ಬೆಳಗಾವಿ: ವಿರೋಧ ಪಕ್ಷಗಳು (Opposite parties) ಯಾವುದೇ ವಿಚಾರ ಎತ್ತಿದರೂ ಕೂಡ ವಿಧಾನ ಮಂಡಲ ಅಧಿವೇಶನದಲ್ಲಿ (Assembly Session) ಉತ್ತರ ಕೊಡಲು ಸರ್ಕಾರ ಸಿದ್ಧವಿದೆ. ಯಾವುದನ್ನೂ ವಿಳಂಬ ಅಥವಾ ಕಾಲಹರಣ ಮಾಡುವುದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ಅವರು ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇವತ್ತಿನವರೆಗೆಯೂ ಬರಗಾಲದ ಚರ್ಚೆಯಾಯಿತು. ಇಂದು ಅದಕ್ಕೆ ಉತ್ತರ ನೀಡುತ್ತೇವೆ. ಈಗಾಗಲೇ ಪ್ರಸ್ತಾಪವಾಗಿರುವ ಬಗ್ಗೆ ಉತ್ತರ ನೀಡುತ್ತೇವೆ ಎಂದು ಅಧಿವೇಶನಕ್ಕೆ ತೆರಳುವ ಮುನ್ನ ತಿಳಿಸಿದರು.
ಬಿಜೆಪಿಯೊಳಗೆ ಸಮನ್ವಯ ಸಾಧ್ಯವೇ ಇಲ್ಲ
ಬಿಜೆಪಿ ನಾಯಕರ ಮಧ್ಯೆ ಸಮನ್ವಯದ ಕೊರತೆಯಿಂದ ಕಲಾಪದ ಸಮಯ ವ್ಯರ್ಥವಾಗುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಬಿಜೆಪಿಯೊಳಗೆ ಎಂದಿಗೂ ಸಮನ್ವಯ ಇಲ್ಲವೇ ಇಲ್ಲ. ಅವರು ಆಪರೇಷನ್ ಕಮಲದ ಮುಖಾಂತರ ಅಧಿಕಾರಕ್ಕೆ ಬಂದಿದ್ದಾರೆ. ನಂತರ ಜನ ಅವರನ್ನು ತಿರಸ್ಕರಿಸಿದ್ದಾರೆ. ನಂತರ ಸಮನ್ವಯ ಬರಲು ಸಾಧ್ಯವೇ ಇಲ್ಲ. ಅವರಲ್ಲಿ ಎರಡು ಗುಂಪುಗಳಿವೆ ಎಂದು ಸಿದ್ದರಾಮಯ್ಯ ಹೇಳಿದರು.
ಮಹಿಳೆ ಮೇಲೆ ದೌರ್ಜನ್ಯ: ತಪ್ಪಿತಸ್ಥರ ವಿರುದ್ಧ ಕ್ರಮ
ಬೆಳಗಾವಿಯಲ್ಲಿ ಯುವಕನೊಬ್ಬ ಹುಡುಗಿ ಜತೆ ಓಡಿ ಹೋಗಿದ್ದಾನೆ ಎಂಬ ರೋಷಕ್ಕೆ ಆತನ ತಾಯಿಯ ಮೇಲೆ ದೌರ್ಜನ್ಯವೆಸಗಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ ಸಿದ್ದರಾಮಯ್ಯ ಅವರು, ಯಾರು ತಪ್ಪಿತಸ್ಥರೋ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಪಂಚಾಮಸಾಲಿ ನಾಯಕರು ಹಾಗೂ ಸ್ವಾಮೀಜಿಗಳ ಜತೆ ಮಾತು
ಪಂಚಮಸಾಲಿ ನಾಯಕರ ಮನವಿಗೆ ಸ್ಪಂದಿಸಿಲ್ಲ ಎಂಬ ಸ್ವಾಮೀಜಿಗಳ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಡಿಸೆಂಬರ್ 13ರಂದು ವಿಧಾನಸಭೆ ಅಧಿವೇಶನ ಮುಗಿದ ನಂತರ ಅವರೊಂದಿಗೆ ಚರ್ಚೆ ಮಾಡಲಾಗುತ್ತವೆ ಎಂದು ತಿಳಿಸಲಾಗಿದೆ ಎಂದರು. ಬೆಳಗಾವಿಯಲ್ಲೇ ಪಂಚಮಸಾಲಿ ನಾಯಕರು ಹಾಗೂ ಸ್ವಾಮೀಜಿ ಜತೆ ಚರ್ಚಿಸುತ್ತೇನೆ ಎಂದರು.
ಸುವರ್ಣ ಸೌಧದಲ್ಲಿರುವ ಸಾವರ್ಕರ್ ಫೋಟೊ ತೆಗೆಯುವ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ವಿಧಾನಸಭಾಧ್ಯಕ್ಷರಿಗೆ ಸಂಬಂಧಿಸಿದ್ದು ಎಂದರು. ಅವರು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರಿದ್ದಾರೆ ಎಂದರು.
ಇದನ್ನೂ ಓದಿ: Assembly Session : ಭೂಮಿ ಬೆಲೆ ಹೆಚ್ಚಿಸಿದ್ದ ಸರ್ಕಾರದಿಂದ ಮುದ್ರಾಂಕ ಶುಲ್ಕವೂ ಹೆಚ್ಚಳ
ಬಿಜೆಪಿ ಮತ್ತು ಜೆಡಿಎಸ್ ಭ್ರಮಾಲೋಕದಲ್ಲಿದ್ದಾರೆ
ಸರ್ಕಾರ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ಬಿಜೆಪಿ ಮತ್ತು ಜೆಡಿಎಸ್ ನೀರಿನಿಂದ ತೆಗೆದ ಮೀನಿನಂತೆ ವಿಲಿ ವಿಲಿ ಎಂದು ಒದ್ದಾಡುತ್ತಿದ್ದು, ಭ್ರಮಾಲೋಕದಲ್ಲಿದ್ದಾರೆ ಎಂದರು.