Site icon Vistara News

Assembly Session : ವರ್ಗಾವಣೆ ದಂಧೆ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ; ಸಿದ್ದರಾಮಯ್ಯ ಸವಾಲ್‌

Siddaramaiah Challenge

ವಿಧಾನಸಭೆ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ (Congress Government) ಅಸ್ತಿತ್ವಕ್ಕೆ ಬಂದ ನಂತರ ನಡೆದ ವರ್ಗಾವಣೆಗಳಲ್ಲಿ ದಂಧೆ ನಡೆದಿದೆ ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿಧಾನಸಭಾ ಅಧಿವೇಶನದಲ್ಲಿ (Assembly session) ಘೋಷಿಸಿದ್ದಾರೆ ಮತ್ತು ಭ್ರಷ್ಟಾಚಾರದ ಆರೋಪ (Allegation of Corruption) ಮಾಡಿದ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರಿಗೆ ಸವಾಲು ಹಾಕಿದ್ದಾರೆ.

ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು (Joint session) ಉದ್ದೇಶಿಸಿ ರಾಜ್ಯಪಾಲ ಥ್ಯಾವರ್‌ಚಂದ್‌ ಗೆಹ್ಲೋಟ್‌ ಅವರು ಮಾಡಿದ ಭಾಷಣ ಮತ್ತು ಅದರ ಮೇಲೆ ನಡೆದ ಚರ್ಚೆಗಳಿಗೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನ್ನ ರಾಜಕೀಯ ಜೀವನದಲ್ಲಿ ಯಾರೇ ಒಬ್ಬರು ಆರೋಪ ಮಾಡಿಲ್ಲ. ನನ್ನ ಮೇಲೆ ಆ ರೀತಿಯ ಆರೋಪ ಇಲ್ಲ. ವರ್ಗಾವಣೆಯಲ್ಲಿ ಲಂಚ ತಗೊಂಡಿದ್ರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಹೇಳಿದರು.

ನನಗೆ ಗೊತ್ತಿದ್ದು ಭ್ರಷ್ಟಾಚಾರ ಆಗಿಲ್ಲ, ನಾನು ಮಾಡಿಲ್ಲ

ʻʻವರ್ಗಾವಣೆಯಲ್ಲಿ ಭ್ರಷ್ಟಾಚಾರ ಇಲ್ಲ ಅಂತ ನಾನು ಹೇಳುವುದಿಲ್ಲ. ಆದರೆ ನನಗೆ ಗೊತ್ತಿದ್ದು ಭ್ರಷ್ಟಾಚಾರ ಆಗಿಲ್ಲ. ನಾವು ಅಧಿಕಾರಕ್ಕೆ ಬಂದು ಎರಡು ತಿಂಗಳಷ್ಟೇ ಆಗಿದೆ. ಈ ಆರೋಪಗಳೆಲ್ಲ ಕಪೋಲಕಲ್ಪಿತʼʼ ಎಂದು ಹೇಳಿದರು ಸಿದ್ದರಾಮಯ್ಯ.

ʻʻಈಗ ನಮ್ಮ ಸರ್ಕಾರ ಬಂದ ಮೇಲೆ ಸ್ವಲ್ಪ ಹೆಚ್ಚು ವರ್ಗಾವಣೆಗಳು ಆಗಿರಬಹುದು. ವರ್ಗಾವಣೆಗಳು ಅನೇಕ ಕಾರಣಗಳಿಗೆ ಆಗುತ್ತವೆ. ಹಿಂದಿನ ಸರ್ಕಾರ ಇದ್ದಾಗ ಅವರ ಶಾಸಕರಿಗೆ ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿರಬಹುದು. ನಮ್ಮ ಸರ್ಕಾರ ಬಂದ ಮೇಲೆ ಆಡಳಿತಾತ್ಮಕವಾಗಿ ವರ್ಗಾವಣೆಗಳು ಆಗಿವೆ. ಆದರೆ ವರ್ಗಾವಣೆ ಆದ ಕೂಡಲೇ ದಂಧೆ, ವ್ಯಾಪಾರ ನಡೆದಿದೆ ಎಂಬುದು ಹಾಸ್ಯಾಸ್ಪದ. ಇದು ಸತ್ಯಕ್ಕೆ ದೂರವಾದ ಮಾತುʼʼ ಎಂದು ಹೇಳಿದ ಸಿದ್ದರಾಮಯ್ಯ. ಹಾಗಿದ್ದರೆ ಅವರ ಕಾಲದಲ್ಲಿ ವರ್ಗಾವಣೆ ಮಾಡಿದ್ರಲ್ಲ, ಆಗಲೂ ವ್ಯಾಪಾರ ನಡೀತ್ತಿತ್ತಾ..? ದಂಧೆ ನಡೀತ್ತಿತ್ತಾ..?ʼʼ ಎಂದು ಪ್ರಶ್ನಿಸಿದರು.

