Site icon Vistara News

Assembly Session : ಆರು ತಿಂಗಳಲ್ಲಿ 60 ತಪ್ಪು; ಸರ್ಕಾರದ ವಿರುದ್ಧ ಅಸ್ತ್ರ ಪ್ರಯೋಗಕ್ಕೆ ಬಿಜೆಪಿ ರೆಡಿ

Assembly session R Ashok Siddaramiah

ಬೆಂಗಳೂರು: ಡಿಸೆಂಬರ್‌ 4ರಂದು ಆರಂಭವಾಗಲಿರುವ 10 ದಿನಗಳ ಬೆಳಗಾವಿ ಅಧಿವೇಶನದಲ್ಲಿ‌ (Belagavi Assembly Session) ಆರು ತಿಂಗಳ 60 ತಪ್ಪುಗಳನ್ನು ಪ್ರಸ್ತಾಪಿಸಿ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು (Congress Government) ಹಿಮ್ಮೆಟ್ಟಿಸಲು ಬಿಜೆಪಿ ಸಜ್ಜಾಗಿದೆ. ಪ್ರತಿಪಕ್ಷ ನಾಯಕರಾಗಿ (Opposition leader) ಆಯ್ಕೆಯಾಗಿರುವ ಆರ್.‌ ಅಶೋಕ್‌ (R Ashok) ಅವರು ಮೊದಲ ಅಧಿವೇಶನಕ್ಕಾಗಿ ಸರ್ವ ರೀತಿಯಲ್ಲೂ ಸಜ್ಜಾಗಿದ್ದು, ಸರ್ಕಾರ ಮುಖ್ಯಸ್ಥರ ಬೆವರಿಳಿಸಲು ಪ್ಲ್ಯಾನ್‌ ಮಾಡಿದ್ದಾರೆ.

ʻʻಈ ಅಧಿವೇಶನ ಬಿಜೆಪಿ ಪಾಲಿಗೆ ಅತ್ಯಂತ ಪ್ರಮುಖವಾದುದು. ರಾಜ್ಯದ ಕಾಂಗ್ರೆಸ್ ಸರಕಾರ ಕೇವಲ ಆರು ತಿಂಗಳಲ್ಲಿ 60 ತಪ್ಪುಗಳನ್ನು ಮಾಡಿದೆ. ಅಧಿವೇಶನದಲ್ಲಿ ಈ ಸಂಬಂಧ ಕಿವಿ ಹಿಂಡುವ ಕಾರ್ಯ ಕೈಗೆತ್ತಿಕೊಳ್ಳುತ್ತೇವೆʼʼ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ, ಜೆಡಿಎಸ್‌ ನಾಯಕರಾದ ಎಚ್.ಡಿ ಕುಮಾರಸ್ವಾಮಿ ಅವರ ಜತೆ ಸೇರಿ ಈಗಾಗಲೇ ಸಭೆ ನಡೆಸಿದ್ದೇವೆ. ನಾವೆಲ್ಲರೂ ಸೇರಿ ಸರಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ವಿರೋಧ ಪಕ್ಷದ ನಾಯಕನಾಗಿ, ನಮ್ಮೆಲ್ಲ 66 ಜನ ಶಾಸಕರು, ಜೆಡಿಎಸ್‍ನ 19 ಶಾಸಕರು ಸೇರಿ ಹೋರಾಟ ನಡೆಸಲಿದ್ದೇವೆ ಎಂದು ಅಶೋಕ್‌ ತಿಳಿಸಿದರು.

