Site icon Vistara News

Murugha Seer | ಪರಿಶಿಷ್ಟ ಬಾಲಕಿ ಮೇಲೆ ದೌರ್ಜನ್ಯ, ಧಾರ್ಮಿಕ ಸಂಸ್ಥೆ ದುರುಪಯೋಗ: ಮುರುಘಾ ಶರಣರ ವಿರುದ್ಧ ಟೈಟ್‌ ಚಾರ್ಜ್‌ಶೀಟ್‌

Murugha Seer

ಚಿತ್ರದುರ್ಗ: ಮುರುಘಾ ಮಠದ ಹಾಸ್ಟೆಲ್‌ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಶರಣರಿಗೆ (Murugha Seer) ಪೋಕ್ಸೋ ಜತೆಗೆ ಈಗ ಅಟ್ರಾಸಿಟಿ ಪ್ರಕರಣದ ಕಂಟಕವೂ ಎದುರಾಗಿದೆ. ಮುರುಘಾಶ್ರೀ ಪ್ರಕರಣದ ಚಾರ್ಜ್‌ಶೀಟ್‌ “ವಿಸ್ತಾರ ನ್ಯೂಸ್‌”ಗೆ ಲಭ್ಯವಾಗಿದ್ದು, ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬಳು ಪರಿಶಿಷ್ಟ ಜಾತಿಗೆ ಸೇರಿದವಳು ಎಂಬ ವಿಷಯ ಗೊತ್ತಾಗಿದೆ.

ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣ ಸಂಬಂಧ ಬಾಲಕಿಯರ ಹೇಳಿಕೆ ಸೇರಿದಂತೆ ವಿವಿಧ ಆಯಾಮದಲ್ಲಿ ತನಿಖೆ ನಡೆಸಿದ್ದ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದ ತಂಡವು ಅಕ್ಟೋಬರ್ 27ರಂದು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿತ್ತು. ಎ ಮತ್ತು ಬಿ ಎಂಬುದಾಗಿ ಒಟ್ಟು ಎರಡು ಭಾಗವಾಗಿ ಚಾರ್ಜ್‌ಶೀಟ್‌ ಅನ್ನು ಪೊಲೀಸರು ಸಲ್ಲಿಸಿದ್ದರು. 347 + 347 ಪುಟಗಳ (ಒಟ್ಟು 694 ಪುಟ) ದೋಷಾರೋಪಣ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದರು. ಇದರಲ್ಲಿ ಈಗ ಮಹತ್ವದ ಅಂಶವನ್ನು ಉಲ್ಲೇಖಿಸಲಾಗಿದ್ದು, ಮುರುಘಾ ಶರಣರಿಗೆ ಅಟ್ರಾಸಿಟಿ ಕೇಸ್‌ ಸುತ್ತಿಕೊಂಡಿರುವುದು ತಿಳಿದುಬಂದಿದೆ.

ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತ ಬಾಲಕಿ
ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬಳು ಪರಿಶಿಷ್ಟ ಜಾತಿಗೆ ಸೇರಿದವಳಾಗಿರುವುದರಿಂದ ಮುರುಘಾ ಶರಣರ ಮೇಲೆ ಹೆಚ್ಚುವರಿ ಕಲಂ ಅಳವಡಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ತಡೆ ಪ್ರತಿಬಂಧಕ
ಅಧಿನಿಯಮ ಕಲಂ ಅಡಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ | Murugha Seer | ಮುರುಘಾ ಮಠದಲ್ಲಿದ್ದ ಫೋಟೊ ಕಳವಿಗೆ ಸೂಚಿಸಿದ್ದು ಬಸವರಾಜನ್‌ ದಂಪತಿ; ಬಾಯ್ಬಿಟ್ಟ ಬಂಧಿತರು!

