Site icon Vistara News

Assembly Session: ಪುನೀತ್‌ ಕೆರೆಹಳ್ಳಿ ಮೇಲೆ ಡೌಟ್ ಇದ್ದಿದ್ದಕ್ಕೆ ನೋಟಿಸ್‌: ಪೂಜೆಗೆ ಪರ್ಮಿಷನ್‌ ಬೇಡ ಎಂದ ಸರ್ಕಾರ

Puneeth Kerehalli

ಬೆಂಗಳೂರು: ಉಪ್ಪಾರಪೇಟೆ ಪೊಲೀಸ್‌ ಠಾಣೆ ಬಳಿಯಿರುವ ನಾಗರಕಟ್ಟೆಯಲ್ಲಿ ಪೂಜೆ ನೆರವೇರಿಸಲು ಮುಂದಾಗಿದ್ದ ರಾಷ್ಟ್ರ ರಕ್ಷಣಾ ಪಡೆಗೆ ನೋಟಿಸ್‌ ಕೊಟ್ಟಿದ್ದು ಅದರ ಆಯೋಜಕ ಪುನೀತ್‌ ಕೆರೆಹಳ್ಳಿ ಕಾರಣಕ್ಕೇ ಹೊರತು ಪೂಜೆಯ ಕಾರಣಕ್ಕೆ ಅಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ವಿಧಾನಪರಿಷತ್‌ನ (Assembly Session) ಶೂನ್ಯ ವೇಳೆಯಲ್ಲಿ ಬಿಜೆಪಿ ಪ್ರಸ್ತಾಪಿಸಿದ್ದಕ್ಕೆ ಗೃಹಸಚಿವ ಡಾ. ಜಿ. ಪರಮೇಶ್ವರ್‌ ಉತ್ತರ ನೀಡಿದ್ದಾರೆ.

ವಿಧಾನ ಪರಿಷತ್ ಶೂನ್ಯ ವೇಳೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕರು ಪುನೀತ್ ಕೆರೆಹಳ್ಳಿ ಪ್ರಕರಣ ಬಗ್ಗೆ ಪ್ರಸ್ತಾಪಿಸಿದ್ದರು. ಅಲ್ಲದೆ, “ಪುನೀತ್ ಕೆರೆಹಳ್ಳಿ ಹಿಂದೂ ದೇವರಿಗೆ ಕೈಮುಗಿಯಲು ಪೋಲಿಸರ ಅನುಮತಿ ಪಡೆಯಬೇಕೆ?” ಎಂದು ಆಕ್ರೋಶ ಹೊರಹಾಕಿದರು.

ಈ ವೇಳೆ ಸರ್ಕಾರದ ಪರವಾಗಿ ಉತ್ತರ ನೀಡಲು ಮುಂದಾದ ಕಂದಾಯ ಸಚಿವ ಕೃಷ್ಣಭೈರೇಗೌಡ, “ಈ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ.‌ ಸಂಬಂಧಿಸಿ ಅಧಿಕಾರಿಯಿಂದ ಮಾಹಿತಿ ಪಡೆದು ಎರಡು ದಿನಗಳಲ್ಲಿ ಸದನಕ್ಕೆ ಉತ್ತರ ನೀಡಲಾಗುವುದು” ಎಂದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಬಿಜೆಪಿ, ಈಗಾಗಲೇ ಉತ್ತರ ಬೇಕು‌ ಎಂದು ಪಟ್ಟುಹಿಡಿದರು. ಈ ವೇಳೆ ಸದನದ ನೀತಿ ನಿಯಮಗಳನ್ನು ಉಲ್ಲೇಖಿಸಿದ ಕೃಷ್ಣಭೈರೇಗೌಡ ” ಸದನದ ನಿಯನ 51ಡಿ ಪ್ರಕಾರ ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಲು ಎರಡು ದಿನಗಳ ಅವಕಾಶ ಇದೆ. ವಿರೋಧ ಪಕ್ಷದ ನಾಯಕರು ದಯವಿಟ್ಟು ನಿಯಮಗಳ ಅನುಸಾರ ಕಲಾಪ ನಡೆಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸಭಾಪತಿ ಬಸವರಾಜ ಹೊರಟ್ಟಿ ಸಹ ಸಚಿವ ಕೃಷ್ಣಭೈರೇಗೌಡ ಅವರ ಮಾತಿಗೆ ದನಿಗೂಡಿಸಿದರು. ಬಿಜೆಪಿಗರು ಗದ್ದಲ ಎಬ್ಬಿಸಿ ಸದನದ ಕಲಾಪಕ್ಕೆ ಅಡ್ಡಿಪಡಿಸಬಾರದು ಎಂದು ಸೂಚಿಸಿದರು. ಸಭಾಪತಿಗಳ ಮಾತಿಗೂ ಕಿವಿಗೊಡದ ಬಿಜೆಪಿ ಸದಸ್ಯರು ಸದನದ ಭಾವಿಗಿಳಿದು ಸಚಿವರು ಈಗಲೇ ಉತ್ತರ ನೀಡಬೇಕು ಎಂದು ಪಟ್ಟುಹಿಡಿದರು. ಸದನದಲ್ಲಿ ಗದ್ದಲ ಉಂಟಾಗಿತ್ತು.

ಈ ವೇಳೆ ವಿರೋಧ ಪಕ್ಷದ ಸದಸ್ಯರ ವರ್ತನೆಯ ವಿರುದ್ಧ ಕಿಡಿಕಾರಿದ ಸಚಿವ ಕೃಷ್ಣಭೈರೇಗೌಡ, ” ನಿಮಯದ ಅನುಸಾರ ಎರಡು ದಿನಗಳಲ್ಲಿ ಉತ್ತರ ನೀಡುವುದಾಗಿ ಹೇಳಿದರೂ ವಿರೋಧ ಪಕ್ಷದ ನಾಯಕರು ಉದ್ದೇಶಪೂರ್ವಕವಾಗಿ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ.

ಇವರಿಗೆ ಸದನ ನಡೆಯುವುದು ಅಗತ್ಯವಿಲ್ಲ. ರಾಜ್ಯವನ್ನು ಲೂಟಿ ಮಾಡುವುದು, ಜನರಿಗೆ ಅನ್ಯಾಯ ಮಾಡುವುದೊಂದೇ ಇವರ ಗುರಿ. ಇವರು ಏನೇ ಗದ್ದಲ ಎಬ್ಬಿಸಿದರು ಸತ್ಯವೇನು? ಎಂಬುದು ಜನರಿಗೆ ಗೊತ್ತು” ಎಂದು ವಾಗ್ದಾಳಿ ನಡೆಸಿದರು. ನಂತರವೂ ಗದ್ದಲ ಮುಂದುವರಿದಿದ್ದರಿಂದ ಸದನವನ್ನು 10 ನಿಮಿಷ ಮುಂದೂಡಲಾಯಿತು.

ಪೂಜೆಗೆ ಅನುಮತಿ ಬೇಕಿಲ್ಲ
ಮತ್ತೆ ಸದನ ಸೇರಿದಾಗ ಗೃಹಸಚಿವ ಡಾ. ಜಿ. ಪರಮೇಶ್ವರ್‌ ಉತ್ತರ ನೀಡಿದರು. ಜುಲೈ 8ರಂದು ರಾಷ್ಟ್ರ ರಕ್ಷಣಾ ಪಡೆಯಿಂದ ನಾಗರಕಟ್ಟೆ ಪೂಜೆಗೆ ಅಹ್ವಾನವಿದ್ದು, ಕಾನೂನು ಸುವ್ಯವಸ್ಥೆಯ ಹಿನ್ನೆಲೆಯಲ್ಲಿ ಅನುಮತಿ ಪಡೆಯಬೇಕೆಂಬ ನೋಟಿಸ್ ನೀಡಲಾಗಿದೆ. ಈ ಕಾರ್ಯಕ್ರಮ ಆಯೋಜಿಸುತ್ತಿರುವ ಪುನೀತ್ ಕೆರೆಹಳ್ಳಿ ಮೇಲೆ 10 ಕೇಸ್ ಇದೆ, ಕೊಲೆ ಪ್ರಕರಣವೂ ಇದೆ. ಹೀಗಾಗಿ ನೋಟಿಸ್ ಕೊಡಲಾಗಿತ್ತೆ ಹೊರತು, ಪೂಜೆ ಮಾಡದಂತೆ ಅಲ್ಲ. ಧಾರ್ಮಿಕ ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆ ಮಾಡಬೇಕೆಂಬ ಯಾವ ಉದ್ದೇಶವೂ ಇಲ್ಲ. ಪೂಜೆ ಮಾಡುವುದಕ್ಕೆ ಯಾವುದೇ ಅನುಮತಿ ಬೇಕಿಲ್ಲ. ಯಾವ ವ್ಯಕ್ತಿ ಪೂಜೆ ಮಾಡ್ತಿದಾರೆ ಎಂಬ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದಾರೆ. ಅವರು ಬೇಲ್ ಮೇಲೆ ಹೊರಗಿದ್ದಾರೆ. ಅವನ ಹಿನ್ನೆಲೆಯ ಕಾರಣದಿಂದ ನೋಟಿಸ್ ನೀಡಲಾಗಿದೆ ಅಷ್ಟೇ ಎಂದರು.

ಮಧ್ಯಪ್ರವೇಶಿಸಿದ ಕೋಟ ಶ್ರೀನಿವಾಸ್ ಪೂಜಾರಿ, ನಾವು ಪ್ರಶ್ನೆ ಎತ್ತಿರೋದು ಪೂಜೆ ಮಾಡುವುದಕ್ಕೆ ಪೊಲೀಸ್ ಅನುಮತಿ ಬೇಕಾ ಎಂಬ ಬಗ್ಗೆ. ಯಾವುದೇ ವ್ಯಕ್ತಿ ಬಗ್ಗೆ ನಾವು ಪ್ರಸ್ತಾಪ ಮಾಡ್ತಿಲ್ಲ. ಪೂಜೆ ಮಾಡೋಕೆ ಅನುಮತಿ ಪಡೆಯಬೇಕಾ? ಇನ್ನು ಮುಂದೆ ಪೂಜೆ ವಿಚಾರಕ್ಕೆ ಅನುಮತಿ ಪಡೆಯಬೇಕು ಅನ್ನೋ ನಿಯಮ ಇರಬಾರದು. ವ್ಯಕ್ತಿ ಮೇಲೆ ಕೇಸ್ ಇದ್ದರೆ ಅದಕ್ಕೆ ಆಕ್ಷೇಪ ಇಲ್ಲ. ಆದರೆ ಪೂಜೆ ಮಾಡೋಕೆ ಅನುಮತಿ ಬೇಕು ಅಂತ ಕೇಳಬಾರದು ಎಂದರು.

ಮತ್ತೆ ಉತ್ತರಿಸಿದ ಡಾ. ಜಿ. ಪರಮೇಶ್ವರ್, ಯಾವ ವ್ಯಕ್ತಿ ಪೂಜೆಗೆ ಕರೆ ಕೊಟ್ಟಿದ್ರೋ ಅವರ ಮೇಲೆ ಸಂಶಯ ಇದೆ. ಪೂಜೆ ‌ಮಾಡಲು ಯಾವುದೇ ಅನುಮತಿ ಬೇಕಿಲ್ಲ. ಆದರೆ ಆಯೋಜನೆ ಮಾಡಿದ್ದ ವ್ಯಕ್ತಿ ಮೇಲೆ ‌ಕ್ರಿಮಿನಲ್ ಕೇಸ್ ಇವೆ. ಹೀಗಾಗಿ ಪೊಲೀಸರು ನೋಟಿಸ್‌ ನೀಡಿದ್ದಾರೆ. ಪೂಜೆ ಮಾಡೋಕೆ ಯಾವುದೇ ಅನುಮತಿ ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

Exit mobile version