Site icon Vistara News

Assembly Session : ಎಚ್.ಡಿ. ಕುಮಾರಸ್ವಾಮಿ ಸುಳ್ಳು ಹೇಳಿದ್ರು; ಮೋದಿಗೆ ಪ್ಯಾಪ್ಯುಲಾರಿಟಿ ಇದೆ: ಸಿಎಂ ಸಿದ್ದರಾಮಯ್ಯ

CM Siddaramaia assembly Session

ವಿಧಾನಸಭೆ: 2015ರಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ (BJP national executive meeting) ನಡೆದಿತ್ತು. ಆಗ ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ (Ananth Kumar) ಅವರು ಸಭೆಗೆ ಬರುವವರನ್ನು ರಾಜ್ಯ ಅತಿಥಿಗಳೆಂದು ಪರಿಗಣಿಸಿ ಎಂದು ಕೇಳಿಕೊಂಡಿದ್ದರು. ಆಗ ನಿರ್ಮಲಾ ಸೀತಾರಾಮನ್, ಥಾವರ್ ಚಂದ್ ಗೆಹ್ಲೋಟ್ ಮುಂತಾದವರನ್ನು ರಾಜ್ಯದ ಅತಿಥಿಗಳು ಎಂದು ಪರಿಗಣಿಸಿದೆವು. ಆಗ ಅವರೆಲ್ಲ ದೇಶದ ವಿಚಾರ ಚರ್ಚೆ ಮಾಡಲು ಬಂದಿದ್ದರೇ? ಇಲ್ಲವಲ್ಲಾ? ಅವರೆಲ್ಲ ಪಕ್ಷದ ವಿಚಾರ ಚರ್ಚೆ ಮಾಡಿ ಹೋದರು. ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸಹ ಸುಳ್ಳು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಬಜೆಟ್ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಉತ್ತರ ನೀಡಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೆಡಿಎಸ್ ಲೀಡರ್ ಎಚ್.ಡಿ. ಕುಮಾರಸ್ವಾಮಿಯವರು ಇದ್ದಾರಲ್ಲ. ಅವರು 21-05-2018ರಲ್ಲಿ ಸಿಎಂ ಆಗಿ ಪ್ರಮಾಣ ವಚನ ತೆಗೆದುಕೊಂಡರು. ಆಗ ವಿಪಕ್ಷಗಳ ನಾಯಕರನ್ನೆಲ್ಲ ಕರೆದಿದ್ದರು. ಅವತ್ತು ಬಹಳ ಜನ ಲೀಡರ್‌ಗಳು ಬಂದಿದ್ದರು. ಇದೇ ಮಮತಾ ಬ್ಯಾನರ್ಜಿ, ಮಾಯಾವತಿ ಎಲ್ಲರೂ ಬಂದಿದ್ದರು. ಆವಾಗ ಅವರನ್ನು ಪ್ರೋಟೋಕಾಲ್ ಪ್ರಕಾರ ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದರು. ಆದರೆ, ಪ್ರಮಾಣ‌ ವಚನದಲ್ಲೇ ಐಎಎಸ್ ಅಧಿಕಾರಿಗಳ ನಿಯೋಜನೆ ಮಾಡಿಲ್ಲ ಎಂದು ಹೇಳುತ್ತಾರಲ್ಲ? ಡ್ಯಾನಿಶ್ ಅಲಿ ಅನ್ನುವವರಿಗೆ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿದ್ದರು. ಇವರು ಎರಡು ಬಾರಿ ಸಿಎಂ ಆಗಿದ್ದಂಥವರು. ಸತ್ಯ ಹೇಳುತ್ತಾರೆ ಅಂದುಕೊಂಡಿದ್ದೆ. ಸುಳ್ಳು ಹೇಳಿಬಿಟ್ಟಿದ್ದಾರೆ ಎಂದು ಕುಟುಕಿದರು.

