ಬೆಂಗಳೂರು: ಸಾರ್ವಜನಿಕ ಹಿತಾಸಕ್ತಿ ವಿಚಾರಗಳು ಚರ್ಚೆಯಾಗಿ ಪರಿಹಾರ ಕಂಡುಕೊಳ್ಳಬೇಕಾಗಿದ್ದ 16ನೇ ವಿಧಾನಸಭೆಯ (16th Karnataka Assembly) ಮೊದಲ ಜಂಟಿ ಅಧಿವೇಶನವು (Joint Session) ಆಡಳಿತ ಹಾಗೂ ವಿಪಕ್ಷಗಳ ಆರೋಪ ಪ್ರತ್ಯಾರೋಪದಲ್ಲೇ ತೆರೆ ಬಿದ್ದಿತು. ಬಹಳಷ್ಟು ಭರವಸೆಗಳೊಂದಿಗೆ ಶುರುವಾದ ಸದನ ಜನರಿಗೆ ಮಾತ್ರ ಈ ಬಾರಿ ನಿರಾಸೆ ತರಿಸಿತು. ಸ್ವಹಿತಾಸಕ್ತಿಗಳೇ ಮೇಲುಗೈ ಸಾಧಿಸಿದ ಸದನ ಬಿಜೆಪಿ-ಜೆಡಿಎಸ್ ಬೆಸುಗೆಗೆ ಸಾಕ್ಷಿಯಾಯಿತು, ಅಮಾನತು ಪಾಲಿಟಿಕ್ಸ್ ಜೋರಾಗಿತ್ತು.
ಜುಲೈ 3ರಿಂದ ಜುಲೈ 21ರವರೆಗೆ 15 ದಿನಗಳ ಅಧಿವೇಶನದಲ್ಲಿ ಮೊದಲ ದಿನವೇ ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್ ಭಾಷಣ ಮಾಡಿದರು. ಜುಲೈ 7ರಂದು ಸಿದ್ದರಾಮಯ್ಯ (CM Siddaramaiah) 14ನೇ ಬಜೆಟ್ ಮಂಡನೆ ಮಾಡಿದರು. ರಾಜ್ಯಪಾಲರ ಭಾಷಣದ ಮೇಲೆ 34 ಸದಸ್ಯರು ಭಾಗವಹಿಸಿ 12 ಗಂಟೆ 39 ನಿಮಿಷ ಚರ್ಚೆ ಮಾಡಿದರು.
78 ಗಂಟೆ 25 ನಿಮಿಷ ಕಲಾಪ
15 ದಿನಗಳ ಅವಧಿಯಲ್ಲಿ ಒಟ್ಟು 78 ಗಂಟೆ 25 ನಿಮಿಷ ಕಲಾಪ ನಡೆಯಿತು. ಬಜೆಟ್ ಮೇಲೆ 12 ಗಂಟೆ 52 ನಿಮಿಷ ಚರ್ಚೆಯಾಯಿತು, 62 ಶಾಸಕರು ಭಾಷಣ ಮಾಡಿದರು. 29 ಅಧಿಸೂಚನೆಗಳು, 70 ವಾರ್ಷಿಕ ವರದಿಗಳು, 99 ಲೆಕ್ಕ ಪರಿಶೋಧನಾ ವರದಿಗಳ ಮಂಡನೆ ಮಾಡಲಾಗಿದೆ. ಒಟ್ಟು 14 ವಿಧೇಯಕಗಳ ಅಂಗೀಕಾರ ಆಗಿದೆ. ಶೂನ್ಯ ವೇಳೆಯಲ್ಲಿ 16 ಸೂಚನೆ ಪ್ರಸ್ತಾಪ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಗ್ಯಾರಂಟಿ ಘೋಷಣೆಗಳ ಜತೆಗೆ ಸ್ಪೀಕರ್ ಮೇಲೆ ಪೇಪರ್ ಎಸೆದ 10 ಬಿಜೆಪಿ ಶಾಸಕರ ಅಮಾನತುವರೆಗೆ ಅನೇಕ ಘಟನಾವಳಿಗಳು ನಡೆದಿವೆ. ಒಂದಷ್ಟು ಧನಾತ್ಮಕ ಬೆಳವಣಿಗೆಗಳಾಗಿವೆಯಾದರೂ, ಅಮಾನತು ಕಾರಣಕ್ಕೆ ನಕಾರಾತ್ಮಕತೆಯೇ ಕಾಣಿಸುತ್ತಿದೆ.
