Site icon Vistara News

Shivamogga attack | ಸಾಗರದಲ್ಲಿ ಬಜರಂಗ ದಳ ಕಾರ್ಯಕರ್ತನ ಕೊಲೆ ಯತ್ನ: ಮಚ್ಚಿನಿಂದ ಕೊಚ್ಚಲು ಪ್ಲ್ಯಾನ್‌

Shivamogga sunil

ಶಿವಮೊಗ್ಗ: ಶಿವಮೊಗ್ಗದಲ್ಲಿ ಭಾನುವಾರ ಅದ್ಧೂರಿಯಾಗಿ ನಡೆದಿದ್ದ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಜರಂಗ ದಳ ಕಾರ್ಯಕರ್ತರೊಬ್ಬರನ್ನು ಕೊಚ್ಚಿ ಕೊಲೆ ಮಾಡಲು (Shivamogga attack) ಯತ್ನಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರದ ಬಿ ಎಚ್ ರಸ್ತೆಯಲ್ಲಿ ಸೋಮವಾರ ಮುಂಜಾನೆ ಘಟನೆ ನಡೆದಿದ್ದು. ಸುನಿಲ್‌ ಎಂಬ ಬಜರಂಗ ದಳ ಕಾರ್ಯಕರ್ತನ ಕೊಲೆ ಯತ್ನ ನಡೆದಿದೆ. ಸಮೀರ್(24) ಎಂಬಾತ ಈ ಕೃತ್ಯ ನಡೆಸಿದ್ದಾನೆ.

ಸಿಸಿ ಟಿವಿಯಲ್ಲಿ ದಾಖಲಾದ ಕೊಲೆ ಯತ್ನ

ಸುನಿಲ್‌ ಮತ್ತು ಸಮೀರ್‌ ಇಬ್ಬರೂ ಸಾಗರದ ನೆಹರು ನಗರ ನಿವಾಸಿಗಳು. ಸುನಿಲ್‌ ಬಜರಂಗ ದಳ ಸಮಾವೇಶದಲ್ಲಿ ಭಾಗಿಯಾಗಿ ಮರಳಿ ಬರುವುದನ್ನೇ ಕಾದು ಕುಳಿತಿದ್ದ ಸಮೀರ್‌ ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಪ್ರವೀಣ್‌ ನೆಟ್ಟಾರು ಮಾದರಿಯಲ್ಲಿ ಕೊಲೆಗೆ ಸ್ಕೆಚ್‌
ಸಮೀರ್‌ ಜ್ಯುಪಿಟರ್‌ ಬೈಕ್‌ನಲ್ಲಿ ಬಂದು ಸುನಿಲ್‌ ಮೇಲೆ ಹಲ್ಲೆಗೆ ಮುಂದಾಗಿದ್ದ. ಮಚ್ಚಿನಿಂದ ಹೊಡೆದು ಹಲ್ಲೆ ಮಾಡಲು ಮುಂದಾಗಿದ್ದು, ಸುನಿಲ್‌ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ರೀತಿಯಲ್ಲೇ ಕೊಲೆ ಮಾಡಲು ದುಷ್ಕರ್ಮಿ ಸಂಚು ಹಾಕಿದ್ದಾನೆ ಎಂದು ಹೇಳಲಾಗಿದೆ. ಕೊಲೆ ಯತ್ನದ ಘಟನೆ ಹೋಟೆಲ್‌ ಒಂದರ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಸಿ ಟಿವಿ ಫೂಟೇಜ್‌ನಲ್ಲಿ ಏನಿದೆ?
ಸುನಿಲ್‌ ಒಂದು ಕಟ್ಟಡದ ಮುಂದೆ ದ್ವಿಚಕ್ರ ವಾಹನದಲ್ಲಿ ಬರುತ್ತಾರೆ. ಆಗ ಅಲ್ಲೇ ಇನ್ನೊಂದು ದ್ವಿಚಕ್ರ ವಾಹನದಲ್ಲಿ ಕಾದು ಕುಳಿತಿದ್ದ ಸಮೀರ್‌ ಮಚ್ಚು ಹಿಡಿದುಕೊಂಡು ದಾಳಿಗೆ ಮುಂದಾಗುತ್ತಾನೆ. ಆಗ ಅಪಾಯವನ್ನು ಅರಿತ ಸುನಿಲ್‌ ವೇಗವಾಗಿ ದ್ವಿಚಕ್ರ ವಾಹನ ಓಡಿಸಿ ತಪ್ಪಿಸಿಕೊಳ್ಳುತ್ತಾನೆ. ಮುಂದೆ ಸಮೀರ್‌ ಕೂಡಾ ಅದೇ ದಾರಿಯಲ್ಲಿ ಸಾಗುತ್ತಾನೆ.

ಶಿವಮೊಗ್ಗವನ್ನು ಮತ್ತೊಮ್ಮೆ ಕೋಮುದಳ್ಳುರಿಗೆ ತಳ್ಳುವ ಯತ್ನದ ಭಾಗವಾಗಿ ಈ ಕೃತ್ಯ ನಡೆಸಲಾಗಿದೆ ಎಂದು ಆಪಾದಿಸಲಾಗಿದ್ದು, ಈಗ ಬಿಗಿ ಭದ್ರತೆಯನ್ನು ವ್ಯವಸ್ಥೆ ಮಾಡಲಾಗಿದೆ.

Exit mobile version