ಕಲಂ 376(2)(N), 376(DA), 376(3), 201, 202, 506,R/34&37 ಐಪಿಸಿ ಮತ್ತು ಕಲಂ 17, 5(ಎಲ್) , 6 ಪೋಕ್ಸೋ ಕಾಯ್ದೆ-2012 ಮತ್ತು 3 ಕ್ಲಾಸ್ (1) ಸಬ್ ಕ್ಲಾಸ್ W(1),(2), 3 ಕ್ಲಾಸ್ (2), (V),(VA), SC/ST PA
1989 SEC 3(f) ಸೇರಿದಂತೆ ಹೆಚ್ಚುವರಿಯಾಗಿ ಕಾಯ್ದೆಯನ್ನು ಬಳಕೆ ಮಾಡಲಾಗಿದೆ ಎಂಬ ವಿಚಾರ ಗೊತ್ತಾಗಿದೆ.

ವಿವಿಧ ಕಲಂ ಅಡಿ ಕೇಸ್‌ ದಾಖಲು
ಅನ್ನ, ಅಕ್ಷರ ಮತ್ತು ಆಶ್ರಯ ನೀಡುವ ನೆಪದಲ್ಲಿ ದೌರ್ಜನ್ಯ ಎಸಗಲಾಗಿದೆ. ಬಡತನದಿಂದ ಆಶ್ರಯ ಬಯಸಿ‌ ಬಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ದಲಿತ ಸಮುದಾಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ವೈಯಕ್ತಿಕ ಇಚ್ಛೆಗೆ ಧಾರ್ಮಿಕ ಸಂಸ್ಥೆಯನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಸಂಸ್ಥೆಗಳ ದುರುಪಯೋಗ ಕಾಯ್ದೆ -1988, ಬಾಲಾಪರಾಧಿ ನ್ಯಾಯ ರಕ್ಷಣೆ ಕಲಂ 75, ಮಕ್ಕಳ ರಕ್ಷಣೆ ಕಾಯ್ದೆ 2015 ಅಡಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.

ಚಾರ್ಜ್‌ಶೀಟ್‌ನಲ್ಲಿ ಏನೆಲ್ಲ ಉಲ್ಲೇಖ?
ನಾಲ್ವರು ವಿದ್ಯಾರ್ಥಿನಿಯರನ್ನು ಹೇಗೆ? ಮತ್ತು ಯಾವ ಯಾವ ಸಂದರ್ಭದಲ್ಲಿ ಲೈಂಗಿಕ ಚಟುವಟಿಕೆಗೆ ಬಳಸಿಕೊಳ್ಳಲಾಗಿದೆ. ಜತೆಗೆ ಇದಕ್ಕೆ ಯಾರು ಸಹಾಯ, ಸಹಕಾರ ನೀಡಿದ್ದಾರೆ. ಮತ್ತುಬರುವ ಔಷಧವನ್ನು ಯಾವ ರೂಪದಲ್ಲಿ ನೀಡಲಾಗುತ್ತಿತ್ತು? ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಹೇಗೆ ಕೊಡಲಾಗುತ್ತಿತ್ತು? ಬಡತನವನ್ನು ಹೇಗೆ ತಮ್ಮ ದಾಹಕ್ಕೆ ಬಳಸಿಕೊಂಡಿದ್ದಾರೆ ಎಂಬಿತ್ಯಾದಿ ಅಂಶಗಳನ್ನು ಡಿವೈಎಸ್‌ಪಿಯವರು ದೋಷಾರೋಪ ಪಟ್ಟಿಯಲ್ಲಿ ವಿವರವಾಗಿ ಉಲ್ಲೇಖಿಸಿದ್ದಾರೆ.

ಅಟ್ರಾಸಿಟಿ ಬಗ್ಗೆ ಏನಿದೆ?
ಡಿವೈಎಸ್‌ಪಿ ನೀಡಿರುವ ದೋಷಾರೋಪ ಪಟ್ಟಿಯ ೨೪ ಮತ್ತು ೨೫ನೇ ಪುಟದಲ್ಲಿ ಮುರುಘಾ ಶರಣರು ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಉಲ್ಲೇಖ ಮಾಡಲಾಗಿದ್ದು, ಅದರ ವಿವರವನ್ನು ಇಲ್ಲಿ ಯಥಾವತ್ತು ನೀಡಲಾಗಿದೆ.

ಇದನ್ನೂ ಓದಿ | Murugha Seer | ಮುರುಘಾಶ್ರೀ ವಿರುದ್ಧ ಸುಳ್ಳು ದೂರು ಕೊಡಲು ಬಾಲಕಿಗೆ ಪ್ರಚೋದನೆ; ಆಡಿಯೊ ವೈರಲ್!

