Site icon Vistara News

Assembly session : ರಾಜಭವನ ತಲುಪಿದ ಅಮಾನತು ಪಾಲಿಟಿಕ್ಸ್‌; ಸರ್ಕಾರ, ಸ್ಪೀಕರ್‌ ವಿರುದ್ಧ ಬಿಜೆಪಿ ದೂರು

BJP Complaints Governor

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ (Assembly session) ಬಿಜೆಪಿಯ ಹತ್ತು ಶಾಸಕರನ್ನು ಅಮಾನತು (BJP MLAs Suspended) ಮಾಡಿರುವ ಸ್ಪೀಕರ್ ನಡೆ ಖಂಡಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ನೇತೃತ್ವದಲ್ಲಿ ಬಿಜೆಪಿ ಸದಸ್ಯರು ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ, ಜೆಡಿಎಸ್ ಸದಸ್ಯರ ಜೊತೆ ಸೇರಿ ರಾಜ್ಯಪಾಲರಿಗೆ (Complaint to Governor) ದೂರು ಸಲ್ಲಿಸಿದರು.

ರಾಜ್ಯಪಾಲರ ಭೇಟಿಯ ನಂತರ ಮಾಧ್ಯಮಗಳಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜೈನ ಮುನಿಗಳ ಹತ್ಯೆಯಿಂದ ಹಿಡಿದು ರಾಜ್ಯದಲ್ಲಿ ನಿರಂತರ ಕೊಲೆ ನಡೆಯುತ್ತಿವೆ. ಬರಗಾಲ ಬಿದ್ದಿದೆ. ಮೂರುವರೆ ಸಾವಿರ ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲ. ಇದರ ಬಗ್ಗೆ ಸದನದಲ್ಲಿ ಚೆರ್ಚೆಗೆ ಅವಕಾಶ ಕೊಡಲಿಲ್ಲ. ರಾಜಕೀಯ ಪಕ್ಷದ ಕಾರ್ಯಕ್ರಮಕ್ಕೆ ಬೇರೆ ರಾಜ್ಯಗಳ ನಾಯಕರ ಸ್ವಾಗತಕ್ಕೆ ಐಎಎಸ್ ಅಧಿಕಾರಿಳಗನ್ನು ಕಳುಹಿಸಿದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಪಕ್ಷದ ಹತ್ತು ಜನ ಸದಸ್ಯರನ್ನು ಅಮಾನತು ಮಾಡಿದ್ದಾರೆ. ಇಂತ ಕೆಟ್ಟ ನಿರ್ಧಾರ ಇತಿಹಾಸದಲ್ಲಿ ಆಗಿಲ್ಲ. ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಸ್ಪೀಕರ್ ಹುದ್ದೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿದರು.

ಸ್ಪೀಕರ್‌ ಹುದ್ದೆ ದುರುಪಯೋಗ

ಸದ್ಯ ಸ್ಪೀಕರ್ ಹುದ್ದೆ ದುರುಪಯೋಗ ಆಗುತ್ತಿದೆ‌. ಸ್ಪೀಕರ್ ಅವರು ನಮ್ಮನ್ನು ಕರೆದು ಮಾತನಾಡಿಸಿ, ಸಮಸ್ಯೆ ಬಗೆಹರಿಸಬಹುದಿತ್ತು. ಈ ರೀತಿಯ ಪ್ರಕರಣಗಳು ಹಿಂದೆಯೂ ನಡೆದಿವೆ. ಈ ರೀತಿಯ ತೀರ್ಮಾನ ಯಾರೂ ಮಾಡಿರಲಿಲ್ಲ. ಸ್ಪೀಕರ್ ಆದವರು ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಲ್ಲಿ ಹಾಜರಾಗಬಾರದು ಅಂತ ಪಾಲಿಸಿಕೊಂಡು ಬರಲಾಗಿದೆ. ಇವರು ಕಾಂಗ್ರೆಸ್ ಪಕ್ಷದ ಔತಣಕೂಟಕ್ಕೆ ಹಾಜರಾಗಿ ಊಟ ಮಾಡಿ ಬಂದಿದ್ದಾರೆ. ಅವರ ಮೇಲೆ ವಿಶ್ವಾಸ ಇಲ್ಲ ಅಂತ ನಾವು ಅವಿಶ್ವಾಸ ಮಂಡನೆಗೆ ಅವಕಾಶ ಕೇಳಿದ್ದೇವೆ. ಈ ಸರ್ಕಾರ ತನ್ಬ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದೆ. ಜನರು ಅವರಿಗೆ ಅಧಿಕಾರ ನೀಡಿದ್ದರೆ ಜನರ ಪರವಾಗಿ ಧ್ವನಿ ಎತ್ತಲು ನಮಗೂ ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದರು.

ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆ

ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ. ಅವರ ಬಳಿ ಸಿಕ್ಕಿರುವ ದಾಖಲೆ ನೋಡಿದರೆ ಅವರಿಗೆ ಅಂತಾರಾಷ್ಟ್ರೀಯ ಸಂಪರ್ಕ ಇದೆ. ಹೀಗಾಗಿ ಈ ಪ್ರಕರಣವನ್ನು ಎನ್ಐಎಗೆ ವಹಿಸಬೇಕು ಅಂತ ನಾವು ಆಗ್ರಹಿಸಿದ್ದೇವೆ. ಈ ಎಲ್ಲ ಮಾಹಿತಿಗಳನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಅವರು ಕೇಂದ್ರ ಸರ್ಕಾರಕ್ಕೆ ವರದಿ ಕೊಡುವುದಾಗಿ ಹೇಳಿದ್ದಾರೆ ಎಂದರು.

ನಮ್ಮ ಸದಸ್ಯರನ್ನು ಅಮಾನತು ಮಾಡಿರುವುದರಿಂದ ನಾವು ಸದನವನ್ನು ಬಹಿಷ್ಕರಿಸುತ್ತೇವೆ‌. ಈ ಪ್ರಕರಣವನ್ನು ಜಿಲ್ಲಾ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯಾದ್ಯಂತ ಹೋರಾಟಕ್ಕೆ ಬಿಜೆಪಿ ನಿರ್ಧಾರ

ಈ ನಡುವೆ, 10 ಶಾಸಕರನ್ನು ಅಮಾನತು ಮಾಡಿದ್ದರ ವಿರುದ್ಧ ಶನಿವಾರ ಇಲ್ಲವೇ ಭಾನುವಾರ ರಾಜ್ಯಾದ್ಯಂತ ಹೋರಾಟವನ್ನು ನಡೆಸುವುದಾಗಿ ಬಿಜೆಪಿ ಪ್ರಕಟಿಸಿದೆ.

2010ರಲ್ಲಿ ಉಚ್ಛಾಟಿತ ಶಾಸಕರನ್ನು ಒಳಗೆ ಬಿಡಲಿಲ್ಲ ಎಂಬ ಕಾರಣಕ್ಕೆ ಪರಿಷತ್ ಬಾಗಿಲು ಒದ್ದ ಪ್ರಕರಣ, ಉಪಸಭಾಪತಿ ಧರ್ಮೇಗೌಡರನ್ನು ಕುರ್ಚಿಯಿಂದ ಎಳೆದ ಪ್ರಕರಣ, ಈಗ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್‌ ಮೈಕ್ ಕಿತ್ತು ಹಾಕಿದ ಪ್ರಕರಣವನ್ನು ಬಿಜೆಪಿ ಉಲ್ಲೇಖಿಸಿದ್ದು, ಈ ಯಾವ ಸಂದರ್ಭದಲ್ಲಿ ಶಾಸಕರನ್ನು ಅಮಾನತು ಮಾಡಿರಲಿಲ್ಲ ಎಂದರು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: HD Kumaraswamy : ಬಿಜೆಪಿ ಲೆಟರ್‌ಹೆಡ್‌ನಲ್ಲಿ ರಾಜ್ಯಪಾಲರಿಗೆ ದೂರು; ಮೊದಲ ಸಹಿಯೇ ಕುಮಾರಸ್ವಾಮಿ, ಸೇರೇಬಿಟ್ರಾ ಹಾಗಿದ್ರೆ?

Exit mobile version