ವಿಧಾನಸಭೆ: ರಾಜ್ಯ ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳನ್ನು ಸೂಕ್ತ ಅನುಷ್ಠಾನ ಮಾಡುತ್ತಿಲ್ಲ ಹಾಗೂ ಈ ಯೋಜನೆಗಳ ನಂತರ ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಬಿಜೆಪಿ ನಿಲುವಳಿ ಸೂಚನೆ ಮಂಡನೆಗೆ ವಿಧಾನಸಭೆಯಲ್ಲಿ (Assembly Session) ಮಂಗಳವಾರ ಮುಂದಾಗಿದ್ದು ಗದ್ದಲಕ್ಕೆ ಕಾರಣವಾಯಿತು.
ಇನ್ನೂ ಪ್ರತಿಪಕ್ಷ ನಾಯಕನನ್ನು ಬಿಜೆಪಿ ಆಯ್ಕೆ ಮಾಡಿಲ್ಲ. ಹಾಗಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಹಿ ಮಾಡಿದ ಹಾಗೂ ಉಳಿದ ಸದಸ್ಯರು ಒಪ್ಪಿದ ಪತ್ರವನ್ನು ಸ್ಪೀಕರ್ ಕಚೇರಿಗೆ ನೀಡಲಾಗಿತ್ತು. ಬೇಕಾಬಿಟ್ಟಿ ಯೋಜನೆಗಳನ್ನು ಘೋಷಿಸಿದ್ದರಿಂದ ಅದಕ್ಕೆ ಹಣಕಾಸಿನ ಹೊಂದಾಣಿಕೆ ಕುರಿತು ಪ್ರಶ್ನೋತ್ತರ ಹಾಗೂ ಶೂನ್ಯ ವೇಳೆ ನಂತರ ಚರ್ಚೆಗೆ ಅವಕಾಶ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
ಸದನ ಆರಂಭವಾಗುತ್ತಿದ್ದಂತೆಯೇ ನಿಲುವಳೀ ಸೂಚನೆಯ ಕುರಿತು ಪರಿಶೀಲಿಸಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಬಸವರಾಜ ಬೊಮ್ಮಾಯಿ, ಡಾ. ಸಿ.ಎನ್. ಅಶ್ವತ್ಥನಾರಾಯಣ, ಆರ್. ಅಶೋಕ್ ಸೇರಿ ಅನೇಕರು ಸ್ಪೀಕರ್ ಯು.ಟಿ. ಖಾದರ್ ಅವರನ್ನು ಒತ್ತಾಯಿಸಿದರು. ಆದರೆ ಇದಕ್ಕೆ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಯಾಕ್ರಿ ಅಶ್ವತ್ಥನಾರಾಯಣವರೇ, ಅಷ್ಟೊಂದು ಎಮೋಶನಲ್ ಆಗ್ತೀರಿ? ನಿಲುವಳಿಯಲ್ಲಿ ಏನ್ ಹೇಳಿದಾರೆ ಬಿಜೆಪಿಯವರು? ಪ್ರಶ್ನೋತ್ತರ ಹಾಗೂ ಶೂನ್ಯವೇಳೆ ಆದಮೇಲೆ ಪ್ರಸ್ತಾಪ ಮಾಡಲಿಕ್ಕೆ ಅವಕಾಶ ನೀಡಿ ಅಂತ ನೊಟೀಸ್‌ನಲ್ಲಿಯೇ ಹೇಳಿದ್ದಾರೆ. ಮೂರು ವರ್ಷ 10 ತಿಂಗಳು ಅಧಿಕಾರ ಮಾಡಿದವರು ನೀವು.
