ಬೆಂಗಳೂರು: ನಾಳೆ ವಿಧಾನಸಭೆ ಸ್ಪೀಕರ್ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಆದರೆ ಯಾರೂ ಸ್ಪೀಕರ್ ಸ್ಥಾನ ವಹಿಸಿಕೊಳ್ಳಲು ಮುಂದಾಗದ ಹಿನ್ನೆಲೆಯಲ್ಲಿ, ಯು.ಟಿ ಖಾದರ್ ಅವರನ್ನು ಒಲಿಸಲು ಹೈಕಮಾಂಡ್ ಒದ್ದಾಡುತ್ತಿದೆ.
ಬಹುಮತ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್ ಇಂದು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಬೇಕಿದೆ. ಮೊನ್ನೆ ರಾತ್ರಿಯಿಂದಲೇ ಇದಕ್ಕಾಗಿ ಹಿರಿಯ ಶಾಸಕರ ಮನವೊಲಿಸಲು ಕೆ.ಸಿ ವೇಣುಗೋಪಾಲ್ ಯತ್ನಿಸುತ್ತಿದ್ದಾರೆ. ಆರ್.ವಿ ದೇಶಪಾಂಡೆ, ಟಿ.ಬಿ ಜಯಚಂದ್ರ, ಎಚ್.ಕೆ ಪಾಟೀಲ್ ಮುಂತಾದ ಅನುಭವಿಗಳನ್ನು ಒಪ್ಪಿಸಲು ವೇಣುಗೋಪಾಲ್ ಪ್ರಯತ್ನಿಸಿದ್ದು, ಮೂವರೂ ಸ್ಪೀಕರ್ ಆಗಲು ಹಿಂದೇಟು ಹಾಕಿದ್ದಾರೆ.
ಹೀಗಾಗಿ ಸ್ಪೀಕರ್ ಸ್ಥಾನದ ಜವಾಬ್ದಾರಿ ಯು.ಟಿ ಖಾದರ್ ಹೆಗಲೇರಲು ಮುಂದಾಗಿದೆ. ವೇಣುಗೋಪಾಲ್ ಅವರು ಖಾದರ್‌ಗೆ ಕರೆ ಮಾಡಿದ್ದು, ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದರೆ, ಕಾನೂನು ಗೊತ್ತಿರುವ ಹಿರಿಯ ನಾಯಕರಿಗೆ ಜವಾಬ್ದಾರಿ ಕೊಡಿ ಎಂದು ಖಾದರ್ ಮನವಿ ಮಾಡಿದ್ದಾರೆ.
ಸದನದಲ್ಲಿ ಡೆಪ್ಯುಟಿ ನಾಯಕನಾಗಿ ಕೆಲಸ ಮಾಡಿದ್ದೇನೆ. ಸ್ಪೀಕರ್ ಆದರೆ ಹೊರಗಡೆ ಮಾತನಾಡುವಂತಿಲ್ಲ. ಕರಾವಳಿಯಲ್ಲಿ ಬಿಜೆಪಿಗೆ ಕೌಂಟರ್ ಕೊಡದಿದ್ದರೆ ಮುಂದಿನ ಚುನಾವಣೆ ಎದುರಿಸುವುದು ಕಷ್ಟ ಎಂದು ಯು.ಟಿ ಖಾದರ್ ವಾದಿಸಿದ್ದಾರೆ. ಆದರೆ ಇದನ್ನು ಒಪ್ಪದ ವೇಣುಗೋಪಾಲ್, ನೀವು ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿಕೊಳ್ಳಿ ಎಂದಿದ್ದಾರೆ.
ಯು.ಟಿ ಖಾದರ್ ಅವರು ದಕ್ಷಿಣ ಕನ್ನಡದ ಉಳ್ಳಾಲ ಕ್ಷೇತ್ರದಿಂದ ಸತತ ಐದನೇ ಬಾರಿಗೆ ಸ್ಪರ್ಧಿಸಿ ಶಾಸಕರಾಗುತ್ತಿದ್ದಾರೆ. ಈ ಹಿಂದೆ ಆರೋಗ್ಯ ಸಚಿವರಾಗಿ, ವಿಧಾನಸಭೆಯ ವಿರೋಧಪಕ್ಷದ ಉಪನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ಈ ಹಿಂದೆ ಸ್ಪೀಕರ್ ಆಗಿದ್ದವರು ನಂತರದ ಚುನಾವಣೆಗಳಲ್ಲಿ ಸಾಲುಸಾಲಾಗಿ ಸೋತಿರುವುದರಿಂದ, ಸ್ಪೀಕರ್ ಆಗಲು ಕೈ ಹಿರಿಯರು ಹಿಂದೇಟು ಹಾಕುತ್ತಿದ್ದಾರೆ. ಸ್ಪೀಕರ್ ಆದರೆ ರಾಜಕೀಯ ಜೀವನ ಮುಗಿದಂತೆ ಎಂಬ ಆತಂಕ ಹಲವರಲ್ಲಿ ಮನೆ ಮಾಡಿದೆ.
ಇದನ್ನೂ ಓದಿ: Assembly Session: ಸೋಮವಾರದಿಂದ 3 ದಿನ ಅಧಿವೇಶನ: ಆರ್.ವಿ. ದೇಶಪಾಂಡೆ ಪ್ರೋಟೆಮ್ ಸ್ಪೀಕರ್