Site icon Vistara News

Assembly Session: ಹಿಂದುಗಳು ಮುಸ್ಲಿಮರ ಅಡಿಯಾಳುಗಳು ಎಂದೇ ಜಮೀರ್‌ ಹೇಳಿದ್ದು; ಆರ್‌ ಅಶೋಕ್‌

BJP Zameer R Ashok

ಬೆಂಗಳೂರು: ಸಚಿವ ಜಮೀರ್‌ ಅಹ್ಮದ್‌ (Zameer Ahmad Khan) ಅವರು ಹೈದರಾಬಾದ್‌ನ ಮುಸ್ಲಿಮರೇ ಸೇರಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಆಡಿದ ಮಾತಿನ ಅರ್ಥ ʻʻಹಿಂದುಗಳು ಮುಸ್ಲಿಮರ ಅಡಿಯಾಳುಗಳುʼ ಎಂದೇ ಆಗಿದೆ. ಹೀಗೆ ಸ್ಪೀಕರ್‌ ಸ್ಥಾನವನ್ನು (Speaker Post) ಮುಂದಿಟ್ಟುಕೊಂಡು ಅವರು ಹಿಂದು ಮತ್ತು ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಕೆಲಸ ಮಾಡಿದ್ದಾರೆ, ಇದನ್ನು ಕಾಂಗ್ರೆಸ್‌ನವರು ಸಮರ್ಥಿಸುತ್ತಿದ್ದಾರೆ ಎಂದು ರಾಜ್ಯ ವಿಧಾನಸಭೆಯ (Assembly Session) ವಿಪಕ್ಷ ನಾಯಕ ಆರ್.ಅಶೋಕ್ (R Ashok) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದು ದ್ವೇಷ ಪ್ರಕಟಿಸಿದ ಜಮೀರ್‌ ಅಹಮದ್‌ ಖಾನ್‌ ಅವರನ್ನು ವಜಾಗೊಳಿಸಬೇಕು, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಸೋಮವಾರ ಬೆಳಗ್ಗೆ ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿದರು. ಜಮೀರ್‌ ಅಹಮದ್‌ ಖಾನ್‌ ಪ್ರಶ್ನೆಗೆ ಉತ್ತರ ನೀಡಲು ನಿಂತಾಗ ಆಕ್ಷೇಪಿಸಿದರು. ಬಿಜೆಪಿ ಗದ್ದಲದಿಂದಾಗಿ ಸ್ಪೀಕರ್‌ ಖಾದರ್‌ ಅವರು ಸಂಧಾನ ಸಭೆ ನಡೆಸಿದರೂ ಫಲ ದೊರೆಯಲಿಲ್ಲ. ಬಳಿಕವೂ ಪ್ರತಿಭಟನೆ, ಗದ್ದಲ ಮುಂದುವರಿದಿತ್ತು. ಅದರ ನಡುವೆಯೇ ಸದನದ ಕಲಾಪ, ವಿಧೇಯಕಗಳ ಮಂಡನೆ ನಡೆದಿದೆ.

ಈ ನಡುವೆ, ವಿಧಾನಸಭೆಯ ವಿಪಕ್ಷ ನಾಯಕ ಆರ್‌. ಅಶೋಕ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಅದರಲ್ಲಿ ಹಿಂದೂ- ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆಯನ್ನು ಜಮೀರ್ ಅಹ್ಮದ್ ಅವರು ನೀಡಿದ್ದಾರೆ ಎಂದು ಹೇಳಿದರು.

