ಬೆಂಗಳೂರು: ವಿಪಕ್ಷ ಸದಸ್ಯರ ಗದ್ದಲದ ನಡುವೆ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕʼ ವಿಧಾನ ಪರಿಷತ್‌ನಲ್ಲೂ (Assembly session) ಅಂಗೀಕಾರಗೊಂಡಿದೆ. ಜುಲೈ 23ರಂದು ಮಸೂದೆಯು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿತ್ತು. ಇದೀಗ ಮೇಲ್ಮನೆಯಲ್ಲೂ ಮಸೂದೆ ಅಂಗೀಕಾರಗೊಂಡಿದೆ. ಇದರಿಂದ ಸಿನಿಮಾ ಟಿಕೆಟ್ ಮತ್ತು ಒಟಿಟಿ ಸಬ್‌ಸ್ಕ್ರಿಪ್ಶನ್ ಶುಲ್ಕದ ಮೇಲೆ ಶೇಕಡ 1ರಿಂದ 2ರಷ್ಟು ಸೆಸ್ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸಿನಿಮಾ ಪ್ರಿಯರಿಗೂ ದರ ಏರಿಕೆ ಬಿಸಿ ತಟ್ಟಲಿದೆ.
ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024ರಲ್ಲಿ ಸಿನಿಮಾ, ಸಾಂಸ್ಕೃತಿಕ ಕಲಾವಿದರ ಅನುಕೂಲಕ್ಕಾಗಿ ಸಿನಿಮಾ ಟಿಕೆಟ್ ಮತ್ತು ಒಟಿಟಿ ಸಬ್‌ಸ್ಕ್ರಿಪ್ಶನ್ ಶುಲ್ಕದ ಮೇಲೆ ಶೇಕಡ 1ರಿಂದ 2ರಷ್ಟು ಹೊಸ ಸೆಸ್ ವಿಧಿಸುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಮುಂದಿಟ್ಟಿದೆ. ಇದರಿಂದ ಸಿನಿಮಾ, ಸಾಂಸ್ಕೃತಿಕ ಕಲಾವಿದರಿಗೆ ಇಎಸ್ಐ, ಪಿಎಫ್ ಸೇರಿದಂತೆ ಅನೇಕ ಅನುಕೂಲಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದೆ.
ರಾಜ್ಯದಲ್ಲಿನ ಸಿನಿಮಾ, ಸಾಂಸ್ಕೃತಿಕ ಕಾರ್ಯಕರ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ & ಕಲ್ಯಾಣ ನಿಧಿ ಎಂಬ ನಿಧಿ ಸ್ಥಾಪಿಸಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಇದರಿಂದ ಸಿನಿಮಾ ಟಿಕೆಟ್ ಹಾಗೂ ಒಟಿಟಿ ಚಂದಾದಾರಿಕೆ ಮೇಲೆ ಶೇಕಡ 2 ಪರ್ಸೆಂಟ್ ಮೀರದಂತೆ ಶೇಕಡ 1 ಪರ್ಸೆಂಟ್ಗಿಂತ ಕಡಿಮೆಯಾಗದಂತೆ ಸೆಸ್ ವಿಧಿಸಲಿದೆ. ಈ ಸೆಸ್ ಅನ್ನು ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ & ಕಲ್ಯಾಣ ನಿಧಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದೆ.
