ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಬೇಕು ಹಾಗೂ ರಾಜ್ಯದ ಹಣಕಾಸು ಸ್ಥಿತಿಗತಿಯ ಕುರಿತು ವಿಧಾನಸಭೆಯಲ್ಲಿ (Assembly Session) ನಿಯಮ 61ರ ಅಡಿಯಲ್ಲಿ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು ಎಂಬ ಬಿಜೆಪಿ ಬೇಡಿಕೆಯನ್ನು ಸ್ಪೀಕರ್ ಯು.ಟಿ. ಖಾದರ್ ತಳ್ಳಿಹಾಕಿದ್ದಾರೆ.
ಮಂಗಳವಾರ ದಿನಪೂರ್ತಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಬಹುತೇಕ ಕಾರ್ಯಕಲಾಪಗಳು ನಡೆಯಲೇ ಇಲ್ಲ. ಬುಧವಾರವೂ ಈ ಕುರಿತು ಪ್ರತಿಭಟನೆ, ಮಾತಿನ ಚಕಮಕಿ ವಿಧಾನಸಭೆಯಲ್ಲಿ ನಡೆದವು.
ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ನಿಬಂಧನೆ ವಿಧಿಸಿ ಮೋಸ ಮಾಡಿದ ಎಂಬ ಆರ್. ಅಶೋಕ್ ಮಾತಿನ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು. ನೀವು ಯಡಿಯೂರಪ್ಪ ರನ್ನು ಸಿಎಂ ಮಾಡೋಕೆ ಎಷ್ಟು ದಿನ ತಗೊಂಡ್ರಿ..? ಯಡಿಯೂರಪ್ಪ ಕ್ಯಾಬಿನೆಟ್ ಮಾಡೋಕೆ ಎಷ್ಟು ದಿನ ತಗೊಂಡ್ರು ಅಂತಾ ಗೊತ್ತಿದೆ. ನಮ್ಮ ಗ್ಯಾರಂಟಿಗಳನ್ನು ಜನರು ಒಪ್ಪಿಕೊಂಡಿದ್ದಾರೆ ಎಂದರು.
ಇದಕ್ಕೆ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಇವರು ಚುನಾವಣೆಗೆ ಮುನ್ನ ಹೇಳಿದಂತೆ ಅಧಿಕಾರಕ್ಕೆ ಬಂದ ಮೇಲೆ ನಡೆದುಕೊಂಡಿಲ್ಲ. ಇದರಿಂದ ಮೋಸ ಆಗಿದೆ ಎಂದು ಹೇಳ್ತಿದ್ದೇವೆ ಎಂದರು.
ಇದಕ್ಕೆ ಉತ್ತರವಾಗಿ ಈ ಹಿಂದಿನ ಚುನಾವಣೆಯ ಬಿಜೆಪಿ ಪ್ರಣಾಳಿಕೆಯನ್ನು ಡಿ.ಕೆ. ಶಿವಕುಮಾರ್ ತೋರಿಸಿದರು. ಬಿಜೆಪಿ ನಡೆಸುತ್ತಿರುವುದುಪಶ್ಚಾತ್ತಾಪದ ಪ್ರತಿಭಟನೆ. ಜನರ ಸಮಸ್ಯೆ ಅರ್ಥ ಮಾಡಿಕೊಳ್ಳುವಲ್ಲಿ ಎಡವಿದೆವು ಎಂದು ಪಶ್ಚಾತ್ತಾಪದ ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದು 24 ಗಂಟೆ ಒಳಗೆ ಸಾಲಮನ್ನ ಅಂತ ಪ್ರಣಾಳಿಕೆಯಲ್ಲಿ ಹೇಳಿದ್ದರು. ಆದರೆ ಮಾಡಲಿಲ್ಲ. ಇವರಿಗೆ ಮಾನ ಮರ್ಯಾದೆ ಇಲ್ಲ. ಇವರ ನಿಲುವಳಿ ಸೂಚನೆ ತಿರಸ್ಕಾರ ಮಾಡಿ ಎಂದರು.
ಇದನ್ನೂ ಓದಿ: Assembly Session: ಮತಾಂತರ ನಿಷೇಧ, ಕೃಷಿ ಕಾನೂನುಗಳು ಈ ಅಧಿವೇಶನದಲ್ಲೇ ವಾಪಸ್: ಸದನ ಸಲಹಾ ಸಮಿತಿಯಲ್ಲಿ ಚರ್ಚೆ
ಸ್ಪೀಕರ್ ಯು.ಟಿ. ಖಾದರ್ ಅವರು ನಿಲುವಳಿ ಸೂಚನೆಯ ಬದಲಿಗೆ ನಿಯಮ 69 ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಘೋಷಿಸಿದರು. ನಿಲುವಳಿ ಸೂಚನೆಗೆ ಪಟ್ಟು ಹಿಡಿದ್ದ ಬಿಜೆಪಿಗೆ ಈ ಮೂಲಕ ಹಿನ್ನಡೆ ಆಯಿತು.