Site icon Vistara News

Attack on church | ಪಿರಿಯಾಪಟ್ಟಣದ ಚರ್ಚ್‌ ಮೇಲೆ ದಾಳಿ, ಬಾಲ ಯೇಸು ಮೂರ್ತಿ ಧ್ವಂಸ; ದುಷ್ಕರ್ಮಿಗಳಿಗಾಗಿ ತೀವ್ರ ಶೋಧ

pirayapattana church

ಮೈಸೂರು: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂಭ್ರಮಾಚರಣೆ ನಡುವೆಯೇ ಪಿರಿಯಾಪಟ್ಟಣದ ಸಂತ ಮೇರಿ ಚರ್ಚ್‌ ಮೇಲೆ ದುಷ್ಕರ್ಮಿಗಳು ದಾಳಿ (Attack on church) ನಡೆಸಿದ್ದು, ಬಾಲ ಯೇಸುವಿನ ಮೂರ್ತಿ ಹಾಗೂ ಹಾಗೂ ತೊಟ್ಟಿಲನ್ನು ನಾಶಪಡಿಸಿರುವ ಘಟನೆಗೆ ಸಂಬಂಧಪಟ್ಟಂತೆ ಸಿಸಿಟಿವಿ ಫೂಟೇಜ್‌ ಪರಿಶೀಲಿಸುತ್ತಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಮಂಗಳವಾರ (ಡಿ.೨೭) ಸಂಜೆ ವೇಳೆಗೆ ದಾಳಿ ನಡೆದಿದ್ದು, ಬುಧವಾರ (ಡಿ. ೨೮) ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಈಗಾಗಲೇ ಮುಂದಾಗಲಾಗಿದ್ದು, ಶೀಘ್ರದಲ್ಲಿಯೇ ಬಂಧಿಸುವುದಾಗಿ ತಿಳಿಸಿದ್ದಾರೆ.

ಏನಿದು ಪ್ರಕರಣ?
ಪಿರಿಯಾಪಟ್ಟಣದ ಸಂತ ಮೇರಿ ಚರ್ಚ್‌ ಫಾದರ್‌ ಜಾನ್ ಪೌಲ್ ಅವರು ಮಂಗಳವಾರ ಮೈಸೂರಿಗೆ ತೆರಳಿದ್ದರು. ಈ ವೇಳೆ ಕೆಲವು ದುಷ್ಕರ್ಮಿಗಳು ಚರ್ಚ್‌ ಮೇಲೆ ದಾಳಿ ನಡೆಸಿದ್ದಲ್ಲದೆ, ಒಳಗಿದ್ದ ಬಾಲ ಯೇಸುವಿನ ಮೂರ್ತಿ, ತೊಟ್ಟಿಲನ್ನು ಒಡೆದು ಹಾಕಿದ್ದಾರೆ.

ಇದನ್ನೂ ಓದಿ | Siddheshwar Swamiji | ಭಕ್ತರಿಗೆ ದರ್ಶನ ನೀಡಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ; ಆರೋಗ್ಯದ ಕುರಿತ ವದಂತಿಗಳಿಗೆ ತೆರೆ

ಕ್ರಿಸ್‌ಮಸ್‌ಗಾಗಿ ಚರ್ಚ್ ಒಳಗೆ ಅಲಂಕಾರ ಮಾಡಲಾಗಿತ್ತು. ಜತೆಗೆ ಟೇಬಲ್ ಮೇಲೆ ಬುಟ್ಟಿಯಲ್ಲಿ ಬಾಲ ಯೇಸುವಿನ ಮೂರ್ತಿ ಹಾಗೂ ತೊಟ್ಟಿಲನ್ನು ಇಡಲಾಗಿತ್ತು. ಚರ್ಚ್‌ನಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿ, ಬಾಲ ಯೇಸುವಿನ‌ ಮೂರ್ತಿಯನ್ನು ಪುಡಿ ಪುಡಿ ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿದ್ದು, ಚರ್ಚ್‌ ಸುತ್ತಮುತ್ತ ಸೇರಿದಂತೆ ಹಲವು ಕಡೆ ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆ ಹಾಗೂ ಸ್ಥಳೀಯರನ್ನು ವಿಚಾರಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆನ್ನಲಾಗಿದೆ.

ಇದನ್ನೂ ಓದಿ | Bande seer suicide | ಬಂಡೆ ಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಕೀಲ ಮಹದೇವಯ್ಯಗೆ ಜಾಮೀನು

Exit mobile version