Site icon Vistara News

Murugha seer | ಮುರುಘಾಶ್ರೀಗಳ ದೌರ್ಜನ್ಯ ಅಕ್ಷಮ್ಯ, ತಕ್ಕ ಶಿಕ್ಷೆಯಾಗಲಿ: ಬಿ.ಎಸ್‌. ಯಡಿಯೂರಪ್ಪ ಆಕ್ರೋಶ

muruga

ಉಡುಪಿ: ಚಿತ್ರದುರ್ಗ ಮುರುಘಾ ಮಠದ ಮುರುಘಾ ಶರಣರಿಂದ (Murugha seer) ನಡೆದಿರುವ ಲೈಂಗಿಕ ಕಿರುಕುಳವು ಅಕ್ಷಮ್ಯ ಅಪರಾಧ. ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಈಗ ಜಗತ್ತಿಗೇ ಗೊತ್ತಿರುವ ಸಂಗತಿಯಾಗಿದೆ. ಇದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಅವರ ತಪ್ಪಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಬಿಎಸ್‌ವೈ ಆಗ್ರಹಿಸಿದರು.

ಚಾರ್ಜ್‌ಶೀಟ್‌ನಲ್ಲೇನಿತ್ತು?
ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಲಾದ ೬೯೪ ಪುಟಗಳ ಚಾರ್ಜ್‌ಶೀಟ್‌ನಲ್ಲಿ ಹಲವಾರು ಆತಂಕಕಾರಿ ಮಾಹಿತಿಗಳು ಬಯಲಾಗಿದೆ. ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಸ್‌ಪಿ ಅನಿಲ್‌ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಸಲ್ಲಿಕೆಯಾಗಿರುವ ತಲಾ ೩೪೭ ಪುಟಗಳ ಎರಡು ಸೆಟ್‌ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರುವ ಮಾಹಿತಿ ಬಗ್ಗೆ ಈಗ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮತ್ತಿನ ಔಷಧ ಬೆರೆಸಿದ ಸೇಬು ತಿನ್ನಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಒಂದು ಕಡೆಯಾದರೆ, ಒಬ್ಬ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆಯನ್ನೇ ಮಾಡಲಾಗಿದೆ ಎನ್ನುವುದು ಇನ್ನೊಂದು ಗಂಭೀರ ಆರೋಪ ಸಹ ಮುರುಘಾ ಶರಣರ ಮೇಲೆ ಕೇಳಿಬಂದಿದೆ.

ಇದನ್ನೂ ಓದಿ | ಮುರುಘಾ ಶರಣರ ಕುರಿತ ಹೇಳಿಕೆ ಸೂಕ್ತ: ಬಿ.ಎಸ್‌.ಪರಮಶಿವಯ್ಯ ಸಮರ್ಥನೆ

ಪೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಮುರುಘಾಶ್ರೀಗಳು ಮೊದಲ ಆರೋಪಿಯಾಗಿದ್ದರೆ, ವಾರ್ಡನ್‌ ರಶ್ಮಿ ಅವರು ಎರಡನೇ ಆರೋಪಿಯಾಗಿದ್ದಾರೆ. ಮಠದ ಕಿರಿಯ ಸ್ವಾಮೀಜಿ ಅವರು ಮೂರನೇ ಆರೋಪಿ. ಮಠದ ಕಾರ್ಯದರ್ಶಿ ಪರಮಶಿವಯ್ಯ ಅವರು ನಾಲ್ಕನೇ ಆರೋಪಿಯಾಗಿದ್ದಾರೆ ವಕೀಲ ಗಂಗಾಧರಯ್ಯ ಅವರು ಐದನೇ ಆರೋಪಿ. ಆದರೆ, ಮಠದ ಕಿರಿಯ ಸ್ವಾಮೀಜಿ ಮತ್ತು ವಕೀಲ ಗಂಗಾಧರಯ್ಯ ಅವರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

ಲೈಂಗಿಕ ಕಿರುಕುಳಕ್ಕೆ ಹಲವು ಬಗೆ
ಹಾಸ್ಟೆಲ್‌ನ ಬಾಲಕಿಯರ ಮೇಲೆ ಯಾವ ಯಾವ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿತ್ತು ಎನ್ನುವ ವಿಚಾರದಲ್ಲಿ ಹಲವು ರಹಸ್ಯಗಳು ಚಾರ್ಜ್‌ಶೀಟ್‌ ಮೂಲಕ ಬಯಲಿಗೆ ಬಂದಿವೆ.

ಲೇಡಿ ವಾರ್ಡನ್‌ ರಶ್ಮಿಯನ್ನು ಬಳಸಿಕೊಂಡು ಶ್ರೀಗಳು ಮಕ್ಕಳನ್ನು ಕರೆಸಿಕೊಳ್ಳುತ್ತಿದ್ದರು ಎನ್ನುವುದು ಅತ್ಯಂತ ಗಂಭೀರ ಆರೋಪ. ರಶ್ಮಿ ಅವರು ಶ್ರೀಗಳಿಗೆ ಬೇಕೆನಿಸಿದ ಸಂದರ್ಭದಲ್ಲಿ ಮಕ್ಕಳನ್ನು ಕಳುಹಿಸಿಕೊಡುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

ಮಕ್ಕಳನ್ನು ಕರೆಸಿಕೊಳ್ಳುವ ಶ್ರೀಗಳು ಅವರಿಗೆ ಮತ್ತು ಬರುವ ಔಷಧ ಬೆರೆಸಿದ ಸೇಬು ನೀಡಿ, ಅವರನ್ನು ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಶ್ರೀಗಳು ತಮ್ಮ ಕಚೇರಿಯಲ್ಲಿ, ಬೆಡ್‌ ರೂಂ ಮಾತ್ರವಲ್ಲ ಬಾತ್‌ರೂಂನಲ್ಲಿ ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | 2ನೇ ಪೋಕ್ಸೋ ಪ್ರಕರಣದಲ್ಲಿ ಸ್ವಾಮೀಜಿಗೆ ಪೊಲೀಸ್ ಕಸ್ಟಡಿ ಅಂತ್ಯ; ನ.8 ರವರೆಗೆ ನ್ಯಾಯಾಂಗ ಬಂಧನ

ಸ್ವಾಮೀಜಿಯ ಈ ಕಾಮುಕ ಕೃತ್ಯವನ್ನು ವಿರೋಧಿಸಿದರೆ ಜೀವ ಬೆದರಿಕೆ ಒಡ್ಡಲಾಗುತ್ತಿತ್ತು. ಒಂದು ವೇಳೆ ಒಪ್ಪದಿದ್ದರೆ ಲೇಡಿ ವಾರ್ಡನ್ ರಿಂದ ಶಿಕ್ಷೆ ಕೊಡಿಸಲಾಗುತ್ತಿತ್ತು ಎಂದು ತಿಳಿಸಲಾಗಿದೆ.

೧೦ಕ್ಕೂ ಹೆಚ್ಚು ಮಕ್ಕಳು ಬಲಿಪಶುಗಳು, ಒಬ್ಬಳ ಕೊಲೆ!
ಚಾರ್ಜ್‌ಶೀಟ್‌ನಲ್ಲಿ ಇನ್ನೂ ಹಲವು ಗಂಭೀರ ವಿಚಾರಗಳಿವೆ. ಶ್ರೀಗಳು ಹತ್ತಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಅದರಲ್ಲಿ ಹೇಳಲಾಗಿದೆ. ಅದಕ್ಕಿಂತಲೂ ಗಂಭೀರವಾದ ವಿಚಾರವೆಂದರೆ, ಕೆಲವು ವರ್ಷದ ಹಿಂದೆ ಒಬ್ಬ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಯನ್ನೂ ಮಾಡಲಾಗಿದೆ!

