ಬೆಂಗಳೂರು: ಸ್ಪೀಕರ್ ಕುರ್ಚಿಯಲ್ಲಿ ಕುಳಿತಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ವಿರೋಧ ಪಕ್ಷಕ್ಕೆ ವಿರೋಧ ಪಕ್ಷದವರಾಗಿ ಮಾತನಾಡಿದ್ದು ಬುಧವಾರ ವಿಧಾನಸಭೆಯಲ್ಲಿ (Assembly Session) ಬಿಜೆಪಿ ಸದಸ್ಯರನ್ನು ಅಚ್ಚರಿಗೊಳಿಸಿತು ಹಾಗೂ ಕೆರಳಿಸಿತು.
ರಾಜ್ಯಪಾಲರ ಭಾಷಣದ ಕುರಿತು ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ ರಮೋದಿಯವರ ಸಾಧನೆ, 2014ರಿಂದ ದೇಶದಲ್ಲಿ ಆಗಿರುವ ಬದಲಾವಣೆಗಳ ಕುರಿತು ಹೆಚ್ಚು ಮಾಹಿತಿ ನೀಡುತ್ತಿದ್ದರು. ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ, ತಾವು ರಾಜ್ಯಪಾಲರ ಭಾಷಣದ ಕುರಿತು ಮಾತನಾಡುತ್ತಿದ್ದೀರೊ ಅಥವಾ ಕೇಂದ್ರ ಸರ್ಕಾರದ ಕುರಿತು ಮಾತನಾಡುತ್ತಿದ್ದೀರೋ ತಿಳಿಯುತ್ತಿಲ್ಲ ಎಂದರು.
ಈ ಸಮಯದಲ್ಲಿ ಬಿಜೆಪಿ ಸದಸ್ಯರು ಎದ್ದುನಿಂತು ಆಕ್ಷೇಪ ವ್ಯಕ್ತಪಡಿಸಿದರು. ಮೊದಲ ಬಾರಿಗೆ ಶಾಸಕರಾಗಿರುವವರಿಗೆ ಮಾತನಾಡಲು ಅವಕಾಶ ನೀಡಿ ಎಂದರು. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಸದಸ್ಯರನ್ನು ಸಮಾಧಾನಪಡಿಸುವುದು ಸಭಾಧ್ಯಕ್ಷರ ಸ್ಥಾನದಲ್ಲಿದ್ದವರು ಮಾಡುವ ಕೆಲಸ. ಆದರೆ ಅಚ್ಚರಿಯೆಂಬಂತೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು, ಕೇಂದ್ರ ಸರ್ಕಾರದ ಬಗ್ಗೆ ಹೇಗೂ ಮಾತನಾಡುತ್ತಿದ್ದೀರ. ಹಾಗೆಯೇ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಎಂದೂ ಹೇಳಿದ್ದರು. ಅದನ್ನು ಏನು ಮಾಡಿದ್ದಾರೆ ಎಂಬ ಕುರಿತೂ ಹೇಳಿಬಿಡಿ ಎಂದರು.
ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಭಾಧ್ಯಕ್ಷ ಸ್ಥಾನದಲ್ಲಿದ್ದೇವೆ ಎನ್ನುವುದನ್ನು ಮರೆತು ಕಾಂಗ್ರೆಸ್ ಸದಸ್ಯರಂತೆ ಮಾತನಾಡುತ್ತಿದ್ದೀರ ಎಂದರು. ಈ ಸಮಯದಲ್ಲಿ ಮಾತು ಮುಂದುವರಿಸಿದ ವಿಜಯೇಂದ್ರ, ಬಜೆಟ್ ಸೇರಿದಂತೆ ಸದನದಲ್ಲಿ ಎಲ್ಲ ಸಮಯದಲ್ಲೂ ಕೇಂದ್ರ ಸರ್ಕಾರವನ್ನು ತೆಗಳುವ ಕೆಲಸ ಆಗುತ್ತಿದೆ. ವಿಪಕ್ಷ ಸದಸ್ಯನಾಗಿ ಹಾಗೂ ಬಿಜೆಪಿಯವನಾಗಿ ಈ ವಿಚಾರವನ್ನು ಹೇಳುವುದು ನನ್ನ ಕರ್ತವ್ಯ ಎಂದು ಮಾತು ಮುಂದುವರಿಸಿದರು.
