ಬೆಂಗಳೂರು: ವಿಧಾನ ಮಂಡಲ ಅಧಿವೇಶನ (Assembly Session) ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಸನ್ನೆ ಮಾಡಿದ್ದಕ್ಕೆ ಬಿಜೆಪಿ ಶಾಸಕರನ್ನು ಸ್ಪೀಕರ್ ಯು.ಟಿ. ಖಾದರ್ ಅಮಾನತು ಮಾಡಿದರು. ಸ್ಪೀಕರ್ ಉದ್ದೇಶ ಪೂರ್ವಕವಾಗಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಹುಡುಗಾಟಿಕೆ ರೀತಿಯಲ್ಲಿ ಹೀಗೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿಯ 10 ಸದಸ್ಯರನ್ನು ಅಮಾನತು ಮಾಡಿರುವ ಸ್ಪೀಕರ್ ಯು.ಟಿ. ಖಾದರ್ ಕ್ರಮವನ್ನು ಖಂಡಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಸೇರಿದಂತೆ ದೇಶದ ಹಲವು ಪಕ್ಷಗಳು ಒಕ್ಕೂಟವನ್ನು ರಚಿಸಿಕೊಂಡು, ಅದಕ್ಕೆ “ಇಂಡಿಯಾ” ಎಂದು ದೇಶದ ಹೆಸರಿಟ್ಟು ಎರಡನೇ ದಿನಕ್ಕೆ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದಾರೆ. ಸರ್ಕಾರದ ಬಲ್ಡೋಜರ್ ನೀತಿ ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ: Assembly Session : ಬಿಜೆಪಿ ರೌಡಿಗಿರಿಗೆ ಹೆದರಲ್ಲ; ಮಹಾಘಟಬಂಧನಕ್ಕೆ IAS ಅಧಿಕಾರಿಗಳ ಬಳಕೆ ತಪ್ಪಲ್ಲ: ಸಿದ್ದರಾಮಯ್ಯ
ಸಭಾಧ್ಯಕ್ಷರ ಪೀಠದಲ್ಲಿ ದಲಿತರು ಕುಳಿತುಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡುವ ಮೂಲಕ ಕ್ಷುಲ್ಲಕ, ಕೀಳು ಮಟ್ಟದ ಅಭಿರುಚಿ ತೋರಿಸಿದ್ದಾರೆ. ದಲಿತರ ಅನುಕಂಪ ಪಡೆಯಲು ಈ ರೀತಿ ಮಾಡುತ್ತಲಿದ್ದಾರೆ. ಆ ಪೀಠದಲ್ಲಿ ಕುಳಿತಿರುವುದು ಉಪ ಸಭಾಧ್ಯಕ್ಷರಾಗಿದ್ದಾರೆ. ಬಿಜೆಪಿ ಸದಸ್ಯರ ಹೋರಾಟಕ್ಕೆ ನನ್ನ ಬೆಂಬಲ ಇದೆ. ಬಿಜೆಪಿಯವರು ನಾವು ಸೇರಿ ಹೋರಾಟ ಮಾಡುತ್ತಿದ್ದೇವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಾವು ಹೀಗೆ ಮಾಡಿಲ್ಲ
ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಮಹಾಘಟಬಂಧನ ಸಭೆ ವಿಚಾರವಾಗಿ ರಾಜ್ಯ ಸರ್ಕಾರವು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ. ಐಎಎಸ್ ಅಧಿಕಾರಿಗಳನ್ನು ರಾಜಕೀಯ ಸಭೆಗೆ ಬಳಸಿಕೊಂಡಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸದನದಲ್ಲಿ ಇಂದು ಜೆಡಿಎಸ್, ಬಿಜೆಪಿಯವರು ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ಮುಂದಾದೆವು. ಆದರೆ, ಪ್ರತಿಷ್ಠೆಯಿಂದ ನಾವು ಮಾಡಿದ್ದೇ ಸರಿ ಎಂದು ಕಾಂಗ್ರೆಸ್‌ನವರು ನಡೆದುಕೊಂಡಿದ್ದಾರೆ. ನಾವು ಯಾವುದೇ ರೀತಿ ಗಣ್ಯರಿಗೆ ಭದ್ರತೆ ಕೊಡಲು ಅಧಿಕಾರಿಗಳನ್ನು ಬಳಸಿಕೊಂಡಿಲ್ಲ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗಣ್ಯರನ್ನು ಸ್ವಾಗತಿಸಲು ಅಧಿಕಾರಿಗಳನ್ನು ಬಳಸಿಕೊಂಡಿಲ್ಲ. ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಮಾಡಿಲ್ಲ. ಗುಲಮರಾನ್ನಾಗಿ ಅಧಿಕಾರಿಗಳನ್ನು ಯಾರ ಮನೆ ಬಾಗಿಲಿಗೂ ಕಳುಹಿಸಿಲ್ಲ. ಈ ಸರ್ಕಾರದವರು ಸುಳ್ಳು ಹೇಳಿದ್ದಾರೆ. ವಿರೋಧ ಪಕ್ಷಗಳನ್ನು ನೆಲಸಮ ಮಾಡಲು ಹೊರಟಿರೋದು ಸರ್ಕಾರದ ಉದ್ಧಟತನ. ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ. ಬಿಜೆಪಿ ನಾವು ಸೇರಿ ಹೋರಾಟ ಮಾಡ್ತಾ ಇದ್ದೇವೆ. ಕೆಲವು ಮಂತ್ರಿಗಳು, ಶಾಸಕರನ್ನು ಮುಗಿಸುವುದಾಗಿ ಸದನದಲ್ಲಿ ಹೇಳಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಎಚ್.ಡಿ. ಕುಮಾರಸ್ವಾಮಿ ಮಾಡಿದ ಆರೋಪ ಏನು? ಇಲ್ಲಿದೆ ವಿಡಿಯೊ
ಇದನ್ನೂ ಓದಿ: Assembly Session : ಸಸ್ಪೆಂಡ್ ವಿರೋಧಿಸಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ; ನಾಳೆ ರಾಜ್ಯಪಾಲರಿಗೆ ದೂರು
ವಿಧಾನಸಭೆ ಕಾರ್ಯದರ್ಶಿಗೆ ಪತ್ರ
ಇದೇ ವೇಳೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಅವಿಶ್ವಾಸ ಮಂಡಿಸಲು ಅವಕಾಶ ಕೋರಿ ವಿಧಾನಸಭೆ ಕಾರ್ಯದರ್ಶಿಗೆ ಪತ್ರ ಸಲ್ಲಿಸಿದ್ದಾರೆ.