Site icon Vistara News

Assembly session: ಐತಿಹಾಸಿಕ ಸ್ಥಳ, ಸ್ಮಾರಕ ವಿರೂಪಗೊಳಿಸಿದ್ರೆ ಜೈಲು ಫಿಕ್ಸ್‌; ಮಹತ್ವದ ಮಸೂದೆ ಪಾಸ್

Assembly session

ಬೆಂಗಳೂರು: ಇನ್ನು ಮುಂದೆ ಐತಿಹಾಸಿಕ ಸ್ಥಳಗಳ ವಿರೂಪ ಅಥವಾ ಸ್ಮಾರಕಗಳನ್ನು ನಾಶಪಡಿಸಿದರೆ ಜೈಲು ಶಿಕ್ಷೆ ಖಚಿತ. ಐತಿಹಾಸಿಕ ಸ್ಥಳ, ಸ್ಮಾರಕಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರಾಚೀನ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಅವಶೇಷಗಳ (ತಿದ್ದುಪಡಿ) ವಿಧೇಯಕ 2024 ಬಿಲ್ ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಿ (Assembly session), ಅಂಗೀಕಾರಗೊಂಡಿದೆ.

ವಿಧಾನ ಪರಿಷತ್‌ನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ಅವರು ಕರ್ನಾಟಕ ಪ್ರಾಚೀನ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಅವಶೇಷಗಳ (ತಿದ್ದುಪಡಿ) ವಿಧೇಯಕ 2024 ಬಿಲ್ ಮಂಡಿಸಿದರು. ಇದರಲ್ಲಿ ಪ್ರಾಚೀನ ಹಾಗೂ ಐತಿಹಾಸಿಕ ಸ್ಮಾರಕ ದತ್ತು ತೆಗೆದುಕೊಳ್ಳಲು ಅವಕಾಶ ನೀಡಲಾಗಿದ್ದು, ಐತಿಹಾಸಿಕ ಸ್ಥಳ ಅಥವಾ ಸ್ಮಾರಕಗಳನ್ನು ನಾಶಪಡಿಸಿದರೆ ಮೂರು ತಿಂಗಳ ಕಠಿಣ ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶ ನೀಡಲಾಗಿದೆ.

ಎಚ್.ಕೆ.ಪಾಟೀಲ್ ಅವರು ವಿಧೇಯಕದ ಬಗ್ಗೆ ಮಾತನಾಡಿ, ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕ ಮತ್ತು ಪುರಾತತ್ವ ಸ್ಥಳಗಳ ಸಂರಕ್ಷಣೆ ಮಾಡುವ ಕರ್ತವ್ಯವಿದೆ. ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲು ಈ ವಿಧೇಯಕ ಅವಕಾಶ ಮಾಡಿಕೊಡಲಿದೆ. ಸೊಸೈಟಿ, ಸಹಕಾರ ಸಂಘಗಳು, ಟ್ರಸ್ಟ್​​ಗಳು, ಸರ್ಕಾರೇತರ ಸಂಸ್ಥೆಗಳು ಆಸಕ್ತಿಯುಲ್ಳ ವ್ಯಕ್ತಿಗಳನ್ನು ಸ್ಮಾರಕ ಪಟ್ಟಿಯಲ್ಲಿ ಸೇರಿಸಲು ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ | Pralhad joshi: ಎಸ್ಸಿ, ಎಸ್ಟಿ ಹಣ ದುರುಪಯೋಗ; ಸಿಎಂ ರಾಜೀನಾಮೆಗೆ ಪ್ರಲ್ಹಾದ್‌ ಜೋಶಿ ಆಗ್ರಹ

ವೈದ್ಯರ ಮೇಲಿನ ಹಲ್ಲೆ ಮಾಡಿದರೂ ಜೈಲು ಶಿಕ್ಷೆ,

ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ – 2024 ವಿಧಾನ ಪರಿಷತ್‌ನಲ್ಲಿ ಅಂಗೀಕಾರಗೊಂಡಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವಿಧೇಯಕ ಮಂಡಿಸಿದ್ದು, ನಕಲಿ ವೈದ್ಯರ ಮೇಲಿನ ದಂಡ 10 ಸಾವಿರದಿಂದ ಒಂದು ಲಕ್ಷದವರೆಗೆ ಏರಿಕೆ ಮಾಡಿದ್ದೇವೆ. ಉದ್ದೇಶಪೂರ್ವಕವಾಗಿ ವೈದರ ಮೇಲೆ ಹಲ್ಲೆ, ನಿಂದನೆ, ಅವಮಾನಿಸುವುದನ್ನು ನಿಷೇಧಿಸಿರುವ ತಿದ್ದುಪಡಿ ತಂದಿದ್ದೇವೆ. ವೈದ್ಯರ ಮೇಲಿನ ಹಲ್ಲೆಗೆ ಮೂರು ವರ್ಷದಿಂದ 7 ವರ್ಷದ ತನಕ ಜೈಲು ಶಿಕ್ಷೆ ವಿಧಿಸುವ ತಿದ್ದುಪಡಿ ಮಾಡಿದ್ದೇವೆ ಎಂದರು. ಬಳಿಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ

ಶ್ರೀ ರೇಣುಕಾಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2024 ವಿಧೇಯಕವನ್ನು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಧಾನ ಪರಿಷತ್‌ನಲ್ಲಿ ಮಂಡನೆ ಮಾಡಿದರು. ದೇವಸ್ಥಾನ ಅಭಿವೃದ್ಧಿ ಮತ್ತು ಅದರ ನಿರ್ವಹಣೆ ಸಂಬಂಧಿಸಿದಂತೆ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವುದು, ಅಭಿವೃದ್ಧಿ ಪ್ರಾಧಿಕಾರದ ನಿಧಿಯನ್ನು ರಚನೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ವಿಧೇಯಕಕ್ಕೆ ಅಂಗೀಕಾರ ದೊರಕಿದೆ.

ನಂದಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ಭೂಮಿ

ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ 2024 ಅನ್ನು ಸಚಿವ ಎಚ್.ಕೆ. ಪಾಟೀಲ್ ಅವರು ಪರಿಷತ್‌ನಲ್ಲಿ ಮಂಡಿಸಿದರು. ಉದ್ಯಾನವನಗಳ ಸಂರಕ್ಷಣೆ ಅಡಿ ನಂದಿಬೆಟ್ಟದಲ್ಲಿ ರೋಪ್ ವೇ ಮಾಡಲು ಸರ್ಕಾರ ಒಪ್ಪಿಕೊಂಡಿದೆ. ಇದಕ್ಕೆ ಎರಡು ಎಕರೆ ಭೂಮಿಯನ್ನು ಒದಗಿಸಬೇಕಾಗುತ್ತದೆ. ಇದೊಂದು ಉತ್ತಮ ಕಾನೂನು ಆಗಿದೆ ಎಂದು ಹೇಳಿದರು. ನಂತರ ಮಸೂದೆಗೆ ಅನುಮೋದನೆ ಸಿಕ್ಕಿತು.

ಇದನ್ನೂ ಓದಿ | Assembly session: ಪರಿಷತ್‌ನಲ್ಲೂ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಮಸೂದೆ ಪಾಸ್; ಹೆಚ್ಚಲಿದೆ ಸಿನಿಮಾ ಟಿಕೆಟ್ ದರ, ಒಟಿಟಿ ಶುಲ್ಕ!

ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು, ಇತರ ಹಿಂದುಳಿದ ವರ್ಗಗಳ ತಿದ್ದುಪಡಿ ಮಸೂದೆ

ಮೇಲ್ಮನೆಯಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ತಿದ್ದುಪಡಿ ವಿದೇಯಕ ಮಂಡನೆಯಾಯಿತು. ಸಚಿವ ಮಹದೇವಪ್ಪ ಪರವಾಗಿ, ಎಚ್.ಕೆ ಪಾಟೀಲ್ ಮಸೂದೆ ಮಂಡಿಸಿ ಮಾತನಾಡಿ, ಈ ಕಾನೂನು ಸಣ್ಣದಾಗಿದ್ದರೂ ದೂರದ ಪರಿಣಾಮ ಬೀರುತ್ತದೆ. ವಿಪಕ್ಷಗಳಿಗೆ ಇದು ಸಮಾಧಾನ ಆಗಲಿದೆ. ಹೊರ ಗುತ್ತಿಗೆಗಳಿಗೆ ಮೀಸಲಾತಿ ಇರಲಿಲ್ಲ. ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಬೇಕು ಅಂತ ಹಾಗೂ ಸಂವಿಧಾನ ಸಮಾನ ಹಂಚಿಕೆ ಆಗಬೇಕು ಅಂತ ಈ ಕಾನೂನು ತಂದಿದ್ದೇವೆ ಎಂದರು. ವಿಪಕ್ಷ ನಾಯಕರ ಗದ್ದಲದ ನಡುವೆಯೇ ವಿಧೇಯಕ ಅಂಗೀಕಾರಗೊಂಡಿತು.

Exit mobile version