ಬೆಂಗಳೂರು: ಹಣಕಾಸಿನ ಸಮಸ್ಯೆಯಿಂದ 2015ರಲ್ಲಿ ಸ್ಥಗಿತ ಮಾಡಲಾಗಿದ್ದ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಪುನರಾರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಖಾಸಗಿ ಸಹಭಾಗಿತ್ವದಲ್ಲಿ ಮೈಸೂರು ಪೇಪರ್ ಮಿಲ್ಸ್ (Assembly Session 2024) ಪುನಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಂಗಳವಾರ ಕಾಂಗ್ರೆಸ್ ಸದಸ್ಯೆ ಬಿಲ್ಕಿಸ್ ಬಾನು ಅವರು ಕೇಳಿದ ಪ್ರಶ್ನೆಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಉತ್ತರ ನೀಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಅಧಿವೇಶನ ಸಮಯದಲ್ಲೂ ಮೈಸೂರು ಕಾಗದ ಕಾರ್ಖಾನೆ ಪುನರಾರಂಭದ ಬಗ್ಗೆ ಸಚಿವರು ಮಾತನಾಡಿದ್ದರು. ಹಣಕಾಸಿನ ಸಮಸ್ಯೆಯಿಂದ ಮೈಸೂರು ಪೇಪರ್ ಮಿಲ್ಸ್ ಅನ್ನು 2015ರಲ್ಲಿ ಸ್ಥಗಿತ ಮಾಡಲಾಗಿತ್ತು. ಜೂನ್ 2023ರ ಅಂತ್ಯಕ್ಕೆ 1,482 ಕೋಟಿ ಸಂಚಿತ ನಷ್ಟ ಆಗಿತ್ತು. ಖಾಸಗಿ ಅವರು ಕಂಪನಿ ಅವರಿಗೂ 3 ಬಾರಿ ಆಹ್ವಾನ ಮಾಡಿದ್ದೇವೆ. ಆದರೂ ಯಾರೂ ಕಾರ್ಖಾನೆ ಪ್ರಾರಂಭಕ್ಕೆ ಮುಂದೆ ಬರಲಿಲ್ಲ ಎಂದು ಮಾಹಿತಿ ನೀಡಿದ್ದರು, ಇದೀಗ ಮತ್ತೊಮ್ಮೆ ಮೈಸೂರು ಪೇಪರ್ ಮಿಲ್ಸ್ ಪುನರಾರಂಭ ಮಾಡುವುದಾಗಿ ಕಲಾಪದಲ್ಲಿ ತಿಳಿಸಿದ್ದಾರೆ.
ಕಾಗದ ಕಾರ್ಖಾನೆಗೆ ನೀಲಗಿರಿ ಅವಶ್ಯಕತೆ ಇದೆ. ಆದರೆ ನಮ್ಮಲ್ಲಿ ನೀಲಗಿರಿ ಬೆಳೆಯಲು ನಿಷೇಧ ಇದೆ. ಹೀಗಾಗಿ ಖಾಸಗಿ ಅವರು ಮುಂದೆ ಬರುತ್ತಿಲ್ಲ. ನಾವು ಕೂಡ ಮೈಸೂರು ಕಾಗದ ಕಾರ್ಖಾನೆ ಪ್ರಾರಂಭ ಮಾಡಲು ಉತ್ಸುಕರಾಗಿದ್ದೇವೆ. ಅರಣ್ಯ ಇಲಾಖೆಯ ತಜ್ಞರ ಸಮಿತಿಯು ನೀಲಗಿರಿ ಬೆಳೆಯಲು ಕಾರ್ಗಾನೆಗೆ ವಿನಾಯಿತಿ ನೀಡುವ ಸಂಬಂಧ ಪರಿಶೀಲಿಸಿ ವರದಿ ನೀಡಬೇಕಿದೆ. ಕಂಪನಿಯ ಸಾಲ, ಬಾಕಿ ಕುರಿತು ಆರ್ಥಿಕ ಇಲಾಖೆ ಜೊತೆ ಸಮಾಲೋಚನೆ ಮಾಡಲಾಗುತ್ತಿದೆ. ಇವೆರಡೂ ವಿಷಯಗಳ ಬಗ್ಗೆ ನಿರ್ಧಾರ ಆದ ಮೇಲೆ ಕಾರ್ಖಾನೆ ಪ್ರಾರಂಭದ ಬಗ್ಗೆ ಕ್ರಮವಹಿಸುತ್ತೇವೆ ಎಂದು ಈ ಹಿಂದೆ ಸಚಿವರು ಭರವಸೆ ನೀಡಿದ್ದರು.
ಸರ್ಕಾರದಿಂದ ಯಾವುದೇ ಬೃಹತ್ ಕೈಗಾರಿಕೆ ಪ್ರಾರಂಭಿಸುವುದಿಲ್ಲ
ರಾಜ್ಯದಲ್ಲಿ ಹೊಸ ಕೈಗಾರಿಕೆ, ಉದ್ಯೋಗ ಸೃಷ್ಟಿ ಕುರಿತು ಪ್ರಕಾಶ್ ರಾಥೋಡ್ ಪ್ರಶ್ನೆಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಉತ್ತರಿಸಿ, ಸರ್ಕಾರದಿಂದ ಯಾವುದೇ ಬೃಹತ್ ಕೈಗಾರಿಕೆ ಪ್ರಾರಂಭಿಸುವುದಿಲ್ಲ. ಕಳೆದ ಸಾಲಿನಲ್ಲಿ 591 ಕೋಟಿ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಂದ 1,56,989 ಉದ್ಯೋಗ ಸೃಷ್ಟಿಯಾಗಲಿದೆ. ಈ ಯೋಜನೆಗಳ ಅನುಷ್ಠಾನಕ್ಕೆ 3-4 ವರ್ಷ ಬೇಕಾಗುತ್ತದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕಕ್ಕೆ ಯಾವುದೇ ಕೈಗಾರಿಕೆಗಳನ್ನ ತರುತ್ತಿಲ್ಲ ಎಂಬ ರಾಥೋಡ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹಲವರು ಹೇಳುತ್ತಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಬೇಕು, ಅದು ಸುಲಭ ಇಲ್ಲ. ಕೇಂದ್ರ ಸರ್ಕಾರ ಏನಾದರೂ ಸಹಕಾರ ನೀಡಿದರೆ ಕೈಗಾರಿಕೆಗಳು ತರಬಹುದು. ಸಿ.ಟಿ. ರವಿಯವರು ಸಹಕಾರ ಕೊಟ್ಟರೆ ಮಾಡಬಹುದು. ಕುಮಾರ ಸ್ವಾಮಿಯವರು ಕೇಂದ್ರ ಮಂತ್ರಿಯಾಗಿದ್ದಾರೆ. ಅವರಿಗೆ ಮನವಿ ಮಾಡಿದ್ದೇವೆ ಎಂದರು.
ಇದನ್ನೂ ಓದಿ | Karnataka Assembly Live: ಡಿಸಿಎಂ ಡಿಕೆ ಶಿವಕುಮಾರ್- ಅಶ್ವಥ್ ನಾರಾಯಣ್ ವಾಗ್ಯುದ್ಧ; ಗದ್ದಲ
ತುಮಕೂರು- ಚಿತ್ರದುರ್ಗ ನಡುವೆ ಹೊಸ ಏರ್‌ಪೋರ್ಟ್ ಕುರಿತು ಬಿಜೆಪಿಯ ನವೀನ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಯಾವುದೇ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಹೇಳಿದರು.