ಚಿಕ್ಕೋಡಿ, ಕರ್ನಾಟಕ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರನ್ನು ಈ ಎಲೆಕ್ಷನ್‌ನಲ್ಲಿ ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ರಮೇಶ್ ಜಾರಕಿಹೊಳಿ, ಇದಕ್ಕಾಗಿ ಹಲವು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ನಿನ್ನೆಯಷ್ಟೇ ಅಥಣಿಯಲ್ಲಿ ಪ್ರಚಾರ ಮಾಡಿದ್ದ ಬಿ ಎಸ್ ಯಡಿಯೂರಪ್ಪ ಅವರು ಸವದಿ ಸೋಲಿಸಲು ಜನರಿಗೆ ಸುಫಾರಿ ನೀಡಿದ್ದರು. ಈಗ ರಮೇಶ್ ಜಾರಕಿಹೊಳಿ ಖೆಡ್ಡಾ ತೊಡುತ್ತಿದ್ದಾರೆ(Karnataka Election 2023).
ಸವದಿಯನ್ನು ಹೇಗಾದರೂ ಮಾಡಿ ಸೋಲಿಸಲು ಮುಂದಾಗಿರುವ ರಮೇಶ್ ಜಾರಕಿಹೊಳಿ ಅವರು ಅಥಣಿ ಕ್ಷೇತ್ರದ ಕಾಂಗ್ರೆಸ್ ಮುಖಂಡರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆಪರೇಷನ್ ಕಮಲ ಆರಂಭಿಸಿದ್ದಾರೆ. ಅಥಣಿಯಲ್ಲಿ ಭರ್ಜರಿ ಚುನಾವಣಾ ಪ್ರಚಾರದ ಜತೆಗೆ ರಾತ್ರಿ ವೇಳೆ ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದಲ್ಲಿ ತೊಡಿಗಿದ್ದಾರೆ. ಅಥಣಿಯ ಕಾಂಗ್ರೆಸ್‌ನ ಪ್ರಮುಖ ಮುಖಂಡರನ್ನು, ಸವದಿ ಅವರ ಆಪ್ತರನ್ನು ರಾತ್ರೋರಾತ್ರಿ ಭೇಟಿ ಮಾಡಿ, ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ.
ಇದನ್ನೂ ಓದಿ: Karnataka Election 2023: ಬೆಳಗಾವಿ ಬಿಜೆಪಿಯಲ್ಲಿಲ್ಲ ಹೊಂದಾಣಿಕೆ; ಶಶಿಕಲಾ ಜೊಲ್ಲೆ ವರ್ಸಸ್ ರಮೇಶ್ ಜಾರಕಿಹೊಳಿ
ಮನೆ ಮನೆಗೆ ಹೋಗಿ ಭೇಟಿಯಾಗಿ ಅವರೆನ್ನೆಲ್ಲ ಬಿಜೆಪಿಗೆ ಕರೆ ತರುವ ಪ್ರಯತ್ನವನ್ನು ರಮೇಶ್ ಜಾರಕಿಹೊಳಿ ಅವರು ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ರಾತ್ರಿ ಕಾರ್ಯಾಚರಣೆಗಿಳಿದಿದ್ದಾರೆ. ಧರೇಪ್ಪ ಠಕ್ಕನ್ನವರ್, ನಾನಾಸಾಬ ಅವತಾಡೆ ಮತ್ತು ತಮ್ಮಣ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿ ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ, ತಮ್ಮ ಮುಖಂಡರನ್ನು ಹಿಡಿದಿಟ್ಟುಕೊಳ್ಳುವುದೇ ಲಕ್ಷ್ಮಣ್ ಸವದಿ ಅವರಿಗೆ ಸವಾಲಾಗಿದೆ.