ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Assembly Session) ವಿಧೇಯಕ ಪ್ರತಿಯನ್ನು ಹರಿದು ಸ್ಪೀಕರ್ ಮುಖಕ್ಕೆ ಎಸೆದಿದ್ದ ಬಿಜೆಪಿಯ 10 ಸದಸ್ಯರನ್ನು ಅಮಾನತು (BJP members suspended) ಮಾಡಿದ್ದರ ಬಗ್ಗೆ ಬಿಜೆಪಿ ಕೆಂಡಾಮಂಡಲವಾಗಿದೆ. ಈ ಕ್ರಮದ ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ (BJP and JDS members walkout) ಮಾಡಿ ಹೊರಬಂದಿದ್ದಾರೆ. ಅಲ್ಲದೆ, ಸ್ಪೀಕರ್ ಕಚೇರಿ ಹಾಗೂ ವಿಧಾನಸೌಧದ ಪಶ್ಚಿಮ ದ್ವಾರದ ಮೆಟ್ಟಿಲುಗಳ ಮೇಲೆ ಬಿಜೆಪಿ, ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಲು ಬಿಜೆಪಿ ಶಾಸಕರು ನಿರ್ಧಾರ ಮಾಡಿದ್ದಾರೆ. ಅಮಾನತು ಹಿನ್ನೆಲೆಯಲ್ಲಿ ಸ್ಪೀಕರ್ ಹಾಗೂ ಸರ್ಕಾರದ ವಿರುದ್ಧ ದೂರು ನೀಡಲಿದ್ದಾರೆ. ಇನ್ನು ಬಿಜೆಪಿ ಸದಸ್ಯರ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಬೆಂಬಲ ಸೂಚಿಸಿದ್ದಾರೆ. ಬಿಜೆಪಿಯವರು ನಾವು ಸೇರಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದೊಂದು ಕರಾಳ ದಿನ: ಬಸವರಾಜ ಬೊಮ್ಮಾಯಿ
ರಾಜ್ಯ ಸರ್ಕಾರ ಸರ್ವಾಧಿಕಾರಿ ಹಿಟ್ಲರ್ ರೀತಿ ವರ್ತಿಸುತ್ತಿದ್ದು, ಸ್ಪೀಕರ್ ಕುರ್ಚಿಯನ್ನೂ ದುರ್ಬಳಕೆ ಮಾಡಿಕೊಂಡು ಬಿಜೆಪಿ ಸದಸ್ಯರನ್ನು ಅಮಾನತು ಮಾಡಿದ್ದಾರೆ. ಇದೊಂದು ಕರಾಳ ದಿನವಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ದಮನಕ್ಕೆ ಮುಂದಾದ ಕಾಂಗ್ರೆಸ್: ಬಸವರಾಜ ಬೊಮ್ಮಾಯಿ
ಇದೇ ಜುಲೈ 17, 18ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ರಾಜಕೀಯ ಸಭೆಗೆ ಪ್ರಿನ್ಸಿಪಲ್ ಸೆಕ್ರೆಟರಿ ಮಟ್ಟದ ಅಧಿಕಾರಿಗಳನ್ನು ಗುಮಾಸ್ತರಂತೆ ಬಳಕೆ ಮಾಡಿಕೊಂಡಿದ್ದಾರೆ. ಇದು ಖಂಡನೀಯ ಹಾಗೂ ಅಧಿಕಾರ ದುರುಪಯೋಗ ಆಗಿದೆ. ಇದನ್ನು ನಾವು ಪ್ರಶ್ನೆ ಮಾಡಿದರೆ ದಮನ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Ex CM Basavaraj Bommai) ಹೇಳಿಕೆ ನೀಡಿದ್ದಾರೆ.