ಸ್ಪೀಕರ್‌ ಸ್ಥಾನಕ್ಕೆ ಅಗೌರವ, ಹಿಂದುಗಳಿಗೆ ಅವಹೇಳನ

ಕರ್ನಾಟಕದ ಸ್ಪೀಕರ್ ಸ್ಥಾನದ ಕುರಿತು ಅಗೌರವದ ಹುಟ್ಟಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ. ಸ್ಪೀಕರ್ ಯು.ಟಿ. ಖಾದರ್‌ ಅವರು ವಿಧಾನ ಮಂಡಲದ ಮೊದಲ ಅಧಿವೇಶನ ನಡೆದಾಗ ಈ ಹುದ್ದೆಯ ಕುರಿತು ದೊಡ್ಡ ಮಾತುಗಳನ್ನು ಆಡಿದ್ದರು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್- ಹೀಗೆ ಯಾವುದೇ ಧರ್ಮ, ಜಾತಿ ಮೀರಿ ಎಲ್ಲ ಸದಸ್ಯರು ತಮ್ಮ ನಡವಳಿಕೆ ಮಾಡಬೇಕೆಂದು ತಿಳಿಸಿದ್ದರು. ಸ್ಪೀಕರ್ ಸ್ಥಾನ ಎಂದರೆ ನ್ಯಾಯಾಧೀಶರ ಸ್ಥಾನ. ಎಲ್ಲ ಸದಸ್ಯರಿಗಿಂತ ಮೇಲ್ಮಟ್ಟದ ಸ್ಥಾನ ಎಂದು ವಿಶ್ಲೇಷಿಸಿದ್ದರು. ಆದರೆ, ಅವರದೇ ಪಕ್ಷದ ಜಮೀರ್‌ ಅಹಮದ್‌ ಖಾನ್‌ ಅವರು ಸ್ಪೀಕರ್‌ ಸ್ಥಾನಕ್ಕೆ ಅಪಮಾನ ಮಾಡಿದಾಗ ಕನಿಷ್ಠ ಖಂಡಿಸಿಯೂ ಇಲ್ಲ ಎಂದು ಆಕ್ಷೇಪಿಸಿದರು.

ಜಮೀರ್ ಅಹ್ಮದ್ ಖಾನ್ ಅವರು ಮುಸ್ಲಿಮರ ಸಭೆಯಲ್ಲಿ, ‘ಕರ್ನಾಟಕದಲ್ಲಿ ಯಾರೂ ಕೂಡ ಇದುವರೆಗೆ ಮುಸ್ಲಿಮರನ್ನು ಸ್ಪೀಕರ್ ಮಾಡಿಯೇ ಇಲ್ಲ. ಪ್ರಥಮ ಬಾರಿಗೆ ನಾವು ಮಾಡಿದ್ದೇವೆ. ಆ ಸ್ಥಾನದಲ್ಲಿ ಕುಳಿತ ಸ್ಪೀಕರ್ ಅವರಿಗೆ ಎಲ್ಲ ಬಿಜೆಪಿ ನಾಯಕರು ಅಂದರೆ ಹಿಂದೂಗಳು ನಮಸ್ಕಾರ ಹಾಕಬೇಕಿದೆ. ಅಂಥ ಸ್ಥಾನ ಕೊಟ್ಟಿದ್ದೇವೆ’ ಎಂದು ಹೇಳಿದ್ದಾರೆ. ಮುಸ್ಲಿಮರು ಎಲ್ಲ ಧರ್ಮಕ್ಕಿಂತ ದೊಡ್ಡವರು, ಅವರ ಅಡಿಯಾಳಾಗಿ ಸಲಾಂ ಎಂದು ಕುಳಿತುಕೊಳ್ಳಬೇಕು ಎಂಬ ಭಾವನೆ ಅವರದು ಎಂದು ಟೀಕಿಸಿದರು.

ʻʻಹಿಂದೂ- ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆಯನ್ನು ಜಮೀರ್ ಅಹ್ಮದ್ ಅವರು ನೀಡಿದ್ದಾರೆ. ನಾವು ಸದನದಲ್ಲಿ ಪ್ರತಿಭಟನೆ ಮಾಡಿದ್ದೇವೆ. ಸಂವಿಧಾನದ ಪಾಠ ಮಾಡುವ ಸ್ಪೀಕರ್ ಅವರ ಬಾಯಿಯಲ್ಲಿ ಜಮೀರ್ ಅಹ್ಮದ್ ಅವರು ಮಾಡಿದ್ದು ತಪ್ಪು ಎಂದು ಬಂದಿಲ್ಲ. ಇದು ದುರದೃಷ್ಟಕರʼʼ ಎಂದು ಅಶೋಕ್‌ ಹೇಳಿದರು.

ʻʻಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡುವುದಾಗಿ ಸಿದ್ದರಾಮಯ್ಯರ ಸರಕಾರ ಹೇಳಿದೆ. ಇವತ್ತು ಮಸೂದೆಗಳನ್ನೂ ಮಂಜೂರು ಮಾಡಿದ್ದಾರೆ. ಸ್ಟ್ಯಾಂಪ್ ಡ್ಯೂಟಿ, ಚಾರಿಟಿ ಸಂಬಂಧ ಕಾರ್ಯಕ್ಕೂ ಹೆಚ್ಚು ಸುಂಕ ವಿಧಿಸಿದ್ದಾರೆ. ಮೌಲ್ವಿಗಳಿಗೆ 10 ಸಾವಿರ ಕೋಟಿ ನೀಡಲು ಹಣ ಸಂಗ್ರಹಕ್ಕಾಗಿ ಹೀಗೆ ಮಾಡುತ್ತಿದ್ದಾರೆʼʼ ಎಂದು ಅಶೋಕ್‌ ದೂರಿದರು.

ಕಾಂಗ್ರೆಸ್ ಸರಕಾರವು ಮತಕ್ಕಾಗಿ ಮುಸ್ಲಿಮರನ್ನು ಓಲೈಸುತ್ತಿದೆ. ಜಮೀರ್ ಅಹ್ಮದ್ ಅವರದು ಹುಚ್ಚು ಮತ್ತು ವಿಕೃತ ಹೇಳಿಕೆ; ಸಂವಿಧಾನಕ್ಕೆ ಇದು ಕಪ್ಪು ಚುಕ್ಕಿ. ಸರಕಾರ ಅವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕಿತ್ತು. ಸ್ಪೀಕರ್ ಅವರೂ ಆ ಸ್ಥಾನದ ಗೌರವ ಎತ್ತಿ ಹಿಡಿದಿಲ್ಲ ಎಂದು ಆಕ್ಷೇಪಿಸಿದರು.

ಇನ್ನೂ ಒಂದು ವಾರ ಕಲಾಪ ಮುಂದುವರಿಸಲು ಬಿಜೆಪಿ ಆಗ್ರಹ

ಪ್ರಜಾಪ್ರಭುತ್ವ ದಮನ ಮಾಡುವ, ಮುಸ್ಲಿಮರನ್ನು ಓಲೈಸುವ ಸರಕಾರ ಇದು. ಇದರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಆರ್.ಅಶೋಕ್ ಅವರು ತಿಳಿಸಿದರು.

ಸದನವನ್ನು ಇನ್ನೊಂದು ವಾರ ವಿಸ್ತರಿಸಲು ಕೋರಿದ್ದೇವೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಜನಪ್ರತಿನಿಧಿಗಳಿಗೆ ಅರ್ಧರ್ಧ ದಿನ ಅವಕಾಶ ಕೊಡಲು ಕೋರಿದ್ದೇವೆ ಎಂದು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 50 ವರ್ಷ ಆಡಳಿತ ನಡೆಸಿದೆ. ಬಿಜೆಪಿ ಆಡಳಿತ ಇದ್ದುದು ಕೇವಲ 9 ವರ್ಷ. 50 ವರ್ಷಗಳಲ್ಲಿ ನೀರಾವರಿ ಯೋಜನೆಗೆ ಎಷ್ಟು ಮೊತ್ತ ಕೊಟ್ಟಿದ್ದಾರೆ? ಕೃಷ್ಣೆಯ ಕಣ್ಣೀರು ಎಂಬ ಪುಸ್ತಕವನ್ನು ಎಚ್.ಕೆ.ಪಾಟೀಲರು ಬಿಡುಗಡೆ ಮಾಡಿದ್ದಾರೆ. ಕೃಷ್ಣೆ ಕಣ್ಣೀರು ಸುರಿಸುತ್ತಲೇ ಇದ್ದಾಳೆ. ಕಾಂಗ್ರೆಸ್‍ನವರು ತುಪ್ಪ ತಿನ್ನುತ್ತಿದ್ದಾರೆ ಎಂದರು. 2 ಕೋಟಿ ಹೆಚ್ಚು ಖರ್ಚಾದರೂ ಪರವಾಗಿಲ್ಲ; ಸದನದ ಅವಧಿ ವಿಸ್ತರಿಸಿ ಎಂದು ಆಗ್ರಹಿಸಿದರು.

ಎಲ್ಲೆಡೆ ಬರ ಇದ್ದು, ರೈತರಿಗೆ ಎಕರೆಗೆ 25 ಸಾವಿರ ಕೊಡಬೇಕಿತ್ತು. 2 ಸಾವಿರವೂ ಇಲ್ಲ. ಅರ್ಧ ಎಕರೆಗೆ 500 ರೂ ಕೊಡುತ್ತಾರೆ. ಇದು ಕಟುಕರ ಸರಕಾರ. ಮೋಸದ ಸರಕಾರ; ಹಿಂದೂಗಳನ್ನು ದಮನ ಮಾಡುವ ಪ್ರಕ್ರಿಯೆ ಎಂದು ನುಡಿದರು.

