ವಿಧಾನಪರಿಷತ್: ಹಿಟ್ಲರ್ ಹೆಸರನ್ನು ಹೇಳಿದ ಕೂಡಲೆ ಬಿಜೆಪಿಯವರು ಏಕೆ ಗಲಿಬಿಲಿಗೆ ಒಳಗಾಗುತ್ತಾರೆ? ಇವರೇನು ಹಿಟ್ಲರ್ ವಂಶಸ್ಥರೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ವಿಧಾನಪರಿಷತ್‌ನಲ್ಲಿ (Assembly Session) ರಾಜ್ಯಪಾಲರ ಭಾಷಣದ ಕುರಿತು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಾರಂಭದಿಂದಲೂ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ನರೇಂದ್ರ ಮೋದಿಯವರ ಜನಪ್ರಿಯತೆ ಕುಗ್ಗುತ್ತಿದೆ ಎಂದರು. ನರೇಂದ್ರ ಮೋದಿಯವರು ನಂಜನಗೂಡಿಗೆ ಬಂದಿದ್ದರು. ಆದರೆ ಹೆಗ್ಗಡದೇವನಕೋಟೆ, ನಂಜನಗೂಡು, ಗುಂಡ್ಲುಪೇಟೆ, ವರುಣಾದಲ್ಲಿ ಗೆದ್ದಿದ್ದೇವೆ. ಮೋದಿ ಸೇಡಂಗೆ ಹೋಗಿದ್ದರು. ಅಲ್ಲಿ ಡಾ. ಶರಣಪ್ರಕಾಶ್ ಪಾಟೀಲ್ ಅತಿ ಹೆಚ್ಚು ಅಂತರದಲ್ಲಿ ಜಯಗಳಿಸಿದ್ದಾರೆ ಎಂದರು.
ಒಂದು ಕಾಲದಲ್ಲಿ ಇಂದಿರಾ ಗಾಂಧಿಯವರಿಗೂ ಜನಪ್ರಿಯತೆ ಇತ್ತು. ಇಂದಿರಾ ಗಾಂಧಿಯವರನ್ನು ನೋಡಿ ಮತ ಹಾಕುತ್ತಿದ್ದರು. ಅದೇ ರೀತಿ ನರೇಂದ್ರ ಮೋದಿಯವರಿಗೂ ಜನಪ್ರಿಯತೆ ಇದೆ. ಅವರ ಪಾಪ್ಯುಲಾರಿಟಿ ಇಲ್ಲ ಎಂದು ಹೇಳುವುದಿಲ್ಲ. ಅವರು ದೊಡ್ಡ ನಾಯಕ ಎನ್ನುವುದರಲ್ಲೂ ಯಾವುದೇ ಅನುಮಾನ ಇಲ್ಲ. ಆದರೆ ಅವರ ಪಾಪ್ಯುಲಾರಿಟಿ ಈಗ ಕಡಿಮೆಯಾಗಿದೆ. ಚಕ್ರ ತಿರುಗಲೇಬೇಕಲ್ಲ? ಅವರ ಜನಪ್ರಿಯತೆ ಕಡಿಮೆ ಆಗುತ್ತಾ ಇದೆ. ಬಿಜೆಪಿಯವರು ಇನ್ನು ಮುಂದೆ ನರೇಂದ್ರ ಮೋದಿಯವರ ಮೇಲೆ ಅವಲಂಬನೆ ಆಗದೇ ಇರುವುದು ಒಳ್ಳೆಯದು ಎಂದರು.
ಮನುಷ್ಯ ಜಾತಿ ತಾನೊಂದೆ ವಲಂ ಎಂದು ಪಂಪ ಹೇಳಿದ್ದಾನೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲು, ಕೀಳು ಇತು. ಅದನ್ನು ಕಿತ್ತೊಗೆದು ಸಮಸಮಾಜ ನಿರ್ಮಾಣ ಮಾಡಬೇಕೆಂದು ಬಸವಣ್ಣ ಅನುಭವ ಮಂಟಪ ಮಾಡಿದ. ಆದರೆ ನಮ್ಮ ಧರ್ಮವೇ ಶ್ರೇಷ್ಠ, ನಾವೇ ಶ್ರೇಷ್ಠ ಎಂದು ಬಿಜೆಪಿಯವರು ಹೇಳುತ್ತಾರೆ. ಇದೇ ರೀತಿ ಜರ್ಮನರೇ ಶ್ರೇಷ್ಠ, ಬೇರೆಯವರು ಕನಿಷ್ಠ ಎಂದು ಹಿಟ್ಲರ್ ಭಾವಿಸಿದ್ದ. ಆದರೆ ಈ ಸಮಯದಲ್ಲಿ ನಡೆದ ಗಲಾಟೆಯಲ್ಲಿ ಬೇರೆಯವರಿಗಿಂತ ಜರ್ಮನ್ನರೇ ಹೆಚ್ಚು ಸತ್ತರು ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಮಯದಲ್ಲಿ ಕೆಲವು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಕೇವಲ ರಾಜಕೀಯ ಮಾತನಾಡುತ್ತಿದ್ದಾರೆ. ನರೇಂದ್ರ ಮೋದಿಯವರ ಜನಪ್ರಿಯತೆ ಕಡಿಮೆ ಆಗಿಲ್ಲ ಎಂದರು. ಇದಕ್ಕೆ ಮತ್ತೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಹಿಟ್ಲರ್ ಬಗ್ಗೆ ಮಾತನಾಡಿದರೆ ಬಿಜೆಪಿಯವರಿಗೆ ಏಕೆ ಕೋಪ ಬರುತ್ತದೆ? ನೀವು ಅವರ ವಂಶಸ್ಥರೇ? ಎಂದು ಪದೇಪದೆ ಉಲ್ಲೇಖಿಸಿದರು.