“1ನೇ ಆಪಾದಿತರು, ಲಿಂಗಾಯತ ಜಂಗಮ ಜನಾಂಗದವರಾಗಿದ್ದು, 1991 ರಿಂದ ಚಿತ್ರದುರ್ಗ ನಗರದ ಎಂ.ಕೆ.ಹಟ್ಟಿ ಬಳಿ ಇರುವ ಶ್ರೀ ಜಗದ್ಗುರು ಮುರುಘಾ ರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷರಾಗಿರುತ್ತಾರೆ. ಸದರಿ ಆಪಾದಿತರ ಅಡಿಯಲ್ಲಿ 2ನೇ ಆಪಾದಿತರು ಕೆಲಸ ಮಾಡುತ್ತಿರುತ್ತಾರೆ. 4ನೇ ಆಪಾದಿತರು ೧ನೇ ಆಪಾದಿತರ ಆಪ್ತರಾಗಿದ್ದು, ಮುರುಘಾ ಮಠಕ್ಕೆ ಸಂಬಂಧಿಸಿದೆ. ಎಲ್ಲ ವ್ಯವಹಾರಗಳ ಮಾಹಿತಿ ಹೊಂದಿದವರಾಗಿರುತ್ತಾರೆ. ೧ನೇ ಆಪಾದಿತರು ತಾವು ಪೀಠಾಧ್ಯಕ್ಷರಾಗಿರುವ ಮುರುಘಾ ಮಠದ ಅಡಿಯಲ್ಲಿ ಅಕ್ಕಮಹಾದೇವಿ ವಸತಿ ನಿಲಯವನ್ನು ನಡೆಸಿಕೊಂಡು ಹೋಗುತ್ತಿದ್ದು, ಮಠವು ಸ್ಥಾಪಿಸಿದ ಮತ್ತು ನಡೆಸುತ್ತಿರುವ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆದು ಶಿಕ್ಷಣ ಪಡೆಯುತ್ತಿರುವ ಬಡ ಕುಟುಂಬದಿಂದ ಬಂದ ಮಕ್ಕಳಲ್ಲಿ ಅಗತ್ಯವಾಗಿರುವವರಿಗೆ ಉಚಿತ ವಸತಿ ನಿಲಯಗಳಲ್ಲಿ ಆಶ್ರಯ ನೀಡುವ ಸೌಲಭ್ಯವನ್ನು ಕೊಡುತ್ತಾ ಬಂದಿರುತ್ತಾರೆ. ನೊಂದ ಬಾಲಕಿ ಸಾಕ್ಷಿ-3 ರವರು ಬಡ ಕುಟುಂಬಕ್ಕೆ ಸೇರಿದ ಬಾಲಕಿಯಾಗಿದ್ದು, ಮುರುಘಾ ಮಠಕ್ಕೆ ಸೇರಿರುವ ಪ್ರಿಯದರ್ಶಿನಿ ಪ್ರೌಢಶಾಲೆಯಲ್ಲಿ 2021ನೇ ಸಾಲಿನಲ್ಲಿ 10ನೇ ತರಗತಿಗೆ ಪ್ರವೇಶ ಪಡೆದು ಅದೇ ವರ್ಷ ಮಠದ ಆವರಣದಲ್ಲಿರುವ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಆಶ್ರಯ ಪಡೆದುಕೊಂಡಿರುತ್ತಾಳೆ. ಸದರಿ ವಸತಿ ನಿಲಯಕ್ಕೆ 2ನೇ ಆಪಾದಿತಳು ವಾರ್ಡನ್ ಎಂದು ಕೆಲಸ ಮಾಡುತ್ತಿದ್ದು, ಸಾಕ್ಷಿ-3 ರವರನ್ನು ಒಳಗೊಂಡಂತೆ ವಸತಿ ನಿಲಯದಲ್ಲಿರುವ ಎಲ್ಲ ಬಾಲಕಿಯರ ಸುರಕ್ಷತೆ ಮತ್ತು ಪೋಷಣೆ ಆರೋಪಿ 1 ಮತ್ತು 2 ರವರುಗಳು ಜವಾಬ್ದಾರರಾಗಿರುತ್ತಾರೆ.

