Site icon Vistara News

Assembly Session: ಯು.ಟಿ. ಖಾದರ್‌ 23ನೇ ಸ್ಪೀಕರ್‌: ಮುಸ್ಲಿಂ ಸಮುದಾಯದಿಂದ ಮೊದಲ ಸಭಾಧ್ಯಕ್ಷ

assembly session UT Khader unanimously elected as assembly speaker

#image_title

ಬೆಂಗಳೂರು: ಕರ್ನಾಟಕ ವಿಧಾನಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ಶಾಸಕರೊಬ್ಬರು ಸ್ಪೀಕರ್‌ ಆಗಿ ಆಯ್ಕೆಯಾಗಿದ್ದಾರೆ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ 53 ವರ್ಷದ ಯು.ಟಿ. ಖಾದರ್‌ ಅವರನ್ನು ವಿಧಾನಸಭೆಯ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಭಾಧ್ಯಕ್ಷ ಸ್ಥಾನಕ್ಕೆ ಯು.ಟಿ. ಖಾದರ್‌ ಅವರ ಹೆಸರನ್ನು ಸಿಎಂ ಸಿದ್ದರಾಮಯ್ಯ ಸೂಚಿಸಿದರು. ಪ್ರಸ್ತಾವನೆಯನ್ನು ಡಿ.ಕೆ. ಶಿವಕುಮಾರ್ ಅನುಮೋದಿಸಿದರು. ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಹಾಕದ ಹಿನ್ನೆಲೆಯಲ್ಲಿ 23ನೇ ಸ್ಪೀಕರ್‌ ಆಗಿ ಖಾದರ್‌ ಅವರನ್ನು ಅವಿರೋಧವಾಗಿ ಘೋಷಣೆ ಮಾಡಲಾಯಿತು.

ನೂತನ ಸಭಾಧ್ಯಕ್ಷರ ಹೆಸರನ್ನು ಹಂಗಾಮಿ ಸ್ಪೀಕರ್ ದೇಶಪಾಂಡೆ ಘೋಷಣೆ ಮಾಡಿದ ಕೂಡಲೆ ಸಭಾಧ್ಯಕ್ಷ ಕುರ್ಚಿಯತ್ತ ಸಾಗಿ ಆಸೀನರಾದರು. ನಂತರ ಸಿಎಂ ಸಿದ್ದರಾಮಯ್ಯ ಅವರಿಂದ ಆರಂಭಿಸಿ ಖಾದರ್‌ ಅವರ ಕುರಿತು ಅಭಿನಂದನಾ ನುಡಿಗಳನ್ನು ನಾಯಕರು ಆಡಿದರು.

ಸಿದ್ದರಾಮಯ್ಯ ಮಾತನಾಡಿ,

ನಿಮ್ಮ ತಂದೆಯವರು ಶಾಸಕರಾಗಿದ್ದವರು. ನಿಮಗೆ ಸದನ ವೀರ ಪ್ರಶಸ್ತಿ ಸಿಕ್ಕಿತ್ತು. ನೀವೊಬ್ಬ ಉತ್ತಮ ಶಾಸಕರು ಅನ್ನುವುದು ಗೊತ್ತಿದೆ. ಆ ಸ್ಥಾನ ಅಲಂಕರಿಸಿದವರು ಪಕ್ಷಾತೀತವಾಗಿ ಕೆಲಸ ಮಾಡಬೇಕು. ಹಳೆಯ, ಹೊಸ ಸದಸ್ಯರು ಇಲ್ಲಿದ್ದಾರೆ. ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳು ಇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಿರಬೇಕು.

ಏಳು ಕೋಟಿ ಕನ್ನಡಿಗರ ಹಿತ ರಕ್ಷಣೆಯಾಗಬೇಕು. ಕಾನೂನು ಸುವ್ಯವಸ್ಥೆ ಇಲ್ಲದಿದ್ದರೆ ಬಂಡವಾಳ ಬರಲ್ಲ. ಬಂಡವಾಳ ಹಾಕದಿದ್ದರೆ ಉದ್ಯಮ ಆಗಲ್ಲ. ಉದ್ಯಮವಿಲ್ಲದೆ ಉದ್ಯೋಗ ಸೃಷ್ಟಿಯಾಗಲ್ಲ. ಹಾಗಾಗಿ ಒಂದಕ್ಕೊಂದು ಪೂರಕವಾಗಿರುತ್ತದೆ. ಈ ಸದನದಲ್ಲಿ ಅದರ ಬಗ್ಗೆ ಗಂಭೀರ ಚರ್ಚೆಯಾಗಬೇಕು. ರಚನಾತ್ಮಕ‌ಸಲಹೆಗಳನ್ನ ಕೊಡಬೇಕು.

ಚರ್ಚೆಗಳು ಆರೋಗ್ಯಕರವಾಗಿರಬೇಕು. ಸದನದ ಚರ್ಚೆಗಳು ಮೇಲ್ಮಟ್ಟಕ್ಕೆ‌ ಹೋಗಲಿ. ಆ ನಿಟ್ಟಿನಲ್ಲಿ ನಿಮ್ಮ ಸ್ಥಾನ ಅವಕಾಶ ನೀಡಲಿ ಎಂದು ಹೇಳಿದರು.

ಯು.ಟಿ ಖಾದರ್‌ ಅವರ ಪರಿಚಯ

ಪೂರ್ಣ ಹೆಸರು: ಯು.ಟಿ ಅಬ್ದುಲ್ ಖಾದರ್ ಫರೀದ್
ತಂದೆಯ ಹೆಸರು: ಯು.ಟಿ ಫರೀದ್
ತಾಯಿಯ ಹೆಸರು: ಯು.ಟಿ ನಸೀಮಾ ಫರೀದ್
ಜನ್ಮ ದಿನಾಂಕ: 12-10-1969

ಶೈಕ್ಷಣಿಕ ವಿವರ: LKG ಶಿಕ್ಷಣವನ್ನು ರೋಶನಿ ನಿಲಯದಲ್ಲಿ, ಒಂದರಿಂದ ನಾಲ್ಕನೇ ತರಗತಿ ವರೆಗೆ ಸೈನ್ಟ್ ಜೆರೋಝ, ನಾಲ್ಕನೇ ತರಗತಿಯಿಂದ ಪ್ರೌಢ ಶಿಕ್ಷಣದ ವರೆಗೆ ಸೇಂಟ್‌ ಅಲೋಶಿಯಸ್, ಪದವಿ ಪೂರ್ವ ಶಿಕ್ಷಣವನ್ನು ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಕಲಿತು ನಂತರ SDM ಕಾಲೇಜಿನಲ್ಲಿ BA, LLB ಪದವಿ ಶಿಕ್ಷಣ ಮುಗಿಸಿದರು.

ಹವ್ಯಾಸ: ಬೈಕ್ ಹಾಗೂ ಕಾರ್ ರೇಸ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮೋಟೋ ರೇಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು. ಕ್ರೀಡೆಯಲ್ಲಿ ಕೂಡ ಆಸಕ್ತಿ ಹೊಂದಿದ್ದು ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಹಾಕಿ, ಟೆನ್ನಿಸ್ ಹಾಗೂ ಇತರ ಕ್ರೀಡೆಗಳನ್ನು ಆಡುತ್ತಿದ್ದರು.

ರಾಜಕೀಯ ವಿವರ: 1990ರಲ್ಲಿ NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 1994ರಿಂದ 1999ರ ವರೆಗೆ NSUI ಜಿಲ್ಲಾಧ್ಯಕ್ಷರಾಗಿ, 1999ರಿಂದ 2001ರ ವರೆಗೆ NSUI ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2003ರಲ್ಲಿ ಘಟಪ್ರಭದಲ್ಲಿ ನಡೆದ ರಾಷ್ಟ್ರ ಮಟ್ಟದ ಸೇವಾದಳ ತರಬೇತಿ ಶಿಬಿರದಲ್ಲಿ, 2004ರಲ್ಲಿ ಹಿಮಾಚಲ ಪ್ರದೇಶದ ಕಂದಘಾಟ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಸೇವಾದಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ 2005ರಲ್ಲಿ ಸೇವಾದಳದ ಹೆಚ್ಚುವರಿ ಮುಖ್ಯ ಸಲಹೆಗಾರರಾಗಿ ಆಯ್ಕೆಯಾಗಿದ್ದರು. ನಂತರ ಕೆಪಿಸಿಸಿ ಸದಸ್ಯರಾಗಿ, 2008ರಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಚುನಾವಣಾ ರಾಜಕೀಯ: 2008ರಲ್ಲಿ ತಮ್ಮ ತಂದೆಯವರ ನಿಧನದಿಂದ ತೆರವಾದ ಶಾಸಕ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ನಂತರ 2008, 2013, 2018 ಹಾಗೂ 2023ರಲ್ಲಿ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾದರು. ತಾವು ಶಾಸಕರಾಗಿದ್ದ 2008ರಿಂದ 2013ರ ಅವಧಿಯ ವಿಧಾನಸಭೆಯ ಅತ್ಯುತ್ತಮ ಕಾರ್ಯ ವೈಖರಿಗಾಗಿ ಸದನ ವೀರ ಹಾಗೂ ಶೈನಿಂಗ್ ಇಂಡಿಯಾ ಅವಾರ್ಡ್ ಪ್ರಶಸ್ತಿ ಗಳಿಸಿದರು.