ಟಿ.ಜಾನ್‌ ಅವರನ್ನು ಒಂದೇ ಗಂಟೆ ಅವಧಿಯಲ್ಲಿ ಸದನದಿಂದ ವಜಾ ಆಗಿತ್ತು

ಯೇಸುವಿನ ಶಾಪದಿಂದ ಭೂಕಂಪ ಆಗಿದೆ ಎಂದಿದ್ದ ಸಚಿವರನ್ನು ಹಿಂದೆ ಎಸ್.ಎಂ.ಕೃಷ್ಣ ಅವರು ತಕ್ಷಣವೇ ಸಂಪುಟದಿಂದ ವಜಾ ಮಾಡಿದ್ದರು. ಕೇವಲ ಒಂದು ಗಂಟೆಯಲ್ಲಿ ಅವರನ್ನು ವಜಾ ಮಾಡಿದ್ದರು. ನಿಮ್ಮ ಸರಕಾರ ಹೀಗೆ ಮಾಡಿದೆಯೇ ಸಿದ್ದರಾಮಯ್ಯನವರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಆದರೆ, ಈಗ ಜಮೀರ್‌ ಅಹಮದ್‌ ಖಾನ್‌ ಅವರನ್ನು ಯಾಕೆ ವಜಾ ಮಾಡುತ್ತಿಲ್ಲ ಎಂದು ಅಶೋಕ್‌ ಪ್ರಶ್ನಿಸಿದರು.

ಜಾತ್ಯತೀತ ಜನತಾದಳ ಬಿಜೆಪಿ ಜತೆ ಕೈಜೋಡಿಸಿದಾಗ ಸಿದ್ದರಾಮಯ್ಯ ಅವರು ಜೆಡಿಎಸ್‌ನಲ್ಲಿರುವ ಎಸ್‌ ಅನ್ನು ತೆಗೆದುಹಾಕಬೇಕು ಎಂದು ಹೇಳಿದ್ದರು. ಆಗ ಯತ್ನಾಳ್‌ ಅವರು ಕಾಂಗ್ರೆಸ್‌ಗೆ ಎಂ ಅಂದರೆ ಮುಸ್ಲಿಂ ಅಂತ ಸೇರಿಸಿಕೊಳ್ಳಿ ಎಂದು ಹೇಳಿದ್ದರು ಎಂದು ನೆನಪಿಸಿದರು ಅಶೋಕ್‌.

ಜಮೀರ್ ಅಹ್ಮದ್ ಅವರ ಮಾತು ದುರಹಂಕಾರದ್ದು ವಿಜಯೇಂದ್ರ

ಜಮೀರ್ ಅಹ್ಮದ್ ಅವರ ಪ್ರಕರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಜಮೀರ್ ಅಹ್ಮದ್ ಅವರ ಮಾತು ದುರಹಂಕಾರದ್ದು. ಅವರ ಹೇಳಿಕೆಯ ಅರ್ಥ ಅವರಿಗೂ ಗೊತ್ತಿದೆ. ನಮಗೂ ಗೊತ್ತಿದೆ. ಜಮೀರ್ ಅಹ್ಮದ್ ಅವರ ಹೇಳಕೆ ಬಂದ 24 ಗಂಟೆಗಳಲ್ಲಿ ಅವರ ರಾಜೀನಾಮೆ ಪಡೆಯುವ ನಿರೀಕ್ಷೆ ಇತ್ತು. ಆದರೆ, ಅದಾಗಲಿಲ್ಲ. ಗೌರವಾನ್ವಿತ ಸಭಾಧ್ಯಕ್ಷರೂ ಗಟ್ಟಿ ನಿರ್ಧಾರ ಮಾಡಲಿಲ್ಲ. ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ಜೊತೆಯಾಗಿ ಜಮೀರ್ ಅಹ್ಮದ್ ಅವರ ಹೇಳಿಕೆ ಖಂಡಿಸಿ ಸತ್ಯಾಗ್ರಹ ಮಾಡುತ್ತಿವೆ ಎಂದು ವಿವರಿಸಿದರು. ತಮ್ಮ ಹೇಳಿಕೆ ತಪ್ಪು ಎಂದು ಜಮೀರ್ ಅಹ್ಮದ್ ಅವರಿಗೆ ಅನಿಸದೇ ಇರುವುದು ದುರದೃಷ್ಟಕರ ಎಂದು ತಿಳಿಸಿದರು. ಶಾಸಕರಾದ ಬಸವನಗೌಡ ಯತ್ನಾಳ್, ಅರಗ ಜ್ಞಾನೇಂದ್ರ, ಅರವಿಂದ್ ಬೆಲ್ಲದ, ಡಾ ಸಿ.ಎನ್.ಅಶ್ವಥ್ ನಾರಾಯಣ್, ಸುರೇಶ್ ಕುಮಾರ್ ಹಾಗೂ ಶಾಸಕರು ಇದ್ದರು.

Exit mobile version