ಸದನದಲ್ಲಿ ನಾನೂ ಲೀಡರ್ ಆಫ್ ಅಪೋಸಿಷನ್ ಆಗಿದ್ದೆ. ಪ್ರಶ್ನೋತ್ತರ ಕಲಾಪಕ್ಕೂ ಮೊದಲು ನಿಲುವಳಿ ಮಂಡನೆಗೆ ಅವಕಾಶ ಇಲ್ಲ. ನಾವು ಯಾವತ್ತೂ ಪ್ರಶ್ನೋತ್ತರ ಹಾಗೂ ಶೂನ್ಯ ವೇಳೆಗೂ ಮುಂಚೆ ನಿಲುವಳಿ ಮಂಡನೆ ಮಾಡಿಲ್ಲ. ನಾವೇ ಮಾಡಿಕೊಂಡಿರುವ ನಿಯಮಗಳು ಅವು. ಅವರು ಅಧಿಕಾರದಲ್ಲಿ ಇದ್ದಾಗ ಸ್ಪೀಕರ್ ಆದವರು. ಒಂದು ದಿನವೂ ನಮಗೆ ಪ್ರಶ್ನೋತ್ತರಕ್ಕಿಂತ ಮೊದಲು ಅವಕಾಶ ನೀಡಿಲ್ಲ. ಅಂತಹ ಒಂದು ನಿದರ್ಶನ ತೋರಿಸಿಬಿಡಿ ನೋಡೋಣ. ಹಾಗೇನಾದರೂ ಅವಕಾಶ ನೀಡಿದ್ದರೆ ನಾನು ಮಾತೇ ಆಡಲ್ಲ ಕೂತುಬಿಡ್ತೀನಿ. ಈ ಮೊಂಡಾಟ ಬಿಡಿ, ಮೊಂಡಾಟದಿಂದ ಏನೂ ಆಗಲ್ಲ ಎಂದರು.
ಮೊಂಡಾಟ ಪದ ಬಳಕೆಗೆ ಬಿಜೆಪಿ ಸದಸ್ಯರು ಗದ್ದಲ ಮಾಡಿದರು. ಮೊಂಡಾಟ ಅಸಾಂವಿಧಾನಿಕ ಪದವೇ? ಯಾವುದೇ ಪ್ರಶ್ನೆಗೆ ಉತ್ತರ ನೀಡಲು ನಾವು ತಯಾರು. ವಿಪಕ್ಷಗಳ ಮಾತಿಗೆ ಹೆದರಿಕೊಂಡು ಓಡಿ ಹೋಗಲ್ಲ ನಾವು. ನಾನೂ ಕೂಡ ಎಷ್ಟೇ ಗಂಟಲು ಶೋಷಣೆ ಮಾಡಿಕೊಂಡಾಗಲೂ ಅವರ ಕಾಲದಲ್ಲಿ ನನಗೆ ಅವಕಾಶ ನೀಡಿರಲಿಲ್ಲ. ಈಗ ಇವರಿಗೂ ಅವಕಾಶ ನೀಡಬಾರದು. ಪ್ರಶ್ನೋತ್ತರ ಮುಂದುವರಿಸಿ. ಮೊಂಡಾಟ ಪದ ಅಸಾಂವಿಧಾನಿಕ ಎಂದಾದರೆ ನಾನು ವಾಪಸ್ ಪಡೆಯುತ್ತೇನೆ ಎಂದರು.
ಇದನ್ನೂ ಓದಿ: Congress Guarantee: ಮಾಜಿ ಸಿಎಂ ಬೊಮ್ಮಾಯಿಗೆ ಹೊಟ್ಟೆಯಲ್ಲಿ ಬೇನೆ; ಔಷಧಿ ಇಲ್ಲ ಎಂದ ಆರೋಗ್ಯ ಸಚಿವ ಗುಂಡೂರಾವ್!
ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ. ಖಾದರ್, ನಿಮ್ಮ ಅನುಚಿತ ವರ್ತನೆಯನ್ನು ಜನರು ನೋಡುತ್ತಿದ್ದಾರೆ. ಶಾಸಕರ ಪ್ರಶ್ನಾವಳಿಗೆ ಅವಕಾಶ ಕೊಡಿ. ಶಾಸಕರು ಪ್ರಶ್ನೆ ಕೇಳಿದ್ದಾರೆ, ಮಂತ್ರಿಗಳು ಉತ್ತರ ಕೊಡುತ್ತಿದ್ದಾರೆ. ಎಲ್ಲರೂ ಆಸನಕ್ಕೆ ವಾಪಸ್ ಬನ್ನಿ ಎಂದು ಮನವಿ ಮಾಡಿದರು.
ಗ್ಯಾರಂಟಿಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಘೋಷಣೆ ಕೂಗಿದ ಬಿಜೆಪಿ ಶಾಸಕರು ಸ್ಪೀಕರ್ ಆಸನದ ಎದುರು ಧಾವಿಸಿ ಪ್ರತಿಭಟನೆಗೆ ಮುಂದಾದರು. ಕೆಲಹೊತ್ತು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದ ಯು.ಟಿ. ಖಾದರ್, ಸದನವನ್ನು 15 ನಿಮಿಷ ಮುಂದೂಡುವುದಾಗಿ 11.45ರಲ್ಲಿ ತಿಳಿಸಿ ಹೊರನಡೆದರು.