ಬೆಂಗಳೂರು: ಬಿಜೆಪಿ ವಿರುದ್ಧ ಸದನದಲ್ಲೂ (Assembly Session) ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಾಗ್ದಾಳಿ ಮುಂದುವರಿಸಿದ್ದಾರೆ. ಮಳೆ ಹಾನಿ, ಜನರ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂಬ ಸೂಚನೆ ನಡುವೆಯೂ, ಬಿಜೆಪಿ ಅವಧಿಯ ಹಗರಣಗಳ ಪಟ್ಟಿ ಓದುತ್ತಾ ಪ್ರದೀಪ್ ಈಶ್ವರ್ ಸದ್ದು ಮಾಡಿದ್ದರಿಂದ ಅವರನ್ನು ಮನವೊಲಿಸಲು ಸ್ಪೀಕರ್ ಹೈರಾಣಾದರು. ಕುಳಿತುಕೊಳ್ಳಿ ಎಂದು ಹೇಳುತ್ತಿದ್ದರೂ ಮಾತು ಕೇಳದ ಹಿನ್ನೆಲೆಯಲ್ಲಿ “ಏನಾಗಿದೆ ಇವರಿಗೆ, ಕೈಗೆ ಕಬ್ಬಿಣ ಏನಾದರೂ ಕೊಡ್ರಿ, ತಲೆ ನಿಯಂತ್ರಣದಲ್ಲಿ ಇಲ್ವಾ?” ಎಂದು ಸ್ಪೀಕರ್ ಯು.ಟಿ.ಖಾದರ್ ಅಸಮಾಧಾನ ಹೊರಹಾಕಿದ್ದಾರೆ.
ಸ್ಪೀಕರ್ ಯು.ಟಿ.ಖಾದರ್ ಒತ್ತಾಯ ಮಾಡುತ್ತಿದ್ದರೂ ಮಾತು ನಿಲ್ಲಿಸದಿದ್ದರಿಂದ ಕೊನೆಗೆ ಪ್ರದೀಪ್ ಈಶ್ವರ್ ಬಳಿ ಸರ್ಕಾರಿ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೋಗಿ ಕುಳಿತುಕೊಳ್ಳುವಂತೆ ಕೈ ಮುಗಿದು ಮನವಿ ಮಾಡಿದರು. ನಂತರ ಪ್ರದೀಪ್ ಬಳಿ ಹೋಗಿ ಕುಳಿತುಕೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು. ಆಗ ಪ್ರದೀಪ್ ಈಶ್ವರ್‌ಗೆ ಬಿಜೆಪಿ ಸದಸ್ಯರು ಛೇಡಿಸಿದರು.
ಪ್ರದೀಪ್ ಈಶ್ವರ್ ಹೇಡಿ ಅಲ್ಲಾ, ಪ್ರದೀಪ್ ಈಶ್ವರ್ ಯು ಕೆನ್ ಡು ಇಟ್ ಎಂದು ಬಿಜೆಪಿ ಶಾಸಕರು ಕೂಗುತ್ತಾ ಛೇಡಿಸಿದರು. ಈ ವೇಳೆ ಬಿಜೆಪಿ ಶಾಸಕರು ಹಾಗೂ ಪ್ರದೀಪ್ ಈಶ್ವರ್ ನಡುವೆ ಮಾತಿನ ಚಕಮಕಿ ಉಂಟಾಯಿತು. ಆಗ ಪ್ರದೀಪ್ ಈಶ್ವರ್‌ನ ಸಮಾಧಾನ ಮಾಡಲು ಶಾಸಕ ನಾರಾಯಣ ಸ್ವಾಮಿ ಧಾವಿಸಿ ಹೋದರು.