ನಮ್ಮ ವಿರುದ್ಧ ಇದುವರೆಗೆ ಯಾವುದೇ ಆರೋಪಗಳಿಲ್ಲ. ನಾವು ಕೊಟ್ಟ ಗ್ಯಾರಂಟಿಗಳನ್ನು ಸರಿಯಾಗಿ ಜಾರಿ ಮಾಡುತ್ತಿದ್ದೇವೆ. ರಾಜಕೀಯ ಅ ಭದ್ರತೆ ಶುರುವಾಗಿರಬೇಕು. ರಾಜಕೀಯ ಭಯದಿಂದ ಆರೋಪ ಮಾಡಿದ್ದಾರೆ ಅಂತ ನನಗೆ ಅನ್ನಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ʻʻಮೊದಲ ಕ್ಯಾಬಿನೆಟ್ ಸಭೆಯಲ್ಲೇ ಯಾವ ಕಾರಣಕ್ಕೂ ವರ್ಗಾವಣೆಗಳಲ್ಲಿ ಭ್ರಷ್ಟಾಚಾರ ನಡೆಯಬಾರದು ಎಂದು ಸಚಿವರಲ್ಲಿ ಮನವಿ ಮಾಡಿದ್ದೆ. ಕಾನೂನು ಪ್ರಕಾರವೇ ಎಲ್ಲ ಮಂತ್ರಿಗಳನ್ನು ನಾವು ಭರ್ತಿ ಮಾಡಿದ್ದೇವೆ. ಎಲ್ಲರಿಗೂ ಖಾತೆಗಳನ್ನು ಹಂಚು ಬಿಟ್ಟಿದ್ದೇವೆʼʼ ಎಂದು ಹೇಳಿದರು ಸಿದ್ದರಾಮಯ್ಯ.

ಕುಮಾರಸ್ವಾಮಿ ದಾಖಲೆ ಬಗ್ಗೆ ಆಕ್ಷೇಪ

ವರ್ಗಾವಣೆ ದಂಧೆ ನಡೆಯುತ್ತಿದೆ, ನನ್ನಲ್ಲಿ ದಾಖಲೆ ಇದೆ, ಪೆನ್‌ ಡ್ರೈವ್‌ನಲ್ಲಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ʻʻಕುಮಾರಸ್ವಾಮಿ ಅವರು ದಾಖಲೆ ಕೊಡ್ತೀವಿ ಎಂದು ಹೇಳಿದ್ರು. ನನಗೂ ಕೊಟ್ಟಿಲ್ಲ, ಸ್ಪೀಕರ್ ಗೂ ಕೊಟ್ಟಿಲ್ಲ. ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ. ಪತ್ರಿಕೆಗಳಲ್ಲಿ ಬರೆದ ಸುದ್ದಿ ಗೆ ನಾನು ಜವಾಬ್ದಾರ ಆಗಲ್ಲʼʼ ಎಂದರು.

ಹಿಂದಿನ ಸರ್ಕಾರದ ಹಗರಣಗಳ ತನಿಖೆ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿದ ಬಂದ ಆರೋಪಗಳ ಬಗ್ಗೆ ತನಿಖೆ ಮಾಡಿಸುತ್ತಿದ್ದೇನೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2013ರಿಂದಲೇ ಭ್ರಷ್ಟಾಚಾರ ತನಿಖೆ ಮಾಡಿಸಲು ಸಲಹೆ ನೀಡಿದ್ದರು. ನಾನು ಈ ಹಿಂದೆಯೇ ಹಲವು ಬಾರಿ ಹೇಳಿದ್ದೆ. ನೀವೇ ಅಧಿಕಾರದಲ್ಲಿದ್ದೀರಿ, ತನಿಖೆ ಮಾಡಿಸಿ ಎಂದು ಹೇಳಿದ್ದೆ. ಹಾಗಿದ್ದರೂ ಅವರೇಕೆ ನಮ್ಮ ಸರ್ಕಾರದ ಕಾಲದ ಹಗರಣಗಳನ್ನು ತನಿಖೆ ಮಾಡಿಸಲಿಲ್ಲ.ʼʼ ಎಂದು ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪ ಸಲ್ಲಿಸಿದ ಬಸವರಾಜ ಬೊಮ್ಮಾಯಿ ಏನೋ ಹೇಳಲು ಹೊರಟಾಗ ಸಿದ್ದರಾಮಯ್ಯ ತಡೆದರು.

ಮುಂದೆ ಮಾತನಾಡಿದ ಬೊಮ್ಮಾಯಿ, ʻʻವರ್ಗಾವಣೆ ದಂಧೆ ನಿಮಗೆ ಗೊತ್ತಿಲ್ಲದೇ ನಡೆದಿದೆ ಎಂದು ಹೇಳಿದ್ದೀರಿ. ಮುಖ್ಯಮಂತ್ರಿ ನಮ್ಮ ಇಲಾಖೆಯಲ್ಲಿ ನಡೆದಿಲ್ಲ ಎಂದು ಹೇಳ್ತಿದ್ದಾರೆ. ನಿಮ್ಮದೇ ಸರ್ಕಾರ ಇದೆ. ತನಿಖೆ ಮಾಡಿಸಿʼʼ ಎಂದರು.

ಇದನ್ನೂ ಓದಿ: HD Kumaraswamy : 2019ರಲ್ಲೇ ಜೆಡಿಎಸ್‌- ಬಿಜೆಪಿ ಮೈತ್ರಿ ಆಫರ್‌ ಮಾಡಿದ್ದ ಪ್ರಧಾನಿ ಮೋದಿ; ಕುಮಾರಸ್ವಾಮಿ ಬಹಿರಂಗ

Exit mobile version