ಬೆಂಗಳೂರು: ವಿಧಾನಸಭೆ ಸ್ಪೀಕರ್ ಆಗಿದ್ದವರು ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆ ಎನ್ನುವುದು ಮೂಢನಂಬಿಕೆಯಾಗಿದ್ದು, ಅದನ್ನು ನಂಬುವುದಿಲ್ಲ ಎಂದು ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಯು.ಟಿ. ಖಾದರ್ ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಯು.ಟಿ. ಖಾದರ್, ಸಂವಿಧಾನ ಬದ್ಧ ಗೌರವಯುತ ಹುದ್ದೆ ಇದು. ಹೈಕಮಾಂಡ್ ಹೇಳಿದೆ ಅದನ್ನು ನಾನು ಒಪ್ಪಿದ್ದೇನೆ. ಸಚಿವ ಸ್ಥಾನ ಎಲ್ಲರಿಗೂ ಸಿಗುತ್ತದೆ, ಸ್ಪೀಕರ್ ಎಲ್ಲರಿಗೂ ಸಿಗಲ್ಲ.
ಹಿಂದೆ ಸಚಿವರಾಗಿ ಕೆಲಸ ಮಾಡಿದ್ದೇನೆ. ಇಂದು ಸ್ಪೀಕರ್ ಆಗಿ ಎಂದು ಸೂಚನೆ ಕೊಟ್ಟಿದ್ದಾರೆ. ಪಾರದರ್ಶಕವಾಗಿ ನಾನು ನಡೆಸಿಕೊಂಡು ಹೋಗ್ತೀನಿ. ರಾಜಕಾರಣ ದಿಢೀರ್ ಅಂತನೇ ಆಗೋದು. ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಅವರು ಚರ್ಚೆ ಮಾಡಿದ್ದಾರೆ. ಒಮ್ಮತದ ಆಯ್ಕೆ ಇದು ಅಷ್ಟೆ.
ಸ್ಪೀಕರ್ ಆದವರು ಸೋಲ್ತಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೂಡನಂಬಿಕೆಯನ್ನು ನಾನು ನಂಬಲ್ಲ. ಜನರ, ಪಕ್ಷದ, ಕ್ಷೇತ್ರದ ಆಶೀರ್ವಾದ ನನ್ನ ಮೇಲಿದೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಪಕ್ಷದ ತೀರ್ಮಾನ ಇದು. ಹೊಸ ಮುಖ, ಯುವಕರಿಗೆ ಅವಕಾಶ ಕೊಡಬೇಕು ಅಂತ ತೀರ್ಮಾನ ಆಗಿದೆ. ಆರು ಬಾರಿ ಖಾದರ್ ಅವರು ಎಂಎಲ್‌ಎ ಆಗಿದ್ದಾರೆ. ತುಂಬಾ ಜ್ಞಾನ ಇದೆ, ಹಾಗಾಗಿ ಅವರಿಗೆ ಕೊಡಲಾಗಿದೆ. ಈ ಸ್ಥಾನಕ್ಕೆ ಅವರು ಸೂಕ್ತ ಅಂತ ಎನ್ನಿಸಿದೆ. ತುಂಬಾ ಜ್ಞಾನ ಇದೆ, ಎಲ್ಲದರ ಬಗ್ಗೆ ತಿಳಿದುಕೊಂಡಿದ್ದಾರೆ. ಹೊಸಬರಿಗೆ ನಾವು ಅವಕಾಶ ಕೊಡಬೇಕು ಅಂತ ಈ ನಿರ್ಧಾರ ಮಾಡಲಾಗಿದೆ ಎಂದರು.
ಇದನ್ನೂ ಓದಿ: Assembly session: ಸ್ಪೀಕರ್‌ಗಿರಿಗೆ ಒಪ್ಪಿದ ಯು.ಟಿ ಖಾದರ್; ಮುಸ್ಲಿಂ ಸಮುದಾಯದ ಮೊದಲ ಸ್ಪೀಕರ್, 2 ವರ್ಷದ ಶರತ್ತು