ಬೆಂಗಳೂರು: ಕಾಂಗ್ರೆಸ್ ಸರ್ಕಾರ ವಿಧಾನಸಭೆ (Assembly Session) ಚುನಾವಣೆಗೂ ಮುನ್ನ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಅನೇಕ ಇಲಾಖೆಗಳಿಗೆ ಟಾರ್ಗೆಟ್ ಹೆಚ್ಚಿಸಿದ್ದು, ಕಂದಾಯ ಇಲಾಖೆಗೂ 6 ಸಾವಿರ ಕೋಟಿ ರೂ. ಗುರಿ ಹೆಚ್ಚಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ರಾಜ್ಯದ ಬಜೆಟ್ ಗಾತ್ರವೂ ಹೆಚ್ಚಳವಾಗಿದೆ. ಇದರ ಜತೆಗೆ ತೆರಿಗೆ ಇಲಾಖೆ, ಅಬಕಾರಿ ಇಲಾಖೆಗಳಿಗೂ ಗುರಿ ಹೆಚ್ಚಿಸಲಾಗಿದೆ. ಅದರಂತೆ 2021-22ರಲ್ಲಿ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಕಂದಾಯ ಇಲಾಖೆಯ, ನೋಂದಣಿ ಮತ್ತು ಮುದ್ರಾಂಕ ಶೂಲ್ಕದಿಂದ 15 ಸಾವಿರ ಕೋಟಿ ರೂ. ನಿರೀಕ್ಷೆ ಮಾಡಲಾಗಿತ್ತು. ಆದರೆ ವರ್ಷದ ಅಂತ್ಯಕ್ಕೆ ಅದು ಗುರಿ ಮೀರಿ 17 ಸಾವಿರ ಕೋಟಿ ರೂ. ಸಂಗ್ರಹವಾಗಿತ್ತು. ಫೆಬ್ರವರಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ನಲ್ಲಿ ಗುರಿಯನ್ನು 19 ಸಾವಿರ ಕೋಟಿ ರೂ.ಗೆ ಏರಿಕೆ ಮಾಡಲಾಗಿತ್ತು. ಆದರೆ ಇದೇ ವರ್ಷ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಗುರಿಯನ್ನು 25 ಸಾವಿರ ಕೋಟಿ ರೂ.ಗೆ ಹೆಚ್ಚಿಸಿದ್ದಾರೆ.
ಈ ಹೆಚ್ಚುವರಿ 6 ಸಾವಿರ ಕೋಟಿ ರೂ. ಸಂಗ್ರಹಿಸುವ ಸಲುವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಸರ್ಕಾರ ಹೆಚ್ಚಿಸುತ್ತದೆ ಎಂಬ ಅನುಮಾನಗಳಿದ್ದವು. ಆದರೆ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಹೆಚ್ಚಳ ಮಾಡಿದರೆ ಜನರಿಂದ ವಿರೋಧ ಹಾಗೂ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಬಹುದು ಎಂಬ ಕಾರಣಕ್ಕೆ ಸರ್ಕಾರ ಬುದ್ಧಿವಂತಿಕೆಯ ʼಮಾರ್ಗʼ ಕಂಡುಕೊಂಡಿದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಬದಲಿಗೆ, ಜಮೀನಿನ ಮಾರ್ಗಸೂಚಿ ದರವನ್ನೇ (Guidance Value) ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ವಿಧಾನ ಪರಿಷತ್‌ನಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಉತ್ತರ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ವಿರೋಧ ಪಕ್ಷದ ಸದಸ್ಯರಾದ ಮುನಿರಾಜೇಗೌಡ ಅವರು, ಮುದ್ರಾಂಕ ಶುಲ್ಕ ಪರಿಷ್ಕರಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಸರ್ಕಾರಕ್ಕೆ ಮುದ್ರಾಂಕ ಶುಲ್ಕ ಪರಿಷ್ಕರಿಸುವ ಆಲೋಚನೆ ಇಲ್ಲ. ಆದರೆ, ರೈತರಿಗಾಗುತ್ತಿರುವ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ ಜಮೀನಿನ ಮೌಲ್ಯ ಪರಿಷ್ಕರಣೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕೃಷ್ಣಭೈರೇಗೌಡ ಹೇಲಿದ್ದಾರೆ. “ಮುದ್ರಾಂಕ ಶುಲ್ಕವನ್ನು ಪರಿಷ್ಕರಿಸುವ ಬಗ್ಗೆ ಸರ್ಕಾರಕ್ಕೆ ಯಾವುದೇ ಆಲೋಚನೆ ಇಲ್ಲ. ಆದರೆ ಜಮೀನಿನ ಮೌಲ್ಯ ಪರಿಷ್ಕರಣೆ ನಡೆಸಿ ಕನಿಷ್ಟ ನಾಲ್ಕು ವರ್ಷವಾಗಿದೆ. ಹೀಗಾಗಿ ಜಮೀನು ಮೌಲ್ಯ ಪರಿಷ್ಕರಣೆ ನಡೆಸಲಾಗುವುದು. ಜಮೀನಿನ ಮೌಲ್ಯ ಪರಿಷ್ಕರಣೆಯ ಆಧಾರದಲ್ಲಿ ರೈತರ ಭೂಮಿಗಳಿಗೆ ಮಾರುಕಟ್ಟೆ ಮೌಲ್ಯ ನಿಗದಿಯಾಗುತ್ತದೆ. ಆದರೆ, ಕಳೆದ ನಾಲ್ಕು ವರ್ಷದಿಂದ ಮೌಲ್ಯ ಪರಿಷ್ಕರಣೆಯಾಗದ ಕಾರಣ ರೈತರಿಗೆ ಅನ್ಯಾಯವಾಗುತ್ತಿದೆ. ರೈತರು ಜಮೀನು ಮಾರಾಟಕ್ಕೆ ಮುಂದಾಗುವಾಗ ಅವರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಅಲ್ಲದೆ, ಜಮೀನು ಮಾರಾಟ ಪ್ರಕ್ರಿಯೆಯಲ್ಲಿ ಹಣ ವಹಿವಾಟು ಅಧಿಕವಾಗಿದ್ದು ಕಪ್ಪು ಹಣ ಪರಿವರ್ತನೆಗೂ ಕಾರಣವಾಗಿದೆ. ಹೀಗಾಗಿ ಜಮೀನಿನ ಮೌಲ್ಯವನ್ನು ಶೀಘ್ರದಲ್ಲೇ ಪರಿಷ್ಕರಿಸಲಾಗುವುದು” ಎಂದು ಸ್ಪಷ್ಟನೆ ನೀಡಿದರು.
ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ಅಂದರೆ ರೈತರಿಗೆ ಅನ್ಯಾಯ ಆಗುತ್ತಿದೆ ಎಂಬ ಕಾರಣ ನೀಡಿ ಮಾರ್ಗಸೂಚಿ ದರವನ್ನು ಹೆಚ್ಚಿಸಿದರೆ ಸರ್ಕಾರಕ್ಕೆ ನೇರವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಆದಾಯ ಹೆಚ್ಚಾಗುತ್ತದೆ. ಈ ಮೂಲಕ, ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಾಗಿರುವ ಹಣವನ್ನು ಹೊಂದಿಸಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲ್ಯಾನ್ ಮಾಡಿದೆ.
ಮೂಲಭೂತ ಸೌಕರ್ಯ ಕಲ್ಪಿಸಿ
ಇದೇ ಸಂದರ್ಭದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದೂ ಪರಿಷತ್ ಸದಸ್ಯ ಮುನಿರಾಜೇಗೌಡ ಸದನದ ಗಮನ ಸೆಳೆದರು. ” ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಅಧಿಕ ಸಂಖ್ಯೆಯಲ್ಲಿ ಜನ ಬರುವ ಕಾರಣ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಆದರೆ ಮುಂದಿನ ಒಂದು ವರ್ಷದಲ್ಲಿ ಎಲ್ಲ ಕಚೇರಿಗಳಲ್ಲೂ ಉತ್ತಮ ಜನಸ್ನೇಹಿ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗುತ್ತದೆ. ಪಾಸ್‌ಪೋರ್ಟ್ ಕಚೇರಿಗಳ ಮಾದರಿಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲೂ ಉತ್ತಮ ಮೂಲಭೂತ ಸೌಲಭ್ಯ ನೀಡಲಾಗುವುದು” ಎಂದು ಕೃಷ್ಣ ಭೈರೇಗೌಡ ಭರವಸೆ ನೀಡಿದರು.