ಬಿಜೆಪಿ ಪ್ರಸ್ತಾಪ ಮಾಡಲಿರುವ ಪ್ರಮುಖ ಅಂಶಗಳು

  1. ಕಾಂಗ್ರೆಸ್‌ ನಾಯಕರು ಅಧಿಕಾರಕ್ಕೆ ಬಂದ ಪ್ರಾರಂಭದಲ್ಲೇ ಟ್ರಾನ್ಸ್‌ ಫರ್‌ ದಂಧೆಯ ಅಂಗಡಿಗಳನ್ನು ತೆರೆದಿದ್ದಾರೆ. ಆಡಳಿತವು ಭ್ರಷ್ಟಾಚಾರದ ಕೂಪವಾಗಿದೆ. ಬೆಂಗಳೂರಿನಲ್ಲಿ ದಾಳಿ ನಡೆಸಿದಾಗ ಸುಮಾರು 100 ಕೋಟಿಗೂ ಹೆಚ್ಚು ಕಳ್ಳಹಣ ಸಿಕ್ಕಿದ್ದು, ಇದು ಟ್ರಾನ್ಸ್‌ ಫರ್‌ ದಂಧೆಯ ಸ್ಪಷ್ಟರೂಪ.
  2. ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಜನತೆಗೆ ಮೋಸ ಮಾಡಿದ್ದಾರೆ. ತಮಿಳುನಾಡಿನಲ್ಲಿ ಮಿತ್ರ ಸ್ಟಾಲಿನ್ ಇದ್ದಾರೆಂದು, ಅವರಿಗೆ ಸಹಾಯ ಮಾಡಲು ಹಳೆ ಮೈಸೂರಿನ ಭಾಗದ ಜನರಿಗೆ ಮೋಸ ಮಾಡಲಾಗಿದೆ. ಇತರ ಬಹಳಷ್ಟು ವಿಚಾರಗಳಲ್ಲಿ ಸರಕಾರ ತಪ್ಪು ಮಾಡಿದೆ.
  3. . 236 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳಲ್ಲಿ ತೀವ್ರ ಬರಗಾಲ ಛಾಯೆ ಇದೆ. ಜೂನ್‍ನಲ್ಲಿ ಸಣ್ಣ ಮಳೆ, ಜುಲೈನಲ್ಲಿ ಮಳೆ ಇರಲಿಲ್ಲ. ಆಗಸ್ಟ್‍ನಲ್ಲಿ ಶೇ 73 ಮಳೆ ಕೊರತೆ ಆಗಿದೆ. ರಾಜ್ಯ ಸರಕಾರ, ಸಚಿವರು ಯಾವುದೇ ಕ್ರಮ ಕೈಗೊಳ್ಳದೆ ವಿಧಾನಸೌಧದಲ್ಲಿ ಕುಳಿತು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.
  4. ರಾಜ್ಯ ಸರ್ಕಾರ ಬರ ಪರಿಹಾರವಾಗಿ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ; ಮಾತೆತ್ತಿದರೆ ಕೇಂದ್ರ ಸರಕಾರ ಎನ್ನುತ್ತಿದ್ದಾರೆ. ಬರ ಸಂಬಂಧ ನಿಲುವಳಿ ಸೂಚನೆ ಮಂಡಿಸುತ್ತೇವೆ.
  5. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಈ ಮೊದಲು ಶಿವಮೊಗ್ಗ, ಕೋಲಾರದ ಸಮಸ್ಯೆ ಇತ್ತು. ಬೆಂಗಳೂರಿನಲ್ಲಿ ನಿನ್ನೆ ಶಾಲೆ ಮಕ್ಕಳು ಭಯಭೀತರಾಗಿ, ಪೋಷಕರೂ ಓಡಿ ಹೋಗುವಂತಾಗಿತ್ತು. ಈ ಸರಕಾರ ಬಂದ ಬಳಿಕ ಕಾನೂನು- ಸುವ್ಯವಸ್ಥೆ ವಿಫಲವಾಗುತ್ತಿದೆ.
  6. ಸಚಿವ ಜಮೀರ್ ಅಹ್ಮದ್ ಅವರು ತೆಲಂಗಾಣದಲ್ಲಿ ಬಿಜೆಪಿಯ ಹಿಂದೂ ಶಾಸಕರು ಮುಸ್ಲಿಂ ಸ್ಪೀಕರ್‌ ಗೆ ದಿನಂಪ್ರತಿ ಸಲಾಂ ಹೊಡೆಯಬೇಕಿದೆ ಎಂಬಂತೆ ಮಾತನಾಡಿದ್ದಾರೆ. ಇದು ಸಂವಿಧಾನ ವಿರೋಧಿ ಹೇಳಿಕೆ. ಇದನ್ನು ನಾವು ಪ್ರಶ್ನಿಸುತ್ತೇವೆ.