ಆಂಧ್ರದ ಬಾಲಕಿಯೊಬ್ಬಳು ಮಠದ ಹಾಸ್ಟೆಲ್‌ನಲ್ಲಿದ್ದಳು. ಆಂಧ್ರ ಪ್ರದೇಶಕ್ಕೆ ತೆರಳುವಾಗ ಆಕೆ ಅಪಘಾತದಲ್ಲಿ ಮೃತಪಟ್ಟಿದ್ದಳು. ಆಕೆಯ ಮೇಲೆ ಅತ್ಯಾಚಾರ ನಡೆದು ಬಳಿಕ ಕೊಲೆ ಮಾಡಲಾಗಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಸಂತ್ರಸ್ತ ಬಾಲಕಿಯರ ಹೇಳಿಕೆ ವೇಳೆ ಈ ವಿಷಯ ಬಯಲಾಗಿದ್ದು, ಪೊಲೀಸರು ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಕೀಲ ಶ್ರೀನಿವಾಸ್‌ ಇನ್ನಷ್ಟು ಸ್ಫೋಟಕ ಮಾಹಿತಿ
ಈ ನಡುವೆ, ಬಾಲಕಿಯರ ಪರ ವಕೀಲ ಶ್ರೀನಿವಾಸ್‌ ಇನ್ನೂ ಕೆಲವು ಸ್ಫೋಟಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆರೋಪಿ ಮುರುಘಾಶ್ರೀಗಳು ಹಣ್ಣು, ಚಾಕೊಲೇಟ್‌ಗಳಲ್ಲಿ ಹಾಗೂ ಮತ್ತು ಬರುವ ಅಂಶಗಳನ್ನು ಸೇರಿಸಿ ಪ್ರಜ್ಞೆ ತಪ್ಪಿಸುತ್ತಿದ್ದರು. ಎಚ್ಚರವಾದಾಗ ವಿವಸ್ತ್ರವಾಗಿರುವುದು ಕಂಡುಬರುತ್ತಿತ್ತು. ಮಕ್ಕಳು ಬೇಡ ಬೇಡ ಎಂದರೂ ಆರೋಪಿಗಳು ಹಣ್ಣು ತಿನ್ನಿಸುತ್ತಿದ್ದರು. ಪದೇ ಪದೆ ಈ ರೀತಿ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಶ್ರೀಗಳು ಸ್ನಾನ ಮಾಡುವ ವೇಳೆ ಮೈ ಉಜ್ಜಿಕೊಳ್ಳಲು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಅವರಿಂದ ಮಸಾಜ್‌ ಕೂಡಾ ಮಾಡಿಸಿಕೊಳ್ಳುತ್ತಿದ್ದು. ಹೇಳಿದ ಹಾಗೆ ಕೇಳದೆ ಹೋದರೆ ಹೊಡೆಯುತ್ತಿದ್ದರು ಎಂದು ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ತಾಂತ್ರಿಕ ಸಾಕ್ಷಿ, ಮೆಡಿಕಲ್ ಸಾಕ್ಷಿಗಳನ್ನು ನೀಡಲಾಗಿದೆ. ಮತ್ತಷ್ಟು ಮಕ್ಕಳು ದೂರು ನೀಡಿದರೆ ಮುರುಘಾಶ್ರೀಗೆ ಕಂಟಕವಾಗಲಿದೆ ಎಂದು ಮಕ್ಕಳ ಪರ ವಕೀಲ ಶ್ರೀನಿವಾಸ್ ಸೋಮವಾರ (ನ.೭) ಹೇಳಿಕೆ ನೀಡಿದ್ದರು.

ಕಾಟಾಚಾರದ ಕೌನ್ಸೆಲಿಂಗ್‌
ಈ ನಡುವೆ, ಚಿತ್ರದುರ್ಗದ ಸಿಡಬ್ಲ್ಯುಸಿ ಅಧಿಕಾರಿಗಳು ಮಕ್ಕಳ ಕೌನ್ಸೆಲಿಂಗ್‌ ಅನ್ನು ಸರಿಯಾಗಿ ಮಾಡಿಲ್ಲ. ಒಂದೇ ದಿನ‌ 80 ಮಕ್ಕಳನ್ನು ಕಾಟಾಚಾರಕ್ಕೆಂಬಂತೆ ಕೌನ್ಸೆಲಿಂಗ್‌ ಮಾಡಿದ್ದಾರೆ. ಮಕ್ಕಳ ಕೌನ್ಸೆಲಿಂಗ್‌ ಅನ್ನು ಸರಿಯಾಗಿ ಮಾಡಿದರೆ ಮತ್ತಷ್ಟು ಪ್ರಕರಣ ಹೊರಬೀಳಲಿದೆ. ಆದರೆ, ಆ ಕೆಲಸವನ್ನು ಚಿತ್ರದುರ್ಗದ ಅಧಿಕಾರಿಗಳು ಹಾಗೂ ಪೊಲೀಸರು ಮಾಡಿಲ್ಲ ಎಂದು ಶ್ರೀನಿವಾಸ್‌ ಆರೋಪ ಮಾಡಿದ್ದರು.

ಒಂದು ವೇಳೆ ಪ್ರಕರಣದ ತನಿಖೆ ಸರಿಯಾದ ಮಾದರಿಯಲ್ಲಿ ನಡೆದರೆ, ಪೊಕ್ಸೋ ಪ್ರಕರಣದಲ್ಲಿ ಕನಿಷ್ಠ 20 ವರ್ಷ ಜೈಲು ಶಿಕ್ಷೆ ಆಗಲಿದೆ. ಗರಿಷ್ಠ ಆರೋಪ ಸಾಬೀತಾದರೆ ಮರಣದಂಡನೆ ಕೂಡಾ ವಿಧಿಸಬಹುದು ಎಂದಿದ್ದಾರೆ ವಕೀಲ ಶ್ರೀನಿವಾಸ್‌.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | 2ನೇ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಮುರುಘಾ ಶರಣರಿಗೆ ಪುರುಷತ್ವ ಪರೀಕ್ಷೆ; ಶ್ರೀಮಠದಲ್ಲಿ ಸ್ಥಳ ಮಹಜರು

Exit mobile version