʼಗೆ ತಿಳಿದುಬಂದಿದೆ.
ಯತ್ನಾಳ್ ಖಂಡನೆ
ಖಾಸಗಿ ಸಂಸ್ಥೆಗೆ ವಿಧಾನಮಂಡಲ ಚಿತ್ರೀಕರಣಕ್ಕೆ ಹಣ ವೆಚ್ಚ ಮಾಡುತ್ತಿರುವುದರ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಈ ಕುರಿತು ವಿಸ್ತಾರ ನ್ಯೂಸ್ ವರದಿಯನ್ನು ಉಲ್ಲೇಖಿಸಿರುವ ಯತ್ನಾಳ್, ವಿಧಾನಸಭಾ ಕಲಾಪಗಳ ಪ್ರಸಾರ ಮಾಡಲು ಖಾಸಗಿ ವಾಹಿನಿಯವರಿಗೆ 10ದಿನಕ್ಕೆ 50ಲಕ್ಷ ರೂಗಳಿಗೆ ವಿಧಾನಸಭಾ ಸಚಿವಾಲಯ ಗುತ್ತಿಗೆ ನೀಡಿದೆ. ಹಿಂದೆ 2013ರಲ್ಲಿ ಸಿದ್ದರಾಮಯ್ಯನವರ ಸರ್ಕಾರವಿದ್ದಾಗಲೂ, ನಮ್ಮ ಸರ್ಕಾರವಿದ್ದಾಗಲೂ ಸರ್ಕಾರಿ ಸ್ವಾಮ್ಯದ ಡಿಡಿ ಚಂದನ ಪ್ರಸಾರ ಮಾಡುತ್ತಿತ್ತು. ಈ ಬದಲಾವಣೆಗೆ ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.
ವಿಧಾನಸಭಾ ಕಲಾಪಗಳ ಪ್ರಸಾರ ಮಾಡಲು ಖಾಸಗಿ ವಾಹಿನಿಯವರಿಗೆ 10ದಿನಕ್ಕೆ 50ಲಕ್ಷ ರೂಗಳಿಗೆ ವಿಧಾನಸಭಾ ಸಚಿವಾಲಯ ಗುತ್ತಿಗೆ ನೀಡಿದೆ.
— Basanagouda R Patil (Yatnal) (@BasanagoudaBJP) July 3, 2023
ಹಿಂದೆ 2013ರಲ್ಲಿ ಸಿದ್ದರಾಮಯ್ಯನವರ ಸರ್ಕಾರವಿದ್ದಾಗಲೂ, ನಮ್ಮ ಸರ್ಕಾರವಿದ್ದಾಗಲೂ ಸರ್ಕಾರಿ ಸ್ವಾಮ್ಯದ ಡಿಡಿ ಚಂದನ ಪ್ರಸಾರ ಮಾಡುತ್ತಿತ್ತು.
ಈ ಬದಲಾವಣೆಗೆ ಕಾರಣವೇನು? @VistaraNews… pic.twitter.com/E5XYPEgYzb