Site icon Vistara News

Assembly Session : ಆವತ್ತು ಹಣ ಪಡೆದಾಗ ನನ್ನ ಕೈ ಗೋಲ್ಡನ್‌ ಹ್ಯಾಂಡ್‌ ಆಗಿತ್ತು, ಈಗ ನಾನು ವಿಕಲಚೇತನನಾ?: ಸಿ.ಟಿ. ರವಿ ವಿರುದ್ಧ ಸಿಡಿದ ಕುಮಾರಸ್ವಾಮಿ

Kumaraswamy - CT Ravi

#image_title

ಬೆಂಗಳೂರು: ʻʻಆವತ್ತು ಸಾಲ ತೀರಿಸಲು ಆಗಲ್ಲ ಅಂತ ನನ್ನ ಬಳಿ ಬಂದಿದ್ರಲ್ಲ.. ಸಹಾಯ ಮಾಡಿದ ನಂತರ ನೀವು ಬಂದು ಅಣ್ಣ ನಿನ್ನದು ಕೈಯಲ್ಲಾ.. ಗೋಲ್ಡನ್‌ ಹ್ಯಾಂಡ್‌ ಅಂತ ಹೇಳಿದ್ಯಲ್ಲಾ.. ಆಗ ನನ್ನ ಕೈ ಗೋಲ್ಡನ್‌ ಹ್ಯಾಂಡ್‌ ಆಗಿತ್ತು. ಈಗ ವಿಕಲಚೇತನ ಅಂತೀರಲ್ಲಾ..ʼʼ- ಹೀಗೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ. ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (Assembly Session).

ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಎಚ್‌.ಡಿ. ಕುಮಾರಸ್ವಾಮಿ ಅವರು, ʻʻಜೆಡಿಎಸ್ ವಿಕಲಚೇತನ ಪಕ್ಷ ಅಂತ ಸಿ.ಟಿ. ರವಿ ಅವರು ಹೇಳಿದ್ದಾರೆ. ನಾವು ಅವಕಾಶವಾದಿ ರಾಜಕಾರಣಿಗಳೂ ಅಂತ ಹೇಳಿದ್ದಾರೆ. ರಾಜಕಾರಣದಲ್ಲಿ ವಿಕಲಾಂಗ ವ್ಯವಸ್ಥೆ ಇರಬಾರದು ಎಂದು ಹೇಳಿದ್ದಾರೆ. ಈ ರಾಜ್ಯದಲ್ಲಿ ವಿಕಲಚೇತರಿಗೆ ಶಕ್ತಿ ತುಂಬಿದವರು ಈ ಕುಮಾರಸ್ವಾಮಿ. ನಮ್ಮ ಸರಕಾರದ ಅವಧಿಯಲ್ಲಿ ವಿಕಲಚೇತನರಿಗೆ ಇಂಧನ ಇಲಾಖೆಯಲ್ಲಿ ನೌಕರಿ ಕೊಟ್ಟಿದ್ದೆʼʼ ಎಂದು ಹೇಳಿದರು.