ಈ ವೇಳೆ ವಿಪಕ್ಷನಾಯಕ ಆರ್.ಅಶೋಕ್ ಗರಂ ಆಗಿ, ಏನು ಬೆದರಿಕೆ ಹಾಕುತ್ತೀರಾ? ಪ್ರದೀಪ್ ಈಶ್ವರ್‌ನ ಕಂಟ್ರೋಲ್ ಮಾಡಕ್ಕೆ ಆಗಲ್ಲವೇ? ಕಾಂಗ್ರೆಸ್‌ನ ಮಾನ ಮರ್ಯಾದೆ ಎಲ್ಲ ಹೊರಟೇ ಹೋಯಿತು. ಪ್ರದೀಪ್ ಈಶ್ವರ್ ಯು ಕೆನ್ ಡು ಇಟ್ ಎಂದು ಕೂಗಿದರು.
ಗದ್ದಲದ ನಡುವೆಯೇ ಬಿಜೆಪಿ ವಿರುದ್ಧ ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು. ಬಿಜೆಪಿಯವರನ್ನು ಸದನದಿಂದ ಹೊರಗೆ ಹಾಕಿ ಎಂದು ಶ್ರೀನಿವಾಸ ಆಗ್ರಹಿಸಿದರು. ಈ ವೇಳೆ ಬಿಜೆಪಿ ಅವಧಿಯ ಹಗರಣಗಳ ಪಟ್ಟಿಯನ್ನು ಪ್ರದೀಪ್ ಈಶ್ವರ್ ಓದಿದರು. ಈ ವೇಳೆ ಬಿಜೆಪಿ ಸದಸ್ಯರು ಬಂಡಲ್ ಬಂಡಲ್ ಎಂದು ಕೂಗುತ್ತಾ ಸದನದ ಬಾವಿಯಿಂದಲೇ ಸನ್ನೆ ಮಾಡಿ ಕಿಚಾಯಿಸಿದರು.
ಈ ವೇಳೆ ಬಿಜೆಪಿ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರದೀಪ್ ಈಶ್ವರ್, ಸ್ಪೀಕರ್ ಮನವಿಗೂ ಜಗ್ಗದೇ ಬಿಜೆಪಿ ವಿರುದ್ಧ ಹರಿಹಾಯ್ದರು. ಕೊನೆಗೆ ಬಲವಂತವಾಗಿ ಪ್ರದೀಪ್ ಈಶ್ವರ್‌ರನ್ನು ಕಾಂಗ್ರೆಸ್ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ ಮತ್ತು ಜಿ.ಎಚ್. ಶ್ರೀನಿವಾಸ್ ಸುಮ್ಮನಿರಿಸಿದರು. ಕುಳಿತುಕೊಂಡರೂ ಮತ್ತೆ ಬಿಜೆಪಿ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸುತ್ತಿದ್ದರು. ಆಗ ಪ್ರದೀಪ್ ನಡೆಗೆ ಸ್ಪೀಕರ್ ಕೂಡ ತೀವ್ರ ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ | Karnataka Job Reservation: ಕನ್ನಡಿಗರಿಗೆ ಮೀಸಲಾತಿ ನೀಡಲು ಕರವೇ ಆಗ್ರಹ; ʼಫೋನ್ ಪೇʼ ಬಾಯ್ಕಾಟ್ ಅಭಿಯಾನ ಶುರು!
ಈ ವೇಳೆ ಸರ್ಕಾರ ಗೂಂಡಾಗಿರಿ ಮಾಡುತ್ತಿದೆ, ಆಡಳಿತ ಪಕ್ಷದವರಿಗೇ ಮಾತನಾಡಲು ಬಿಡುತ್ತಿಲ್ಲ. ಪ್ರದೀಪ್ ಈಶ್ವರ್ ಟ್ಯಾಲೆಂಟ್ ಏನು? ಆದರೆ, ಅವರಿಗೆ ಮಾತನಾಡಲೂ ಸರ್ಕಾರ ಬಿಡುತ್ತಿಲ್ಲ ಎಂದ ವಿಪಕ್ಷ ನಾಯಕ ಅಶೋಕ್ ಸದನದಲ್ಲಿ ಲೇವಡಿ ಮಾಡಿದರು.