ಚರ್ಚೆಯಾಗದ ಜನರ ಸಮಸ್ಯೆ
- ರಾಜ್ಯದಲ್ಲಿ 50ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಚರ್ಚೆಯಾಗಲಿಲ್ಲ
- ಬಜೆಟ್ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯೇ ಹೆಚ್ಚಾಗಿತ್ತು
- ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರದ ಕುರಿತು ಚರ್ಚೆ ಆಗಲಿಲ್ಲ
- ಪ್ರತಿಪಕ್ಷಗಳಿಲ್ಲದೆ ನೇರವಾಗಿ ಅಂಗೀಕಾರವಾದ ಮಸೂದೆಗಳು
- ಸರ್ಕಾರದ ವಿರುದ್ಧ ಟ್ರಾನ್ಸ್‌ಫರ್ ದಂಧೆ ಆರೋಪ, ಪ್ರತ್ಯಾರೋಪ: ಸಿಎಂ ಪುತ್ರನೇ ದಂಧೆಯ ರೂವಾರಿ ಎಂದ ಎಚ್.ಡಿ. ಕುಮಾರಸ್ವಾಮಿ
- ಅಧಿವೇಶನದುದ್ದಕ್ಕೂ ವಿವಾದಗಳದ್ದೇ ಮೇಲುಗೈ
- ನೂತನ ಶಾಸಕರ ತರಬೇತಿ ಕುರಿತೇ ವಿವಾದಗಳೆದ್ದವು. ಭಾಗವಹಿಸಬೇಕಿದ್ದ ಗುರುರಾಜ ಕರಜಗಿ ಅವರನ್ನು ಕೈಬಿಡಲಾಯಿತು
ಮೈತ್ರಿಯಿಂದ ಅಮಾನತಿನವರೆಗೆ
- INDIA ಮೈತ್ರಿಕೂಟದ ಸಭೆಯ ಅತಿಥಿಗಳ ಸ್ವೀಕಾರಕ್ಕೆ ಐಎಎಸ್ ಅಧಿಕಾರಿಗಳ ನಿಯೋಜನೆ ವಿಷಯದಲ್ಲಿ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
- ಬಿಜೆಪಿ ಹಾಗೂ ಜೆಡಿಎಸ್‌ನಿಂದ ಜಂಟಿ ಹೋರಾಟ ಮಾಡುವ ಮೂಲಕ ಹೊಸ ಮೈತ್ರಿಯ ಉದಯದ ಸೂಚನೆ ಸಿಕ್ಕಿತು.
- ಪ್ರತಿಪಕ್ಷದ ಧರಣಿ ನಡುವೆಯೇ ಮಸೂದೆ ಅಂಗೀಕಾರಕ್ಕೆ ಮುಂದಾದ ಸರ್ಕಾರ: ಪ್ರತಿಗಳನ್ನು ಹರಿದು ಡೆಪ್ಯುಟಿ ಸ್ಪೀಕರ್ ಮೇಲೆ ಎಸೆದ ಬಿಜೆಪಿ ಶಾಸಕರು, 10 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಯು.ಟಿ. ಖಾದರ್.
- ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ನಿರ್ಧಾರದ ವಿರುದ್ಧ ಬಿಜೆಪಿ, ಜೆಡಿಎಸ್ ಜಂಟಿ ಹೋರಾಟ, ರಾಜ್ಯಪಾಲರಿಗೆ ದೂರು.
- ಕೊನೆಯ ಮೂರು ದಿನ ವಿಪಕ್ಷಗಳಿಲ್ಲದ ಸದನ
ಕೆಲವು ಪಾಸಿಟಿವ್ ಅಂಶಗಳು
- ಹಿಂದಿನ ಸಂಪ್ರದಾಯಗಳ ಹೋಲಿಕೆಯಲ್ಲಿ ಯುವ ಸ್ಪೀಕರ್ ಆಯ್ಕೆ
- ಹೆಚ್ಚಿನ ಸಂಖ್ಯೆಯಲ್ಲಿ ನೂತನ ಶಾಸಕರು ಮಾತನಾಡಿದ್ದಾರೆ.
- ಒಟ್ಟು 1149 ಪ್ರಶ್ನೆಗಳಲ್ಲಿ 1088 ಪ್ರಶ್ನೆಗಳಿಗೆ ಉತ್ತರ ಕೊಡಲಾಗಿದೆ
- ನೂತನ ಶಾಸಕರಿಗೆ ವಿಧಾನಸೌಧ ಆವರಣದಿಂದ ಹೊರಗೆ ತರಬೇತಿ
- ಸದನ ವೀಕ್ಷಣೆಗೆ ಆಗಮಿಸುವ ಸಾವಿರಾರು ಶಾಲಾ ಮಕ್ಕಳಿಗೆ ವಿಶ್ರಾಂತಿ ಸ್ಥಳ, ಪಾಸ್ ಪಡೆಯಲು ಇಮೇಲ್ ಸೃಜನೆ
- ಸದನದ ಆರಂಭದಲ್ಲಿ ಮೊದಲ ಬಾರಿಗೆ ಸಂವಿಧಾನ ಪೂರ್ವ ಪೀಠಿಕೆ ಓದಿಸಲಾಯಿತು
- ಮಸೂದೆಗಳ ಕುರಿತು ಶಾಸಕರಿಗೆ ಮಾಹಿತಿ ನೀಡಲು ಡೆಸ್ಕ್
ಇದನ್ನೂ ಓದಿ : Assembly Session : ಮೋದಿ 118 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