ಈ ಹಿಂದೆ ಅಧಿವೇಶನದಲ್ಲಿ ಮಾತನಾಡಿದ್ದ ಸಿ.ಟಿ. ರವಿ ಅವರು ಜೆಡಿಎಸ್‌ ಕುರಿತು ಒಂದು ಕಥೆ ಹೇಳಿದ್ದರು: ಹಲವು ವರ್ಷ ಕಾದು ದಂಪತಿಗೆ ಅಂಗವಿಕಲ ಮಗು ಹುಟ್ಟಿತು. ಅಂಗವಿಕಲ ಮಗು ಹುಟ್ಟಿದಾಗ ಮಗುವಿನ ಮಾವ ಅದರ ಲಾಭ ಪಡೆದ. ಅಂಗವಿಕಲ ಮಗುವನ್ನು ನೋಡಲು ಟಿಕೆಟ್ ಇಟ್ಟ. ಒಂದು ದಿನ ಮಗು ಸತ್ತಾಗ ಮಾವನಿಗೆ ತುಂಬಾ ಬೇಸರ ಆಯ್ತು. ಮಗು ಇದ್ದರೆ ಟಿಕೆಟ್ ಮೂಲಕ ಹಣ ಸಂಪಾದನೆಯಾಗ್ತಿತ್ತು ಎಂದು ಅವನು ಬೇಸರಗೊಂಡ. ಕೆಲವರು ಅಂಗವಿಕಲ ಮಗು ಹುಟ್ಟಲಿ ಅಂತ ಕಾಯ್ತಾ ಇರುತ್ತಾರೆ. ರಾಜಕಾರಣ ಬ್ಯುಸಿನೆಸ್ ಅಲ್ಲ. ಅಂಗವಿಕಲ ಮಗು ಹುಟ್ಟಿದರೆ ಕಲೆಕ್ಷನ್ ಏಜೆಂಟ್ ಹುಟ್ಟಿಕೊಳ್ಳುತ್ತಾರೆ. ಕಲೆಕ್ಷನ್ ಗೇಟ್ ಇಟ್ಟುಕೊಳ್ಳುವುದನ್ನು ತಡೆಯಬೇಕಿದೆ. ಅದಕ್ಕಾಗಿ ಒಳ್ಳೆಯ ಮಗು ಹುಟ್ಟುವ ಅಗತ್ಯವಿದೆ. ಯಾರ ಹಂಗೂ ಇಲ್ಲದ ಸರ್ಕಾರ ರಚನೆಯಾಗಬೇಕು ಅನ್ನೋದು ನಮ್ಮ ಆಶಯ- ಎಂದು ಹೇಳಿದ್ದರು.

ಅಧಿವೇಶನ ಆರಂಭವಾಗಿ ಏಳು ದಿನಗಳ ಬಳಿಕ ಮೊದಲ ಬಾರಿಗೆ ವಿಧಾನಸಭೆಗೆ ಬಂದ ಕುಮಾರಸ್ವಾಮಿ, ಸದನದಲ್ಲಿ ರೈತರ ಸಮಸ್ಯೆ ಪ್ರಸ್ತಾಪಿಸಿದರು, ಡಬಲ್‌ ಎಂಜಿನ್‌ ಸರ್ಕಾರದ ನಡೆಗಳನ್ನು ಟೀಕಿಸಿದರು. ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿವರಿಸಿದರು.

ʻʻಕಲಬುರಗಿ ಜಿಲ್ಲೆಯೊಂದರಲ್ಲೆ 25 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಬಲ್ ಎಂಜಿನ್ ಸರ್ಕಾರದ ಕೊಡುಗೆ ಇದೇನಾ?ʼʼ ಎಂದು ಪ್ರಶ್ನಿಸಿದರು. ʻʻ ನಾನು ಮಾಡಿದ ಸಾಲಮನ್ನಾದಿಂದ ಇಂದು ಅದೆಷ್ಟೋ ರೈತರು ಉಳಿದಿದ್ದಾರೆʼʼ ಎಂದರು.

ʻʻತುತ್ತು ಕೊಟ್ಟ ರೈತನಿಗೆ, ಕುತ್ತು ತಂದ ಸರ್ಕಾರ ಎಂದು ನಾಟಕ ತಂಡವೊಂದು ನಾಟಕ ಮಾಡೋದನ್ನು ನಿನ್ನೆ ಮಾರ್ಗ ಮಧ್ಯೆ ನೋಡಿದ್ದೇನೆ. ನಿಜವೆಂದರೆ ನಮಗೆ ಪೂರ್ಣ ಪ್ರಮಾಣದಲ್ಲಿ ಬಹುಮತ ಬಾರದೆ ಹೋದರೂ ನಾವು ಕೆಲಸ ಮಾಡಿದ್ದೇವೆ. ನಾವು ನಮ್ಮ ಭರವಸೆಗಳನ್ನು ಮಾತ್ರವಲ್ಲ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರಿಸಿದ್ದೇವೆʼʼ ಎಂದು ಸಮರ್ಥಿಸಿದರು.