ಪೆಟ್ರೋಲ್, ಡೀಸೆಲ್ ಏರಿಕೆ ಬೆನ್ನಲ್ಲೇ ಇದೀಗ ಮನರಂಜನೆ ಕ್ಷೇತ್ರದ ಮೇಲೆ ರಾಜ್ಯ ಸರ್ಕಾರ ಕಣ್ಣಿಟ್ಟು, ಸಿನಿಮಾ ಟಿಕೆಟ್ ಮತ್ತು ಒಟಿಟಿ ಸಬ್‌ಸ್ಕ್ರಿಪ್ಶನ್ ಮೇಲೆ ಸೆಸ್ ವಿಧಿಸಲು ಸರ್ಕಾರ ಮುಂದಾಗಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರದ ನಿರ್ಧಾರವನ್ನು ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸಿತ್ತು. ಎಲ್ಲದರ ಮೇಲೂ ತೆರಿಗೆಯನ್ನು ಹೇರಿರುವ ಸಿದ್ದರಾಮಯ್ಯ ಸರ್ಕಾರ, ಇದೀಗ ಸಿನಿಮಾ ಪ್ರೇಕ್ಷಕರ ಮೇಲೂ ತೆರಿಗೆ ಪ್ರಹಾರ (Movie ticket price hike) ಮಾಡಲು ‘ಕೈ’ ಎತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿತ್ತು. ಇದೀಗ ವಿಪಕ್ಷ ನಾಯಕರ ವಿರೋಧದ ನಡುವೆಯೂ ವಿಧಾನ ಪರಿಷತ್‌ನಲ್ಲೂ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ ಮಸೂದೆ ಅಂಗೀಕಾರಗೊಂಡಿದೆ. ಇದರಿಂದ ಸಿನಿಮಾ ಟಿಕೆಟ್ ಹಾಗೂ ಒಟಿಟಿ ಶುಲ್ಕಕ್ಕೆ ಶೇ.2ರವರೆಗೆ ಸೆಸ್ ವಿಧಿಸುವುದರಿಂದ ಸಿನಿಮಾ ಪ್ರಿಯರಿಗೂ ದರ ಏರಿಗೆ ಬಿಸಿ ತಟ್ಟಲಿದೆ.
ವಿಧಾನಮಂಡಲ ಅನರ್ಹತಾ ನಿವಾರಣಾ ಮಸೂದೆ ಸೇರಿ ಹಲವು ಬಿಲ್‌ಗಳು ಪಾಸ್
ವಿಧಾನ ಸಭೆಯಲ್ಲಿ ಅಂಗೀಕಾರಗೊಂಡಿದ್ದ ಕರ್ನಾಟಕ ವಿಧಾನಮಂಡಲ ಅನರ್ಹತಾ ನಿವಾರಣಾ ಎರಡನೇ ತಿದ್ದುಪಡಿ ವಿಧೇಯಕ 2024, ವಿಧಾನ ಪರಿಷತ್‌ನಲ್ಲೂ ಗುರುವಾರ ಅಂಗೀಕಾರಗೊಂಡಿದೆ. ಅನರ್ಹತೆ ನಿವಾರಣಾ ತಿದ್ದುಪಡಿ ವಿಧೇಯಕವನ್ನು ಎಚ್.ಕೆ.ಪಾಟೀಲ್ ಮಂಡಿಸಿದರು.
ಈ ತಿದ್ದುಪಡಿ ಮೂಲಕ ಶಾಸಕರನ್ನು ಬೇರೆ ಬೇರೆ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿತ್ತು. ಆದರೆ ಕಾನೂನು ಮೂಲಕ ಇದಕ್ಕೆ ಅಡ್ಡಿ ಪಡಿಸಲಾಗುತ್ತಿತ್ತು. ಅವರಿಗೆ ಯಾವುದೇ ರೀತಿ ಕಾನೂನಿನ ಸಮಸ್ಯೆ ಆಗಬಾರದು, ಅವರ ಸ್ಥಾನ ಅನರ್ಹತೆ ಆಗಬಾರದು ಅಂತ ಈ ತಿದ್ದುಪಡಿ ತಂದಿದ್ದೇವೆ. ಇದು ಶಾಸಕರ ಸ್ಥಾನಮಾನಕ್ಕೆ ಅನುಕೂಲ ಆಗುತ್ತದೆ ಎಂದರು. ಬಳಿಕ ಬಿಲ್ ಅಂಗೀಕಾರಗೊಂಡಿತು.