ನೀವು ಸಿದ್ದರಾಮಯ್ಯ ಅವರಾಗಿ ಮಾತಾಡಿದರೆ ಕೇಳುತ್ತೇವೆ, ನೀವೇ ಹಿಟ್ಲರ್ ರೀತಿ ಮಾತನಾಡಬಾರದು ಎಂದು ಬಿಜೆಪಿಯ ಭಾರತಿ ಶೆಟ್ಟಿ ಹೇಳಿದರು. ಅದಕ್ಕೆ ತಕ್ಷಣವೇ ಹಿಟ್ಲರ್ ಒಬ್ಬ ಮತಾಂಧ, ಮನುಷ್ಯ ಜಾತಿಯ ವಿರೋಧಿ. ಇದು ಸಾಕೇ? ಎಂದರು. ಮನುಷ್ಯ ಮನುಷ್ಯನ ನಡುವೆ, ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ವಿಷ ಹಿಂಡುವ ಕೆಲಸ ಮಾಡಬಾರದು. ಹಾಗೆ ಮಾಡಿದರೆ ನಮ್ಮನ್ನೇ ಸುಟ್ಟುಹಾಕಿಬಿಡುತ್ತದೆ ಎಂದರು.
ರವಿಕುಮಾರ್ ನಂ.1
ತಾವು ಮಾತನಾಡುವ ಸಮಯದಲ್ಲಿ ಬಿಎಜಪಿ ಸದಸ್ಯ ಎನ್. ರವಿಕುಮಾರ್ ಆಗಾಗ್ಗೆ ಮಾತನಾಡುತ್ತಿದ್ದರು. ನರೇಂದ್ರ ಮೋದಿ ಜನಪ್ರಿಯತೆ ಕಡಿಮೆಯಾಗಿದೆ, ಅವರು ಪ್ರಚಾರ ಮಾಡಿದ ಕಡೆಗಳಲ್ಲಿ ಬಿಜೆಪಿ ಸೋತಿದೆ ಎಂದು ತಿಳಿಸಿದಾಗ ಮತ್ತೆ ರವಿಕುಮಾರ್ ಸಮರ್ಥನೆಗೆ ಮುಂದಾದರು. ಈ ಸಮಯದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನೀವು ಬಿಜೆಪಿಯ ಅತಿ ದೊಡ್ಡ ಸಮರ್ಥಕರು ಎಂದರು. ಉಳಿದವರೂ ಹಾಗೆಯೇ ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಸಭೆಯಲ್ಲಿದ್ದವರು ಹೇಳಿದರು. ಅದಕ್ಕೆ ಸಿದ್ದರಾಮಯ್ಯ ಉತ್ತರಿಸಿ, ಎಲ್ಲರೂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರೆ ಅದರಲ್ಲಿ ರವಿಕುಮಾರ್ ನಂಬರ್ 1 ಎಂದರು.
ಜನರ ಜೇಬಿನಲ್ಲಿರುವುದನ್ನು ಕಿತ್ತುಕೊಂಡಿರಿ
ಕಾಂಗ್ರೆಸ್ ಗೆಲುವಿಗೆ ಕಾರಣವಾದ ಸಂಗತಿಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಜನರ ಜೇಬಿನಲ್ಲಿ ಹಣ ಇರಬೇಕು ಎನ್ನುವ ಉದ್ದೇಶದಿಂದ ಐದು ಗ್ಯಾರಂಟಿಗಳನ್ಮು ಘೋಷಿಸಿ ಜಾರಿ ಮಾಡಿತು. ಬಡವರು-ಮಧ್ಯಮ ವರ್ಗದವರ ಜೇಬಿನಲ್ಲಿ ಹಣ ಇದ್ದರೆ ನಾಡಿನ ಆರ್ಥಿಕತೆ ಬೆಳೆಯುತ್ತದೆ ಎನ್ನುವುದು ಕಾಂಗ್ರೆಸ್‌ನ ಬದ್ಧತೆ ಮತ್ತು ಸಿದ್ಧಾಂತ. ಆದರೆ ಬಿಜೆಪಿ ಜನರ ಜೇಬಿನಲ್ಲಿರುವ ಹಣ ಕಿತ್ತುಕೊಳ್ಳುವ ಮನಸ್ಥಿತಿ ಹೊಂದಿರುವ ಕಾರಣದಿಂದ ಹೀನಾಯವಾಗಿ ಸೋಲು ಕಾಣಬೇಕಾಯಿತು ಎಂದರು.