ಸಾಲ ಮನ್ನಾ ಮಾಡಿದ ಬ್ಯಾಂಕ್‌ಗಳಿಂದ ನೋಟಿಸ್‌

ತಮ್ಮ ಸರಕಾರದ ಅವಧಿಯಲ್ಲಿ ಸಾಲ ಮನ್ನಾಗೆ ಒಳಗಾದ ರೈತರಿಗೆ ಬ್ಯಾಂಕ್‌ಗಳು ನೋಟಿಸ್‌ ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಕುಮಾರಸ್ವಾಮಿ. ಸಾಲ ಮನ್ನಾವನ್ನು ಈಗಿನ ಸರ್ಕಾರ ತುಂಬ ಹಗುರವಾಗಿ ತೆಗೆದುಕೊಂಡಿದೆ. ನಾವು ಸಾಲ ಮನ್ನಾವನ್ನು ನಿರ್ವಹಿಸಲು ಒಂದು ಸೆಲ್‌ ಮಾಡಿದ್ದೆವು. ಈ ಸರ್ಕಾರ ಬಂದ ಮೇಲೆ ಅದನ್ನು ಮುಚ್ಚಿ ಕೂತಿದೆ. ಕಳ್ಳಾಟವಾಡುತ್ತಿರುವ ಸರ್ಕಾರ, ರೈತರಿಗೆ ಮೋಸ ಮಾಡುತ್ತಿದೆ. ಹೀಗೆ ಮಾಡಿದರೆ ೨.೧೫ ಲಕ್ಷ ಜನರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.

ʻʻಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲ. ರಾಯಚೂರಿನಲ್ಲಿ ಮಕ್ಕಳು 6 ಕಿ.ಮೀ ನಡೆಯುವ ಸ್ಥಿತಿ ನಿರ್ಮಾಣವಾಗಿದೆ. ಕೊರಟಗೆರೆಯಲ್ಲಿ ಗೊಲ್ಲ ಸಮುದಾಯದ ಮಕ್ಕಳಿಗೆ ಬಸ್ ಇಲ್ಲದಿರುವುದು ಗೊತ್ತಾಗಿ ನಾನೇ ಒಂದು ವಾಹನ ವ್ಯವಸ್ಥೆ ಮಾಡಿದೆʼʼ ಎಂದರು ಎಚ್‌.ಡಿ ಕುಮಾರಸ್ವಾಮಿ.

ʻʻತೊಗರಿ ಬೆಳೆಗಾರರಿಗೆ ನೆಟ್ಟಿ ರೋಗದಿಂದ ಸಂಕಷ್ಟವಾಗಿದೆ. ಅವರಿಗೆ ಪರಿಹಾರ ಕೊಡಲು ಯಾವುದೇ ಸಚಿವರು ಇನ್ನೂ ಭರವಸೆ ಕೊಟ್ಟಿಲ್ಲ. ತೊಗರಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಇನ್ನೂ ಬೆಳೆ ವಿಮೆ ಬಂದಿಲ್ಲ. ಹತ್ತಿ,ತೊಗರಿ, ಕಬ್ಬು, ಸೇರಿದಂತೆ ಎಲ್ಲಾ ಬೆಳೆಗಾರರು ಸಂಕಷ್ಟದಲ್ಲಿದ್ದಾರೆʼʼ ಎಂದು ಹೇಳಿದ ಕುಮಾರಸ್ವಾಮಿ, ʻʻನನ್ನ ಸರಕಾರದ ಅವಧಿಯಲ್ಲಿ ಸಾಲ ಮನ್ನಾ ಮಾಡಿದ್ದರಿಂದ ಡಿಸಿಸಿ ಬ್ಯಾಂಕ್ ಗಳು ಉಳಿದವು. ಇಲ್ಲದಿದ್ದರೆ ದಿವಾಳಿ ಆಗುತ್ತಿದ್ದವುʼʼ ಎಂದರು.

ಇದನ್ನೂ ಓದಿ : Assembly Session: ಅಂಗವಿಕಲ ಮಗು ಹುಟ್ಟಲಿ ಅಂತ ಕೆಲವರು ಕಾಯ್ತಾ ಇರ್ತಾರೆ: ಜೆಡಿಎಸ್‌ ಕುರಿತು ಸದನದಲ್ಲಿ ಸಿ.ಟಿ. ರವಿ ಮಾತು

Exit mobile version