ಬೆಂಗಳೂರು: ಇಂದಿನಿಂದ 16ನೇ ವಿಧಾನಸಭೆಯ ಮೊದಲ ಜಂಟಿ ಅಧಿವೇಶ (Assembly Session Karnataka) ಪ್ರಾರಂಭವಾಗಲಿದೆ. ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದರೊಂದಿಗೆ ಅಧಿವೇಶನ ಆರಂಭವಾಗಲಿದೆ.
ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ವರ್ಷಾರಂಭದ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದ ರಾಜ್ಯಪಾಲರು ನೂತನ ಸರ್ಕರ ರಚನೆ ಆದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಭಾಷಣ ಮಾಡಲಿದ್ದಾರೆ.
ನೂತನ ಸರ್ಕಾರದ ಹಿನ್ನೋಟ, ಮುನ್ನೋಟ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಗೊತ್ತುಗುರಿಗಳ ಬಗ್ಗೆ ರಾಜ್ಯಪಾಲರು ಮಾತನಾಡಲಿದ್ದಾರೆ. ಕೈ ಪಡೆಯ ಐದು ಗ್ಯಾರಂಟಿಗಳ ಬಗ್ಗೆ ರಾಜ್ಯಪಾಲರು ಮಾತನಾಡಲಿದ್ದಾರೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ.
ಅನ್ನಭಾಗ್ಯ ಗ್ಯಾರಂಟಿಯಲ್ಲಿ ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿ ವಿತರಣೆ, ಹೆಚ್ಚುವರಿ ಅಕ್ಕಿ ಬದಲಾಗಿ ಹಣ ವರ್ಗಾವಣೆ ನಡೆಯಲಿದೆ. ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ 170 ರೂ. ವರ್ಗಾವಣೆಯಾಗಲಿದೆ. ಗೃಹಜ್ಯೋತಿ ಗ್ಯಾರಂಟಿಯಲ್ಲಿ ಈಗಾಗಲೇ ನೋಂದಣಿ ಬಿರುಸಿನಿಂದ ಸಾಗುತ್ತಿದೆ. ಆಗಸ್ಟ್ ತಿಂಗಳಿನ ಬಿಲ್ ಶೂನ್ಯ ಬರುವುದು ಭಾಷಣದಲ್ಲಿ ಉಲ್ಲೇಖ ಸಾಧ್ಯತೆ ಇದೆ.
ಗೃಹಲಕ್ಷ್ಮಿ ಗ್ಯಾರಂಟಿ ಬಗ್ಗೆ ನೋಂದಣಿಗೆ ಆ್ಯಪ್ ಅಭಿವೃದ್ಧಿಪಡಿಸಿರುವ ಹಾಗೂ ಯೋಜನೆ ಅಡಿಯಲ್ಲಿ ನೋಂದಣಿ ಮಾಡಲು ದಿನಾಂಕ ಘೋಷಣೆ ಮಾಡುವ, ಆಗಸ್ಟ್‌ನಲ್ಲಿ ಮನೆ ಯಜಮಾನಿ ಅಕೌಂಟ್‌ಗೆ ಹಣ ಹಾಕೋದು ನಿಶ್ಚಿತ ಎಂಬ ಘೋಷಣೆ ಸಾಧ್ಯತೆ ಇದೆ. ಶಕ್ತಿ ಗ್ಯಾರಂಟಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿ ಯಶ್ವಸಿಯಾಗಿದೆ. ಶಕ್ತಿ ಯೋಜನೆಯಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಲಾಭ ಆಗುತ್ತಿದೆ ಎಂಬ ಅಂಕಿ ಅಂಶಗಳು ಇವೆ.
ಈ ನಡುವೆ ವಿಪಕ್ಷ ನಾಯಕನ ಕುರ್ಚಿಯಲ್ಲಿ ಯಾರನ್ನು ಕೂರಿಸುವುದು ಎಂಬ ಬಗ್ಗೆ ಪ್ರತಿಪಕ್ಷ ಬಿಜೆಪಿ ಇನ್ನೂ ಇತ್ಯರ್ಥಕ್ಕೆ ಬಂದಿಲ್ಲ. ಈ ಬಗ್ಗೆ ಪಕ್ಷದ ಸಭೆ ಇಂದು ನಡೆಯಲಿದೆ.
ಜುಲೈ 7ರಂದು ಬಜೆಟ್ ಮಂಡನೆ
ಜುಲೈ 7ರಂದು ತಮ್ಮ ಈ ಸರ್ಕಾರದ ಮೊದಲ ಬಜೆಟ್ ಮಂಡನೆ ಮಾಡಲು ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. 2023- 2024ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ತಮ್ಮ 14ನೇ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಸಕಲ ಸಿದ್ಧತೆ ಮಾಡಿಕೊಂಡಿದ್ದು, 30-35 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಗೆ ಭಾಜನರಾಗಲಿದ್ದಾರೆ.