ಇದನ್ನೂ ಓದಿ: Weather Report : ಇನ್ನೈದು ದಿನ ಮಳೆಮಯ; ಬೆಂಗಳೂರಲ್ಲಿ ಮಾಯ

ಐಎಎಸ್‌ ಅಧಿಕಾರಿಗಳ ಬಳಕೆ ಸಮರ್ಥನೆ

ರಾಜಕೀಯಕ್ಕಾಗಿ ಬಿಜೆಪಿ – ಜೆಡಿಎಸ್‌ನವರು ಒಂದಾಗಿ ಬಾವಿಗೆ ಇಳಿದಿದ್ದಾರೆ. ಬಾವಿಗೆ ಇಳಿಯಲಿ, ಆದರೆ ಅನಾಗರಿಕವಾಗಿ ವರ್ತನೆ ಮಾಡಿದ್ದು ನನಗೆ ಬೇಸರ ತಂದಿದೆ. ಕೆಟ್ಟ ಭಾಷೆಯಲ್ಲಿ ಮಾತನಾಡಿ ಪೀಠಕ್ಕೆ ಅಗೌರವ ತೋರಿದ್ದಾರೆ. ಇವರಿಗೆ ವಿರೋಧ ಪಕ್ಷದಲ್ಲಿ ಕೂರೋಕೆ ಸಹ ಅರ್ಹತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಈ ಮೂಲಕ ಮಹಾಘಟಬಂಧನ್‌ ಕಾರ್ಯಕ್ರಮಕ್ಕೆ ಉನ್ನತ ಮಟ್ಟದ ಐಎಎಸ್‌ ಅಧಿಕಾರಿಗಳನ್ನು ನೇಮಕ ಮಾಡಿರುವುದನ್ನು ಸಮರ್ಥನೆ ಮಾಡಿಕೊಂಡರು.

ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮೀಟಿಂಗ್ ಮಾಡಿದ್ದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. “ಇಂಡಿಯಾ” ಹೆಸರಲ್ಲಿ ನಾವು ಒಂದಾಗಿದ್ದನ್ನು ಸಹಿಸಲು ಇವರಿಗೆ ಆಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಟೀಕೆಯನ್ನೂ ಸ್ವಾಗತ ಮಾಡುತ್ತೇನೆ

ಬಜೆಟ್ ಮೇಲೆ 67 ಜನ ಮಾತಾಡಿದ್ದಾರೆ. 12 ಗಂಟೆ 57 ನಿಮಿಷಗಳ ಕಾಲ ಮಾತಾಡಿದ್ದಾರೆ. ಕೆಲವರು ಒಳ್ಳೆಯ ಬಜೆಟ್ ಎಂದಿದ್ದರೆ, ಇನ್ನು ಕೆಲವರು ಟೀಕೆ ಮಾಡಿದ್ದಾರೆ. ಕೆಲವರು ಸ್ವಾಗತ ಮಾಡಿದ್ದಾರೆ. ನಾನು ಒಳ್ಳೆಯದು ಹಾಗೂ ಟೀಕೆ ಮಾಡಿದ್ದನ್ನು ಸ್ವಾಗತ ಮಾಡುತ್ತೇನೆ. ನಾನು ಹದಿನಾಲ್ಕು ಬಜೆಟ್ ಮಂಡನೆ ಮಾಡಿದ್ದೇನೆ. ಮೊದಲ ಬಾರಿಗೆ ವಿಪಕ್ಷಗಳು ಇಲ್ಲದೆ ಉತ್ತರ ನೀಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದು ಬಹಳ ದುಃಖದ ಸಂಗತಿ. ಕರ್ನಾಟಕದ ಇತಿಹಾಸದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಬಜೆಟ್ ಎರಡು ಬಹಳ ಪ್ರಮುಖ ಆಗಿದೆ, ಈ ಎರಡು ವಿಷಯಗಳ ಕಾಲ ಮೇಲೆ ವಿಪಕ್ಷ ನಾಯಕ ಇಲ್ಲದೆ, ಚರ್ಚೆ ನಡೆದಿರೋದು ಇದೇ ಮೊದಲು ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ರಾಜಕೀಯವಾಗಿ ಬಿಜೆಪಿ ದಿವಾಳಿ ಆಗಿದೆ