ಐಎಎಸ್ ಅಧಿಕಾರಿಗಳನ್ನು ಈ ರೀತಿ ಬಳಸಿಕೊಂಡಿರುವುದು ಅಕ್ಷಮ್ಯ. ಇಂಥವರನ್ನು ರಾಜ್ಯ ಅಭಿವೃದ್ಧಿ ಮಾಡಲು ಜನ ಆರಿಸಿ ಕಳಿಸಿದ್ದಾರೆ. ಹಿಂದೆಂದೂ ನಡೆಯದ ರೀತಿಯಲ್ಲಿ ಸೇವಕರಂತೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಲಾಗಿದೆ. ಪ್ರೊಟೋಕಾಲ್ ಅಧಿಕಾರಿಗಳನ್ನು ಬಿಟ್ಟು ಇವರನ್ನು ಸ್ವಾಗತ ಕೋರಲು ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಕೊಲೆಗಳಾಗುತ್ತಿವೆ. ಆ ಬಗ್ಗೆ ಗಮನ ಇಲ್ಲ. ಇದನ್ನೆಲ್ಲ ಬಿಟ್ಟು ರಾಜಕೀಯ ವ್ಯಕ್ತಿಗಳಿಗೆ ರಾಜಮರ್ಯಾದೆ ಕೊಟ್ಟಿರೋದು ಖಂಡನೀಯ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದೆದುರು ಬಿಜೆಪಿ ಪ್ರತಿಭಟನೆ
ಕಾಂಗ್ರೆಸ್‌ನದ್ದು ದಮನಕಾರಿ ನೀತಿ
ಕಾಂಗ್ರೆಸ್ ಸೇಡಿನ ರಾಜಕೀಯವನ್ನು ಮಾಡುತ್ತಿದೆ. ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಸ್ಪೀಕರ್ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನಾವು ನ್ಯಾಯವನ್ನು ಕೇಳಿದೆವು, ಆದರೆ ನ್ಯಾಯ ಕೊಡಲಿಲ್ಲ. ಕಾಂಗ್ರೆಸ್ ಪಕ್ಷದ ಔತಣಕೂಟಕ್ಕೆ ಸ್ಪೀಕರ್ ಹೋಗಿ ಬಂದಿದ್ದಾರೆ. ಸ್ಪೀಕರ್ ಸ್ಥಾನದ ಗೌರವ ಹರಾಜಾಗಿದೆ. ಅವಿಶ್ವಾಸಕ್ಕೆ ಜೆಡಿಎಸ್ ಬೆಂಬಲ ಕೊಟ್ಟಿದ್ದಾರೆ. ಸ್ಪೀಕರ್ ವಿರುದ್ಧ ಅವಿಶ್ವಾಸ ಮಂಡನೆಗೆ ಮುಂದಾಗಿದ್ದೇವೆ. ನಮ್ಮ ಸದಸ್ಯರಿಗೆ ಶಿಕ್ಷೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಸರ್ವಾಧಿಕಾರಿ, ಹಿಟ್ಲರ್ ಧೋರಣೆ ಅನುಸರಿಸಿದೆ. ನಮ್ಮ ಶಾಸಕರ ಅಮಾನತು ಖಂಡನೀಯ ಎಂದು ಬಸವರಾಜ ಬೊಮ್ಮಾಯಿ ಗುಡುಗಿದರು.
ಇದನ್ನೂ ಓದಿ: Assembly Session : 5 ವಿಧೇಯಕ ಪಾಸ್; ಬಿಲ್ ಹರಿದು ಸ್ಪೀಕರ್ ಮುಖಕ್ಕೆಸೆದ ಬಿಜೆಪಿ-ಜೆಡಿಎಸ್!
ರುದ್ರಪ್ಪ ಲಮಾಣಿಗೆ ಕಾಂಗ್ರೆಸ್‌ನಿಂದ ಅವಮಾನ
ಕಾಂಗ್ರೆಸ್‌ನವರು ಸ್ಪೀಕರ್ ಮೈಕ್ ಕಿತ್ತು ಎಸೆದಿದ್ದರು. ಸಿದ್ದರಾಮಯ್ಯನವರು ವಿಧಾನಸಭೆ ಬಾಗಿಲನ್ನು ಒದ್ದಿದ್ದರು. ಆಗ ಇವರನ್ನು ಅಮಾನತು ಮಾಡಿರಲಿಲ್ಲ. ಈಗ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ವಿಪಕ್ಷಗಳನ್ನು ಹತ್ತಿಕ್ಕಲು ದಮನಕಾರಿ ನೀತಿ ಅನುಸರಿಸಿದ್ದು, ಜನ ತಕ್ಕಪಾಠ ಕಲಿಸುತ್ತಾರೆ. ಸ್ಪೀಕರ್ ಇದನ್ನು ಎದುರಿಸಬೇಕಿತ್ತು. ಆದರೆ, ಡೆಪ್ಯುಟಿ ಸ್ಪೀಕರ್ ಅವರನ್ನು ಕೂರಿಸಿ ಎದ್ದು ಹೋಗಿದ್ದಾರೆ. ರುದ್ರಪ್ಪ ಲಮಾಣಿಗೆ ಅವಮಾನ ಆಗಿದ್ದರೆ, ಅದಕ್ಕೆ ಕಾಂಗ್ರೆಸ್ ಕಾರಣ. ಅವರನ್ನು ಮಂತ್ರಿ ಮಾಡಬೇಕಿತ್ತು. ಮಾಡದೇ ಅವಮಾನ ಮಾಡಿದ್ದಾರೆ. ನಮ್ಮ ಶಾಸಕರನ್ನ ಹೊರಗೆ ಹಾಕಿದರೆ, ನಾವೂ ಕೂಡ ಪ್ರೊಟೆಸ್ಟ್ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಗುಡುಗಿದರು.