ವಿಧಾನ ಪರಿಷತ್: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಲಾಗಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯಲಾಗುವುದು ಎಂಬ ಹೇಳಿಕೆಯಿಂದ ಕಾಂಗ್ರೆಸ್ ಸರ್ಕಾರ ಯೂಟರ್ನ್ ಮಾಡಿದೆ. ಈ ಕುರಿತು ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಪ್ರಶ್ನೆಗೆ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಉತ್ತರಿಸಿದ್ದಾರೆ. (Assembly Session)
ಎಮ್ಮೆ, ಕೋಣಗಳನ್ನು ಕಡಿಯುವುದಾದರೆ ಗೋವನ್ನು ಏಕೆ ಹತ್ಯೆ ಮಾಡಬಾರದು ಎಂದು ಇತ್ತೀಚೆಗೆ ಕೆ. ವೆಂಕಟೇಶ್ ತಿಳಿಸಿದ್ದರು. ಇದರಿಂದ ಬಿಜೆಪಿ ಸದಸ್ಯರು ಸಿಟ್ಟಾಗಿದ್ದರು. ಸಂವಿಧಾನದಲ್ಲೇ ಗೋ ಸಂರಕ್ಷಣೆ ಮಾಡಬೇಕು ಎಂದಿದ್ದರೂ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಗೋಹತ್ಯೆ ನಿಷೇಧವನ್ನು ಹಿಂಪಡೆಯಲು ಹೊರಟಿದೆ ಎಂದಿದ್ದರು.
ಈ ಕುರಿತು ವಿಧಾನ ಪರಿಷತ್‌ನಲ್ಲಿ ಎನ್. ರವಿಕುಮಾರ್ ಸರ್ಕಾರವನ್ನು ಪ್ರಶ್ನಿಸಿದ್ದರು. ಅದಕ್ಕೆ ಕೆ.ವೆಂಕಟೇಶ್ ಲಿಖಿತ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ 2020ನ್ನು ರದ್ದುಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ. ಆದಾಗ್ಯೂ ಗೋಹತ್ಯೆ ನಿಷೇಧ ಕಾಯ್ದೆ 2020ರ ಸಾಧಕ ಬಾದಕಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಉತ್ತರ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎನ್. ರವಿಕುಮಾರ್, ಹಸುಗಳನ್ನ ಏಕೆ ಕಡಿಯಬಾರದು ಎಂದು ಜೂನ್ 3 ರಂದು ಸಚಿವರು ಹೇಳಿದ್ದಾರೆ. ಈಗ ಅಂತಹ ಪ್ರಸ್ತಾಪ ಇಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಸಚಿವರು ವಿವರಣೆ ಕೊಡಬೇಕು. ಬಿಜೆಪಿ ಅವಧಿಯಲ್ಲಿ ತಂದ ವಿಧೇಯಕ ವಾಪಸ್ ಪಡೆಯುವುದಿಲ್ಲ ಎಂದು ಹೇಳಲಿ. ಮೊನ್ನೆ ಮುಸ್ಲಿಮರ ಹಬ್ಬದಲ್ಲಿ ಸಾವಿರಾರು ಗೋ ಹತ್ಯೆ ಆಗಿದೆ. ಈ ಬಗ್ಗೆ ಯಾಕೆ ಕ್ರಮ ಆಗಿಲ್ಲ? ಗೋಹತ್ಯೆ ಮಾಡಿದವರನ್ನ ಬಂಧನ ಮಾಡಿಲ್ಲ ಯಾಕೆ ಎಂದು ಉತ್ತರ ಕೊಡಬೇಕು ಎಂದರು.
ಇದಕ್ಕೆ ಉತ್ತರಿಸಿದ ವೆಂಕಟೇಶ್, ನಾನು ಮೈಸೂರಿನಲ್ಲಿ ಕ್ಯಾಶುವಲ್ ಆಗಿ ಮಾತಾಡಿದ್ದೇನೆ. ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುವ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು. ಸಚಿವರ ಉತ್ತರಕ್ಕೆ ಒಪ್ಪದ ಬಿಜೆಪಿ ಸದಸ್ಯರು, ಸಭಾಪತಿಯವರ ಆಸನದ ಎದುರು ಪ್ರತಿಭಟನೆ ನಡೆಸಿದರು. ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಇಲ್ಲ ಎಂದಿದ್ದಕ್ಕೆ ಮೊನ್ನೆ ಸಾವಿರರು ಹಸು ಕಡಿದಿದ್ದಾರೆ. ಇವರ ಮೇಲೆ ಯಾಕೆ ಕ್ರಮ ಆಗಿಲ್ಲ ಅಂತ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಗೋ ರಕ್ಷಕರಿಗೆ ಶಿಕ್ಷೆ, ಗೋ ಹತ್ಯೆ ಮಾಡೋರಿಗೆ ಪುರಸ್ಕಾರ ನೀಡಲಾಗುತ್ತಿದೆ. ಗೋಹತ್ಯೆ ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಭಾರತಿ ಶೆಟ್ಟಿ ಘೋಷಣೆ ಕೂಗಿದರು. ಪರಿಷತ್ ಕಲಾಪವನ್ನು ಮದ್ಯಾಹ್ನ 3 ಗಂಟೆಗೆ ಸಭಾಪತಿ ಬಸವರಾಜ ಹೊರಟ್ಟಿ ಮುಂದೂಡಿದರು. ಮತ್ತೆ ಕಲಾಪ ಸೇರಿದಾಗಲೂ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದರು.
ಇದನ್ನೂ ಓದಿ: Cow Slaughter: ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಡಿ: ಸಚಿವ ಕೆ. ವೆಂಕಟೇಶ್ ಮಾತಿಗೆ ರೈತ ಸಂಘ ಆಕ್ಷೇಪ
ಸಧ್ಯಕ್ಕೆ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಪಡಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಆದಾಗ್ಯೂ ಗೋಹತ್ಯೆ ನಿಷೇಧ ಕಾಯ್ದೆ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಸಚಿವರು ಉತ್ತರಿಸಿರಿದ್ದಾರೆ. ಸಚಿವರು ಮೈಸೂರಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಎಮ್ಮೆ ಕೋಣ ಕಡಿಯುವುದಾದರೆ ಹಸು ಯಾಕೆ ಕಡಿಯಬಾರದು ಎಂದು ಹೇಳಿದ್ದಾರೆ. ಇವರು ನಿಲುವು ಸ್ಪಷ್ಟವಾಗಿಲ್ಲ. ಅವರು ಗೋಹತ್ಯೆ ಕಾಯ್ದೆ ವಾಪಸ್ ಪಡೆಯುತ್ತಾರೋ ಇಲ್ಲವೋ? ಅಥವಾ ಅವರು ನೀಡಿರುವ ಹೇಳಿಕೆ ವಾಪಸ್ ಪಡೆಯುತ್ತಾರೋ ಸ್ಪಷ್ಟವಾಗಿ ಹೇಳಲಿ ಎಂದು ಎನ್. ರವಿಕುಮಾರ್ ಹೇಳಿದರು.
ಇದಕ್ಕೆ ಸಚಿವ ಕೆ. ವೆಂಕಟೇಶ್ ಉತ್ತರಿಸಿ, ನಾನು ಸರ್ಕಾರದ ನಿಲುವನ್ನ ಹೇಳಿದ್ದೇನೆ. ಗೋಹತ್ಯೆ ನಿಷೇಧ ಈಗಾಗಲೇ ರಾಜ್ಯದಲ್ಲಿ ಇದೆ. ಕೆಲವೆಡೆ ಪ್ರಕರಣಗಳು ಕೂಡ ದಾಖಲಾಗಿದೆ ಎಂದರು. ಈ ಬಗ್ಗೆ ಚರ್ಚೆ ಮಾಡಲು ಅರ್ಧಗಂಟೆ ಅವಕಾಶ ಮಾಡಿಕೊಡುವಂತೆ ಬಿಜೆಪಿ ಸದಸ್ಯರ ಒತ್ತಾಯ ಮಾಡಿದರು. ಅವಕಾಶ ಮಾಡಿಕೊಡುವುದಾಗಿ ಸಭಾಪತಿ ಹೇಳಿದ ನಂತರ ಬಿಜೆಪಿ ಸದಸ್ಯರು ಪ್ರತಿಭಟನೆ ಹಿಂಪಡೆದರು.