1983ರಿಂದ ನಾನು ಸದನದಲ್ಲಿ ಇದ್ದೇನೆ. ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ. ರಾಜಕೀಯವಾಗಿ ಬಿಜೆಪಿ ದಿವಾಳಿ ಆಗಿದೆ. ಇದು ಪ್ರಜಾಪ್ರಭುತ್ವಕ್ಕೆ‌ ಮಾರಕ. ಇವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಯಾವುದೇ ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಎಲ್ಲ ಪಕ್ಷಗಳು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಸಂವಿಧಾನದ ಆಶಯಗಳ ಉಳಿಸುವುದು ಎಲ್ಲ ರಾಜಕೀಯ ಪಕ್ಷಗಳ ಕರ್ತವ್ಯ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: BJP Politics : ದಿಲ್ಲಿಯಲ್ಲಿ ರಾಜ್ಯ ಬಿಜೆಪಿ ಸಂಚಲನ; ಮೋದಿ ಜತೆ ತೇಜಸ್ವಿನಿ ಅನಂತಕುಮಾರ್, ಅಮಿತ್‌ ಶಾ ಜತೆ ವಿಜಯೇಂದ್ರ

ಬಿಜೆಪಿಗೆ ರಾಜ್ಯದ ಆಗುಹೋಗುಗಳ ಬಗ್ಗೆ ಕಾಳಜಿ ಇಲ್ಲ

ಗಲಾಟೆ, ಗೊಂದಲ, ಪ್ರತಿಭಟನೆಯಲ್ಲಿ ಬಿಜೆಪಿಯವರು, ಕಾಲಹರಣ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡೋದು ಎಲ್ಲರ ಹಕ್ಕು. ಆದರೆ, ವಿರೋಧಕ್ಕೆ ವಿರೋಧ ಮಾಡೋದು ಸರಿಯಲ್ಲ. ಕಾಂಗ್ರೆಸ್ ಪಕ್ಷದಿಂದ ಚರ್ಚೆಯಲ್ಲಿ 32 ಸದಸ್ಯರು ಭಾಗವಹಿಸಿದ್ದಾರೆ. ಅಧಿಕೃತ ವಿರೋಧ ಪಕ್ಷದ ಬಿಜೆಪಿಯಲ್ಲಿ 20 ಜನ ಮಾತ್ರ ಮಾತನಾಡಿದ್ದಾರೆ. ಜೆಎಡಿಎಸ್‌ನಲ್ಲಿ 7 ಜನ ಮಾತ್ರ ಮಾತನಾಡಿದ್ದಾರೆ. 3 ಪಕ್ಷೇತರ ಸದಸ್ಯರು ಮಾತನಾಡಿದ್ದಾರೆ. ಬಿಜೆಪಿಗೆ ರಾಜ್ಯದ ಆಗುಹೋಗುಗಳ ಬಗ್ಗೆ ಕಾಳಜಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಆಗು-ಹೋಗುಗಳ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಬಜೆಟ್ ರಾಜ್ಯದಲ್ಲಿ ಮುಖ್ಯವಾದ ದಾಖಲೆಯಾಗಿದೆ. ಅವರಿಗೆ ಕರ್ತವ್ಯಕ್ಕಿಂತ ರಾಜಕೀಯವೇ ಮುಖ್ಯವಾಗಿದೆ. ಜನರ ಕೊಟ್ಟ ತೀರ್ಪಿನ ಬಗ್ಗೆ ಗೌರವ ಇಲ್ಲ. ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದ್ದೇವೆ. ಕಾಂಗ್ರೆಸ್ ಮುಕ್ತ ದೇಶ ಎಂದರು. ನಾವು ಬಿಜೆಪಿ ಮುಕ್ತ ಎಂದು ಹೇಳಲ್ಲ. ಆದರೆ, ಕೋಮುವಾದಿಗಳು ಅಧಿಕಾರಕ್ಕೆ ಬರಬಾರದು. ಬಿಜೆಪಿಯವರು ಶಾಶ್ವತವಾಗಿ ವಿಪಕ್ಷದಲ್ಲಿ ಇರಲಿ. ಬಿಜೆಪಿ ಅವನತಿ ಕರ್ನಾಟಕದಿಂದ ಶುರುವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೋದಿಗೆ ಪ್ಯಾಪ್ಯುಲಾರಿಟಿ ಇದೆ

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಮೇಲೆ ಅವಲಂಬನೆ ಆಗಿದ್ದಾರೆ. ಮೋದಿ ಅವರಿಗೆ ಪಾಪ್ಯುಲಾರಿಟಿ (Modi Popularity) ಇಲ್ಲ ಎಂದು ನಾ ಹೇಳಲ್ಲ. ಆದರೆ, ಅದು ಕಡಿಮೆ ಆಗಿದೆ. ರಾಜ್ಯಕ್ಕೆ 28 ಬಾರಿ ಮೋದಿಯವರು ಬಂದಿದ್ದರು. ಅವರು ಎಲ್ಲೆಲ್ಲಿ ಬಂದಿದ್ದರು, ಅಲ್ಲಿ ನಾವು ದೊಡ್ಡ ಅಂತರದಿಂದ ಜಯ ಪಡೆದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕೇಶವಾ ಕೃಪಾದವರು (Keshav Krupa) ಇವರನ್ನು ವಾಚ್ ಮಾಡುತ್ತಿದ್ದಾರೆ. ಅವರು ಮೆಚ್ಚಿಕೊಳ್ಳಲಿ ಎಂದು ಇಲ್ಲಿ ನಾಟಕ ಮಾಡುತ್ತಿದ್ದಾರೆ. ಆದರೆ, ಇವರು ಎಷ್ಟೇ ನಾಟಕ ಮಾಡಿದರೂ ಬರುವ ಚುನಾವಣೆಯಲ್ಲಿ ಗೊತ್ತಾಗುತ್ತದೆ. ಇವರ ಯಾವುದೇ ಚುನಾವಣೆಗಳಲ್ಲೂ ಹೆಚ್ಚು ಮತಗಳನ್ನು ಪಡೆದಿಲ್ಲ. ಆದರೆ, ನಮ್ಮ ಮತಗಳ ಪರ್ಸೆಂಟೇಜ್ ಜಾಸ್ತಿ ಆಗುತ್ತಲೇ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ, ಬಜೆಟ್‌ ಮೇಲಿನ ಭಾಷಣಕ್ಕಿಂತ ಬಿಜೆಪಿ ವಿರುದ್ಧವೇ ಹೆಚ್ಚು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Honorary doctorate : ಮಾಜಿ ಸಿಎಂ ಬಿಎಸ್‌ವೈ ಅವರು ಇನ್ನು ಡಾ. ಬಿ.ಎಸ್‌ ಯಡಿಯೂರಪ್ಪ

ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ

ಬಿಜೆಪಿಯವರು ಸದನದಲ್ಲಿ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಅಸಭ್ಯ ಎನ್ನುವುದು ಗೌರವಯುತ ಪದ. ಬಿಜೆಪಿಯವರು ಅನಾಗರಿಕರು. ನಾವು ಎರಡು ಬಾರಿ 80 ಜನ ಗೆದ್ದಾಗಲೂ ಈ ರೀತಿಯ ನಡೆದುಕೊಂಡಿರಲಿಲ್ಲ. ಸ್ಪೀಕರ್ ‌ಮೇಲೆ ಪತ್ರ ಎಸೆದಿರಲಿಲ್ಲ. ಪಾಪ ಅವರ ಮುಖ ಸಪ್ಪೆ ಆಗಿದೆ. ಭಯಪಡಬೇಡಿ ನಾವು ಇದ್ದೇವೆ. ಮಾರ್ಷಲ್‌ಗಳು ಇಲ್ಲದೆ ಹೋಗಿದ್ದರೆ ಮ್ಯಾನ್ ಹ್ಯಾಂಡಲಿಂಗ್ ಮಾಡುತ್ತಿದ್ದರೋ ಏನೋ? ಎಂದು ಹೇಳಿದ ಸಿಎಂ ಸಿದ್ದರಾಮಯ್ಯ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನವನ್ನು ಗೆಲ್ಲುತ್ತೇವೆ. ಜನ ಗ್ಯಾರಂಟಿಗಳಿಂದ ಖುಷಿಯಾಗಿದ್ದಾರೆ ಎಂದು ಹೇಳಿದರು.

Exit mobile version