ಮತ್ತೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು. ಕರೋನ ಮತ್ತು ಉಕ್ರೇನ್, ರಷ್ಯ ಮಹಾಯುದ್ಧದ ನಡುವೆಯೂ ದೇಶಕ್ಕೆ ಯಾವುದೇ ಸಮಸ್ಯೆ ಆಗದಂತೆ ಕರೋನ ವ್ಯಾಕ್ಸಿನೇಷನ್ ಮಾಡಿದರು. ದೇಶದ ರೈತರಿಗೆ ಸಬ್ಸಿಡಿ ದರದಲ್ಲಿ ಯೂರಿಯಾ ಕೊಡ್ತಿದ್ದಾರೆ. ಸ್ವಾತಂತ್ರ್ಯ ಬಂದ 75 ವರ್ಷದಲ್ಲಿ ಅತಿಹೆಚ್ಚು ಕಾಲ ಆಡಳಿತ ಮಾಡಿದ್ದು ಕಾಂಗ್ರೆಸ್. ಆದ್ರೆ ಇನ್ನೂ ಉಚಿತ ಗ್ಯಾರೆಂಟಿ ಕೊಡುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಯಾರು? ಎಂದರು. ಬಗರ್‌ಹುಕ್ಕುಂ ಸಮಸ್ಯೆ ಇನ್ನೂ ಇದೆ. ಮಲೆನಾಡಿನಲ್ಲಿ ಈ ಸಮಸ್ಯೆ ಇದ್ದು, ಮೂರು ತಲೆಮಾರಿನ ದಾಖಲೆ ನೀಡಿ ಎಂದು ಸರ್ಕಾರ ಕೇಳುತ್ತಿದೆ. ಈ ನಿಯಮದಲ್ಲಿ ಯಾರೂ ದಾಖಲೆ ತರಲು ಆಗುವುದಿಲ್ಲ ಎಂದರು.
ಇದನ್ನೂ ಓದಿ: Assembly Session: ಪ್ರಮಾಣ ವಚನ ಬಹಿಷ್ಕರಿಸಿದ್ದ ಶಾಸಕ ಈಗ ಡೆಪ್ಯುಟಿ ಸ್ಪೀಕರ್: ರುದ್ರಪ್ಪ ಲಮಾಣಿ ಅವಿರೋಧ ಆಯ್ಕೆ
ಈ ಸಮಯದಲ್ಲಿ ಮತ್ತೆ ಮಧ್ಯಪ್ರವೇಶಿಸಿದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು, ಅದನ್ನು ನಿಮ್ಮ ಸರ್ಕಾರವೇ ಮಾಡಬೇಕು. ಕೇಂದ್ರದಲ್ಲಿ ನಿಮ್ಮ ಸರ್ಕಾರವೇ ಇರುವುದರಿಂದ ಅದನ್ನು ಮಾಡಿಸಿಬಿಡಿ. ಇದರ ಸಮಸ್ಯೆಯೆ ಅರಿವು ನನಗೂ ಇದೆ ಎಂದರು. ಇದಕ್ಕೆ ಮತ್ತೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಉಪಸಭಾಧ್ಯಕ್ಷರು ಒಂದು ಪಕ್ಷದ ಪರವಾಗಿ ಮಾತನಾಡುತ್ತಿದ್ದಾರೆ ಎಂದರು.
ಮತ್ತೆ ಮಾತನಾಡಿದ ನರೇಂದ್ರ ಸ್ವಾಮಿ, ವಿಜಯೇಂದ್ರ ಅವರು ಅಪ್ಪನ ರೀತಿಯಲ್ಲೇ ಬಹಳ ಸಮರ್ಥವಾಗಿ ಮಾತನಾಡುತ್ತಿದ್ದಾರೆ. ಅವರನ್ನು ವಿಪಕ್ಷ ನಾಯಕನನ್ನಾಗಿ ಕೂರಿಸಿಬಿಡಿ, ನಾವು ಮಾತೇ ಆಡುವುದಿಲ್ಲ ಎಂದರು. ಇದನ್ನು ನಮ್ಮ ಪಕ್ಷ ನಿರ್ಧಾರ ಮಾಡುತ್ತದೆ ಎಂದು ಬಿಜೆಪಿ ಸದಸ್ಯರು ಹೇಳಿದರು.
ಮಾತು ಮುಂದುವರಿಸಿದ ವಿಜಯೇಂದ್ರ, ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ಗೆದ್ದಿರಬಹುದು. ಆದರೆ ದೇಶವನ್ನು 2024ರಲ್ಲೂ ನರೇಂದ್ರ ಮೋದಿಯವರೇ ಗೆಲ್ಲಲಿದ್ದಾರೆ. ಅವರನ್ನು ಸುಖಾಸುಮ್ಮನೆ ಬೈಯುತ್ತಾ ಕೂರುವ ಬದಲಿಗೆ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆಯಿಡಿ. ರಾಜ್ಯಕ್ಕೆ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಮಾಡಬೇಕು. ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎನ್ನುವಂತೆ ಐದು ಸುಳ್ಳು ಹೇಳಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಅದನ್ನು ಘೋಷಿಸಿದಂತೆ ಈಡೇರಿಸಿ ಎಂದು ತಿಳಿಸಿ ಮಾತು ಮುಗಿಸಿದರು.