ಸದರಿ ವಸತಿ ನಿಲಯದಲ್ಲಿರುವ ಮಕ್ಕಳ ಮತ್ತು ಕುಟುಂಬದವರ ಅನುಕಂಪ, ಗೌರವ ಮತ್ತು ವಿಶ್ವಾಸವನ್ನು ಗಳಿಸಿಕೊಂಡ ಆರೋಪಿತರು ಈ ರೀತಿಯ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ವಾರ್ಡನ್ ಆಗಿರುವ 2ನೇ ಆರೋಪಿಯ ಮೂಲಕ ಸಾಕ್ಷಿ-3 ಅವರನ್ನು 2021ರಲ್ಲಿ ಒಂದು ಬಾರಿ ಹಾಗೂ 2022ರಲ್ಲಿ ಇನ್ನೊಂದು ಬಾರಿ 2ನೇ ಆಪಾದಿತರು ಒಬ್ಬರೇ ಇರುತ್ತಿದ್ದ ಮಠದಲ್ಲಿರುವ ಬೆಡ್‌ರೂಂಗೆ ರಾತ್ರಿ ಸಮಯದಲ್ಲಿ ಪುಸಲಾಯಿಸಿ ಕರೆಸಿಕೊಂಡು ಸದರಿ ಸಾಕ್ಷಿದಾರರು ಅಪ್ರಾಪ್ತಳೆಂದು ತಿಳಿದಿದ್ದರೂ ಸಹ ಆಕೆಯ ಮನಸ್ಸಿಗೆ ವಿರುದ್ಧವಾಗಿ ಚಾಕೋಲೆಟ್ ರೂಪದಲ್ಲಿ ಮತ್ತುಬರುವ ವಸ್ತುವನ್ನು ತಿನ್ನಿಸಿ ಅವಳು ಅರಿವು ಕಳೆದುಕೊಂಡ ನಂತರ ಅವಳ ಮೇಲೆ ಲೈಂಗಿಕ ಬಲಾತ್ಕಾರವೆಸಗಿ ತಮ್ಮ ದೈಹಿಕ ಆಸೆಯನ್ನು ತೀರಿಸಿಕೊಂಡಿದ್ದಾರೆ. ಅವಳು ಎಚ್ಚರವಾದ ನಂತರ ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಬೆದರಿಸಿದ ಅಪರಾಧಗಳನ್ನು ಎಸಗಿದ್ದಾರೆ. ಸದರಿ 1ನೇ ಆಪಾದಿತರು ಮುರುಘಾ ಮಠದ ಪೀಠಾಧ್ಯಕ್ಷರಾಗಿ ತನ್ನ ಪೋಷಣೆಯಲ್ಲಿದ್ದ ಸಾಕ್ಷಿ-೩ ಅವರನ್ನು ಕರೆಯಿಸಿಕೊಂಡು ಲೈಂಗಿಕವಾಗಿ ಹಲವಾರು ಬಾರಿ ಬಳಸಿಕೊಂಡು ಧಾರ್ಮಿಕ ಕೇಂದ್ರವನ್ನು ದುರುಪಯೋಗಪಡಿಸಿಕೊಂಡಿದ್ದರಿಂದ ಲೈಂಗಿಕ ದೌರ್ಜನ್ಯದ ಸಾಕ್ಷಿಗಳನ್ನು ನಾಶಪಡಿಸಿ ಅಪರಾಧವೆಸಗಿದ್ದರಿಂದ, ಕಲಂ: 376(2)(), 376(DA), 376(3), 201, 202 506 ರೆ.ವಿ. 34 & 37 ಐಪಿಸಿ ಕಲಂ: 17. 5(ಎಲ್‌), 6 ಪೋಕ್ಸೋ ಕಾಯ್ದೆ 2012 ಮತ್ತು ಮತ್ತು Sec 3(f) & Sec 7 of Religious Institution Prevention of Misuse Act 1988 and Set 75 of The Juvenile Justice (Care and Protection of Children) Act 2015 ಅಡಿಯಲ್ಲಿ ಆರೋಪವನ್ನು ದಾಖಲಿಸಲಾಗಿದೆ.

