ಬೆಂಗಳೂರು: ಕೇಂದ್ರ ಸರ್ಕಾರದ ನೀಟ್ ಪರೀಕ್ಷಾ ವ್ಯವಸ್ಥೆ, ಒನ್ ನೇಷನ್-ಒನ್ ಎಲೆಕ್ಷನ್ ವಿರುದ್ಧ ರಾಜ್ಯ ಸರ್ಕಾರ ಮಂಡಿಸಿರುವ ನಿರ್ಣಯ ವಿಧಾನಮಂಡಲದ ಉಭಯ ಸದನಗಳಲ್ಲಿ (Assembly session) ಅಂಗೀಕಾರವಾಗಿದೆ. ಕೇಂದ್ರ ಸರ್ಕಾರದ ನೀಟ್ ಪರೀಕ್ಷೆ, ಒಂದು ದೇಶ-ಒಂದು ಎಲೆಕ್ಷನ್ ತೀರ್ಮಾನಗಳನ್ನು ವಿರೋಧಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದೀಗ ಅಧಿವೇಶನದಲ್ಲಿ ರಾಜ್ಯ ಸರ್ಕಾರ ನಿರ್ಣಯ ಮಂಡಿಸಿ, ಅಂಗೀಕಾರ ಪಡೆದಿದೆ.
ವಿಧಾನ ಸಭೆಯಲ್ಲಿ ಸಚಿವ ಶರಣು ಪ್ರಕಾಶ್ ಪಾಟೀಲ್ ಅವರು ನೀಟ್ ರದ್ದು ನಿರ್ಣಯ ಮಂಡನೆ ಮಾಡಿದ್ದು, ವಿಧಾನ ಪರಿಷತ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಂಡಿಸಿದರು. ಇನ್ನು ವಿಧಾನ ಸಭೆಯಲ್ಲಿ ಒನ್ ನೇಷನ್- ಒನ್ ಎಲೆಕ್ಷನ್ ವಿರುದ್ಧದ ನಿರ್ಣಯವನ್ನು ಸಚಿವ ಎಚ್.ಕೆ. ಪಾಟೀಲ್, ವಿಧಾನ ಪರಿಷತ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದರು. ಉಭಯ ಸದನಗಳಲ್ಲೂ ನಿರ್ಣಯಗಳು ಅಂಗೀಕಾರವಾಗಿವೆ.
ಒನ್ ನೇಷನ್, ಒನ್ ಎಲೆಕ್ಷನ್ ವಿರುದ್ಧವಾಗಿ ವಿಧಾನಪರಿಷತ್‌ನಲ್ಲಿ ನಿರ್ಣಯ ಮಂಡನೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ರೀತಿಯ ಚುನಾವಣೆಗೆ ನಮ್ಮ ವಿರೋಧ ಇದೆ. ಒಂದು ದೇಶ, ಒಂದು ಚುನಾವಣೆಯಿಂದ ಪ್ರಜಾಪ್ರಭುತ್ವಕ್ಕೆ ಮಾರಕ. ಏಕರೂಪ ಚುನಾವಣೆ ರಾಷ್ಟ್ರೀಯವಾಗಿ ಸಮಸ್ಯೆ ಆಗಲಿದೆ. ಸ್ಥಳೀಯವಾಗಿ ಹಲವು ತಾಂತ್ರಿಕ ಸಮಸ್ಯೆ ಆಗಲಿದೆ. ಇದನ್ನು ಅನುಷ್ಠಾನ ಮಾಡಬಾರದು ಅಂತ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಅಂತ ಸದಸ್ಯರಿಗೆ ಮನವಿ ಮಾಡಿದರು.
ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ರದ್ದುಗೊಳಿಸಬೇಕು ಎಂದು ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಆಗ್ರಹ ಕೇಳಿಬರುತ್ತಿದೆ. ಅದರಲ್ಲೂ, ನೀಟ್ ಯುಜಿ ಪರೀಕ್ಷೆಯ (NEET UG 2024) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ಸುದ್ದಿಯಾದ ಬಳಿಕ ಆಗ್ರಹ ಹೆಚ್ಚಾಗಿದೆ. ಇದರ ಬೆನ್ನಲ್ಲೇ, ಕರ್ನಾಟಕದಲ್ಲೂ ನೀಟ್ ಪರೀಕ್ಷೆ ಸೇರಿ ಕೇಂದ್ರ ಸರ್ಕಾರದ ಮೂರು ತೀರ್ಮಾನಗಳನ್ನು ವಿರೋಧಿಸುವ ಕುರಿತು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು,.
ನೀಟ್ ಪರೀಕ್ಷೆ ಬದಲು ಹಳೆಯ ಪ್ರವೇಶ ಪರೀಕ್ಷೆ ವ್ಯವಸ್ಥೆಗೆ ಮರಳಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯವು ತನ್ನದೇ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು, ಈ ಮೂಲಕ ತಮಿಳುನಾಡಿನಂತೆಯೇ 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶವನ್ನು ನಡೆಸಲು ಚಿಂತನೆ ನಡೆಸಿದೆ.
ಏನಿದು ನೀಟ್ ಅಕ್ರಮ ಕೇಸ್?
ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಇನ್ನು, ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬುದಾಗಿ ಕೆಲವು ಪೋಷಕರು ಆರೋಪ ಮಾಡಿದ್ದಾರೆ. ಗ್ರೇಸ್ ಮಾರ್ಕ್ಸ್ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನೂ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್ ಮೈಂಡ್ ಅಮಿತ್ ಆನಂದ್ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕ್ಷಿಪ್ರವಾಗಿ ತನಿಖೆ ನಡೆಯುತ್ತಿದೆ.
ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.
ಮತ್ತೊಂದೆಡೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಕೇಂದ್ರ ಸರ್ಕಾರ ಹಾಗೂ ಎನ್‌ಟಿಎ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ, 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಅಕ್ರಮದ ತೀವ್ರತೆಯನ್ನು ಪರಿಶೀಲಿಸಿದ ನ್ಯಾಯಾಲಯವು, ನೀಟ್ ಮರುಪರೀಕ್ಷೆ ಬೇಡ ಎಂದು ಮಹತ್ವದ ಆದೇಶ ಹೊರಡಿಸಿದೆ.