  7. ಶಿಕ್ಷಣ ವ್ಯವಸ್ಥೆಯಡಿ ರಾಜಕೀಯ ಮಾಡಿದ್ದನ್ನು ಪ್ರಶ್ನಿಸುತ್ತೇವೆ. ಎನ್‍ಇಪಿ ಅಡಿಯಲ್ಲಿ ತಪ್ಪು ಕಂಡು ಹಿಡಿಯುವುದನ್ನು ಪ್ರಶ್ನೆ ಮಾಡುತ್ತೇವೆ. ಒಕ್ಕಲಿಗ ಸಮುದಾಯ, ಲಿಂಗಾಯತ ಸಮುದಾಯ ಮೊದಲಾದವರ ವಿರೋಧದ ನಡುವೆ ಕಾಂತರಾಜ್ ವರದಿ ಅನುಷ್ಠಾನಕ್ಕೆ ಮುಂದಾದುದನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಿದ್ದೇವೆ.
  8. ನೀರಾವರಿ ಯೋಜನೆಗಳ ವಿಚಾರ, ಅನುಷ್ಠಾನದಲ್ಲಿ ವಿಫಲತೆ, ಬಜೆಟ್‍ನಲ್ಲಿ ನೀರಾವರಿಗೆ ಮೋಸ ಮಾಡಿದ್ದನ್ನು ತೆಗೆದುಕೊಳ್ಳುತ್ತೇವೆ.
  9. ಉತ್ತರ ಕರ್ನಾಟಕದ ಅಭಿವೃದ್ಧಿ ಆಗದಿರುವುದು, ನೀರಾವರಿ ಯೋಜನೆಗಳು, ಗ್ಯಾರಂಟಿ ವೈಫಲ್ಯÀಗಳನ್ನು ಕೈಗೆತ್ತಿಕೊಳ್ಳುತ್ತೇವೆ.
  10. ಜೆಸಿಬಿಯಲ್ಲಿ ಮಕ್ಕಳು ಶಾಲೆಗೆ ಹೋಗುವುದು, 1 ತಿಂಗಳು ಮಹಿಳೆಯರಿಗೆ ಹಣ ಕೊಟ್ಟು 3 ತಿಂಗಳು ನಾಮ ಹಾಕಿದ್ದು, ನಿರುದ್ಯೋಗಿ ಯುವಕರಿಗೆ ಭತ್ಯೆಯನ್ನು 6 ತಿಂಗಳಿಂದ ನಾಮ ಹಾಕಿದ್ದನ್ನೂ ಚರ್ಚಿಸುತ್ತೇವೆ.
  11. ಡಿ.ಕೆ.ಶಿವಕುಮಾರ್ ಕೇಸಿನಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದ ಸಂವಿಧಾನವಿರೋಧಿ ಕ್ರಮದ ಕುರಿತು ಪ್ರಶ್ನಿಸುತ್ತೇವೆ.
  12. ಹಿಂದೆ ಸೋನಿಯಾ ಗಾಂಧಿ ನೇತೃತ್ವದ ಸರಕಾರ ಇದ್ದಾಗ ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರ ಮೇಲೂ ಕೇಸಿತ್ತು. ನಾವೇನೂ ಕೇಸು ತನಿಖೆ ವಾಪಸ್ ಪಡೆದಿಲ್ಲ .
  13. ಆರು ತಿಂಗಳಲ್ಲಿ ಒಂದು ಶಾಲೆಯನ್ನೂ ಹೊಸದಾಗಿ ತೆರೆದಿಲ್ಲ. ಒಂದು ರಸ್ತೆ ಮಾಡಿಲ್ಲ. ಒಂದು ನೂತನ ಆಸ್ಪತ್ರೆ ಉದ್ಘಾಟನೆ ಆಗಿಲ್ಲ.
  14. 6 ತಿಂಗಳಿಂದ ವಿದ್ಯಾರ್ಥಿ ಸ್ಕಾಲರ್‍ಶಿಪ್ ಕೊಟ್ಟಿಲ್ಲ. ಎಸ್‍ಸಿಎಸ್‍ಟಿ ನಿಧಿಯನ್ನೂ ಕೊಟ್ಟಿಲ್ಲ. ಅದನ್ನು ಬೇರೆ ಉದ್ದೇಶಕ್ಕೆ ಬಳಸಿದ್ದಾರೆ
  15. ಗುತ್ತಿಗೆದಾರ ಅಂಬಿಕಾಪತಿ ಸಾವಿಗೆ ಬೇರೆ ಕಾರಣ ಇದೆ. ಯಾರೋ ಒತ್ತಡ ಹಾಕಿದ್ದಾರೆಂಬ ಮಾಹಿತಿ ಇದೆ. ಅದನ್ನು ಚರ್ಚೆಗೆ ಕೈಗೆತ್ತಿಕೊಳ್ಳುತ್ತೇವೆ ಎಂದು ಆರ್‌. ಅಶೋಕ್‌ ಹೇಳಿದರು.
Exit mobile version