2ನೇ ಆಪಾದಿತರು ೧ನೇ ಆಪಾದಿತರ ಅಧೀನದಲ್ಲಿರುವ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್ ಆಗಿ ಸುಮಾರು 06 ವರ್ಷಗಳಿಂದ ಕೆಲಸ ಮಾಡುತ್ತಿರುತ್ತಾರೆ. ಸದರಿ ವಸತಿ ನಿಲಯದಲ್ಲಿ ವಾಸವಾಗಿರುವ ಬಾಲಕಿ ಹಾಗೂ ಹೆಣ್ಣುಮಕ್ಕಳನ್ನು ಪೋಷಣೆ ಮಾಡುವುದು ಇವರ ಕರ್ತವ್ಯವಾಗಿರುತ್ತದೆ.

2021ರಲ್ಲಿ ಸದರಿ ವಸತಿ ನಿಲಯಕ್ಕೆ ದಾಖಲುಗೊಂಡ 3ನೇ ಸಾಕ್ಷಿದಾರರನ್ನು ೧ನೇ ಆಪಾದಿತರ ಸೂಚನೆ ಮೇರೆಗೆ ಪುಸಲಾಯಿಸಿ ಮಠದಲ್ಲಿರುವ 1ನೇ ಆಪಾದಿತರು ಒಬ್ಬರೇ ಇರುವ ಬೆಡ್‌ರೂಂಗೆ 2021ರಲ್ಲಿ ಒಂದು ಬಾರಿ, 20೨2ರಲ್ಲಿ ಇನ್ನೊಂದು ಬಾರಿ ೩ನೇ ಸಾಕ್ಷಿದಾರರು ಅಪ್ರಾಪ್ತಳು ಎಂದು ತಿಳಿದಿದರೂ ಸಹ ೧ನೇ ಆಪಾದಿತರು ಅವರ ಅಕ್ರಮ ಲೈಂಗಿಕ ಚಟುವಟಿಕೆಗೆ ಬಳಸಿಕೊಳ್ಳಲು ಪುಸಲಾಯಿಸಿ ರಾತ್ರಿ ಸಮಯದಲ್ಲಿ ಕಳುಹಿಸಿಕೊಟ್ಟಿರುತ್ತಾರೆ. ಇದಲ್ಲದೇ 3ನೇ ಸಾಕ್ಷಿದಾರರು ಅಪ್ರಾಪ್ತಳೆಂದು ತಿಳಿದಿದ್ದರೂ ಸಹ 2021 ರಿಂದ 2022 ರವರೆಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಸ್ಕೇಲ್‌ನಿಂದ ಹೊಡೆದು ಮಾನಸಿಕ ಮತ್ತು ದೈಹಿಕವಾಗಿ ಹಲ್ಲೆ ಮಾಡಿ ಅಪರಾಧವೆಸಗಿರುತ್ತಾರೆ ಅಂತ ಕಲಂ: 376DA, 372, 366, 323, 504 ರೆ.ವಿ. 34 ಮತ್ತು 37 ಐಪಿಸಿ ಮತ್ತು ಕಲಂ: 6 ರೆ.ವಿ. 17 ಪೋಕ್ಸೋ ಕಾಯ್ದೆ 2012 ಮತ್ತು Sec 75 & 77 of The Juvenile Justice (Care and Protection of Children) Act 2015 ಅಡಿಯಲ್ಲಿ ಆರೋಪಣೆ ಹೊರಿಸಲಾಗಿದೆ” ಎಂದು ಡಿವೈಎಸ್‌ಪಿ ಸಹಿ ಮಾಡಿ ಲಿಖಿತ ಪ್ರತಿಯನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ | Murugha seer case | ಮುರುಘಾ ಮಠಕ್ಕೆ ಆಡಳಿತಾಧಿಕಾರಿ ಬಗ್ಗೆ ವರದಿ ನಂತರ ತೀರ್ಮಾನ: ಸಿಎಂ ಬೊಮ್ಮಾಯಿ

Exit mobile version