2013ರ ಸಿದ್ದರಾಮಯ್ಯ ಸರಕಾರದಲ್ಲಿ ಆರೋಗ್ಯ ಸಚಿವರಾಗಿ 2016ರ ತನಕ ಕಾರ್ಯ ನಿರ್ವಹಿಸಿದರು. ಈ ಅವಧಿಯಲ್ಲಿ ರಾಜ್ಯದಲ್ಲಿ ಗುಟ್ಕಾ ನಿಷೇಧ, ಬೈಕ್ ಅಂಬ್ಯುಲೆನ್ಸ್, 108, ಆರೋಗ್ಯಶ್ರೀ, ದಂತ ಭಾಗ್ಯ, ಸರಕಾರೀ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ, ಹರೀಶ್ ಸಾಂತ್ವನ ಯೋಜನೆ ಮುಂತಾದ ಯೋಜನೆಗಳನ್ನು ಜಾರಿಗೆ ತಂದು ಕೇಂದ್ರ ಸರಕಾರ ನೀಡುವ ಉತ್ತಮ ಆರೋಗ್ಯ ಸಚಿವ ಪ್ರಶಸ್ತಿ ಕೂಡ ತನ್ನದಾಗಿಸಿ ಕೊಂಡಿದ್ದರು.

ನಂತರ 2016ರಿಂದ 2018ರ ತನಕ ಆಹಾರ ಸಚಿವರಾಗಿ ಅಧಿಕಾರ ಸ್ವೀಕರಿಸಿ, ಬಡವರು ಪಡಿತರ ಚೀಟಿಗಾಗಿ ಸಲ್ಲಿಸಬೇಕಾಗಿದ್ದ 10ರಿಂದ 13 ದಾಖಲೆಗಳನ್ನು ಕಡಿತಗೊಳಿಸಿ ಕೇವಲ ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಿ ಮನೆ ಬಾಗಿಲಿಗೆ ರೇಷನ್ ಕಾರ್ಡ್ ತಲುಪಿಸುವ ಯೋಜನೆಗೆ ಚಾಲನೆ ನೀಡಿದರು. ಬಿಪಿಎಲ್ ಕಾರ್ಡು ಪಡೆಯಲು ನಿಗದಿಪಡಿಸಿದ್ದ ಆದಾಯ ಮಿತಿ ಕಡಿತಗೊಳಿಸಿ ಬಿಪಿಎಲ್ ಕಾರ್ಡ್‌ನಿಂದ ವಂಚಿತರಾಗಿದ್ದ ಲಕ್ಷಾಂತರ ಮಂದಿ ರೇಷನ್ ಕಾರ್ಡ್ ಪಡೆಯಲು ನೆರವಾದರು.

2018ರ ಮೈತ್ರಿ ಸರಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿ ಮಂಗಳೂರು ಸ್ಮಾರ್ಟ್ ಸಿಟಿ ಸಹಿತ ಅನೇಕ ಯೋಜನೆಗಳನ್ನು ಪರಿಚಯಿಸಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಕರ್ನಾಟಕ ವಸತಿ ನಿಗಮದ ಅಧ್ಯಕ್ಷರಾಗಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿ, ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್‌ನ ಅಧ್ಯಕ್ಷರಾಗಿ, ಕರ್ನಾಟಕ ಕೊಳೆಗೇರಿ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2021ರಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿ ಆಯ್ಕೆಯಾಗಿ 2023ರ ವರೆಗೆ ಕಾರ್ಯ ನಿರ್ವಹಿಸಿದ್ದರು.

ಇದನ್ನೂ ಓದಿ: D.K. Shivakumar: ಕೇಸರಿ ಬಟ್ಟೆ ಹಾಕ್ಕೊಂಡು ಇಲಾಖೆಗೆ ಅವಮಾನ ಮಾಡಿದ್ದೀರ; ಕೇಸರೀಕರಣಕ್ಕೆ ಅವಕಾಶವಿಲ್ಲ: ಪೊಲೀಸರಿಗೆ ಡಿಕೆಶಿ ವಾರ್ನಿಂಗ್‌

Exit mobile version