ಲೋಕಸಭಾ ಕ್ಷೇತ್ರ ಪುನರ್ ವಿಂಗಡನೆ ನಿರ್ಣಯ
ಲೋಕಸಭಾ ಕ್ಷೇತ್ರ ಪುನರ್ ವಿಂಗಡನೆ ನಿರ್ಣಯವನ್ನು ವಿಧಾನಸೌಧದಲ್ಲಿ ಎಚ್.ಕೆ. ಪಾಟೀಲ್ ಮಂಡಿಸಿದರು. ಆದರೆ, ಚರ್ಚೆ ಮಾಡದೇ ನಿರ್ಣಯ ಪಾಸ್ ಮಾಡಬೇಡಿ, ವಿಶೇಷ ಅಧಿವೇಶನ ಕರೆಯಿರಿ ಎಂದು ವಿಪಕ್ಷ ನಾಯಕ ಒತ್ತಾಯಿಸಿದರು. ಆದರೂ ವಿಧಾನ ಸಭೆಯಲ್ಲಿ ಕ್ಷೇತ್ರ ಪುನರ್ ವಿಂಗಡನೆ ನಿರ್ಣಯ ಪಾಸ್ ಆಯಿತು.
ಇನ್ನು 2024ರ ಅನುಸೂಚಿತ ಜಾತಿ ಅನುಸೂಚಿತ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ನೇಮಕಾತಿ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಸಭೆ ಅಸ್ತು ಎಂದಿದೆ. ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೂ ಅನುಮೋದನೆ ನೀಡಲಾಗಿದೆ. ಹಾಗೆಯೇ ರೇಣುಕಾ ಎಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ. ಕರ್ನಾಟಕ ಉದ್ಯಾನವನ ಸಂರಕ್ಷಣಾ ತಿದ್ದುಪಡಿ ವಿಧೇಯಕ ಮಂಡನೆಯಾಗಿದ್ದು, ನಂದಿಬೆಟ್ಟದಲ್ಲಿ ಎರಡು ಎಕರೆಯ ಜಮೀನನಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸುವ ವಿಧೇಯಕ ಅಂಗೀಕಾರವಾಯಿತು.
ಇದೇ ವೇಳೆ 2024ನೇ ಸಾಲಿನ ಕಂದಾಯ ತಿದ್ದುಪಡಿ ವಿಧೇಯಕ ಪಾಸ್ ಆಗಿದೆ. 2024ನೇ ಸಾಲಿನ ಕರ್ನಾಟಕ ವೈದ್ಯಕೀಯ ನೊಂದಾಣಿ ಹಾಗೂ ಇತರೆ ಕೆಲವು ತಿದ್ದುಪಡಿ ವಿಧೇಯಕ, ಕರ್ನಾಟಕ ಉದ್ಯಾನವನ ಸಂರಕ್ಷಣಾ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗಿದೆ.
ಇದನ್ನೂ ಓದಿ | Assembly session: ನೀಟ್ ಪರೀಕ್ಷೆ ರದ್ದು, ಒನ್ ನೇಷನ್-ಒನ್ ಎಲೆಕ್ಷನ್ ವಿರುದ್ಧ ನಿರ್ಣಯ; ಉಭಯ ಸದನಗಳಲ್ಲೂ ಅಂಗೀಕಾರ
ವಿಧಾನಮಂಡಲ ಅನರ್ಹತಾ ನಿವಾರಣಾ ಎರಡನೇ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ
ವಿಧಾನಸಭೆಯಲ್ಲಿ ಕರ್ನಾಟಕ ವಿಧಾನಮಂಡಲ ಅನರ್ಹತಾ ನಿವಾರಣಾ ಎರಡನೇ ತಿದ್ದುಪಡಿ ವಿಧೇಯಕ 2024 ಕೂಡ ಅಂಗೀಕಾರಗೊಂಡಿದೆ. ವಿಪಕ್ಷ ಶಾಸಕರ ವಿರೋಧದ ನಡುವೆಯೂ ಮಸೂದೆಗೆ ಅಂಗೀಕಾರ ಸಿಕ್ಕಿದೆ. ಸಿಎಂ ರಾಜಕೀಯ ಸಲಹೆಗಾರ, ಕಾನೂನು ಸಲಹೆಗಾರ ಹುದ್ದೆಗಳ ಅನರ್ಹತೆಗೆ ಕಡಿವಾಣ ಹಾಕುವ ವಿಧೇಯಕ ಇದಾಗಿದೆ.