ಮೈಸೂರು: ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಧರ್ಮ ದಂಗಲ್ ಶುರುವಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ರದ್ದು ಪ್ರಸ್ತಾಪದ ಬೆನ್ನಲ್ಲೇ ಕೋಮು ಸೌಹಾರ್ದತೆ ಕಾಪಾಡುವುದು ಸವಾಲಾಗಿ ಪರಿಣಮಿಸಿದೆ. ಈ ಹೊತ್ತಿನಲ್ಲಿ ಮೈಸೂರಿನ ನಂಜನಗೂಡಿನಲ್ಲಿ ಗಲಾಟೆ ನಡೆದಿದ್ದು, ಸೂಕ್ಷ್ಮ ಸ್ವರೂಪ ಪಡೆದುಕೊಳ್ಳುತ್ತಿದೆ. ನಂಜನಗೂಡು ಪಟ್ಟಣದ ನೀಲಕಂಠನಗರದಲ್ಲಿ ಅನ್ಯಕೋಮಿನ ಯುವಕರ ಗುಂಪು, ಹಿಂದು ಯುವಕನಿಗೆ ಚಾಕು ಇರಿದಿರುವ ಘಟನೆ ಭಾನುವಾರ ನಡೆದಿದೆ. ಪ್ರಸಾದ್ (22) ಚಾಕು ಇರಿತಕ್ಕೊಳಗಾದವರು. ಇಲ್ಲಿ ಜೈ ಶ್ರೀರಾಮ್ ಎಂಬ ಘೋಷಣೆ ಬಗ್ಗೆ ಅಪಸ್ವರ ಕೇಳಿಬಂದಿದೆ ಎನ್ನಲಾಗಿದ್ದು, ಅನ್ಯ ಕೋಮಿನ ಯುವಕರು ಈಗ ನಮ್ಮ ಸರ್ಕಾರ ಇದೆ. ನೀವು ಹೀಗೆ ಹೊರಗೆಲ್ಲ ಯಾವ ಆಚರಣೆಯನ್ನೂ ಮಾಡಕೂಡದು ಎಂದು ಅವಾಜ್ ಹಾಕಿರುವ ಆರೋಪವೂ ಕೇಳಿಬಂದಿದೆ.
ನೀಲಕಂಠನಗರದ ಯುವಕರ ಗುಂಪೊಂದು ಅಂಗಡಿ ಬಳಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಿಡಿಗೇಡಿಗಳ ಗುಂಪು, ಇದು ನಮ್ಮ ಸರ್ಕಾರ. ನೀವು ಹಿಂದುಗಳು ಏನೂ ಮಾಡಲು ಆಗುವುದಿಲ್ಲ ಎಂದು ತಗಾದೆ ತೆಗೆದಿದ್ದಾರೆ. ಇನ್ಮುಂದೆ ನೀವೆಲ್ಲ ರೋಡ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸುವಂತಿಲ್ಲ. ಎಲ್ಲ ನಿಮ್ಮ ಮನೆಗಳಲ್ಲಿ ಆಚರಿಸಬೇಕು ಅಷ್ಟೇ ಎಂದು ಅವಾಜ್ ಹಾಕಿದ್ದಾರೆ. ಈ ವಿಚಾರವಾಗಿ ಎರಡು ಗುಂಪಿನ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಅಲ್ಲಿಗೆ ಬಜ್ಜಿ ತಿನ್ನಲು ಬಂದ ಪ್ರಸಾದ್‌ಗೆ, ಇಲ್ಲು ಅಲಿಯಾಸ್ ಇಸ್ಮಾಯಿಲ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ.
ಚಾಕು ಇರಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಪ್ರಸಾದ್ ಘಟನೆ ಸಂಬಂಧ ಮಾತನಾಡಿದ್ದು, ಭಾನುವಾರ ರಾತ್ರಿ ಯಾರದ್ದೋ ಹುಟ್ಟು ಹಬ್ಬದ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ಏಳೆಂಟು ಜನರ ಗುಂಪು ಗಲಾಟೆ ಮಾಡುತ್ತಿತ್ತು. ಬಜ್ಜಿ ತಿನ್ನಲು ಹೋಗಿದ್ದ ನನ್ನನ್ನು ಎಳೆದುಕೊಂಡು ಹೊಡೆದರು. ಸಲ್ಮಾನ್ ಎಂಬಾತ ಕಬ್ಬಿಣದ ಹಿಡಿಯಿಂದ ಹಣೆಗೆ ಬಲವಾಗಿ ಹೊಡೆದ. ಇಸ್ಮಾಯಿಲ್ ಎಂಬಾತ ಚಾಕುವಿನಿಂದ ಇರಿದು ಬಿಟ್ಟ ಎಂದು ಘಟನೆಯನ್ನು ವಿವರಿಸಿದರು. ಗಲಾಟೆ ವೇಳೆ ಯಾರೋ ಭಾರತ್ ಮಾತಾಕಿ ಜೈ ಎಂದು ಕೂಗಿದರು, ಆದರೆ ನಾನು ಕೂಗಲಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ಜೈ ಶ್ರೀರಾಮ್ ಘೋಷಣೆಯನ್ನೂ ಕೂಗಲಾಗಿದೆ ಎಂದು ಹೇಳಲಾಗುತ್ತಿದೆ.
ಚಾಕು ಇರಿತಕ್ಕೊಳಗಾದ ಪ್ರಸಾದ್‌ಗೆ ನಂಜನಗೂಡು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಶೋಹೆಬ್, ಶಹೇನಸಾ, ಸಲ್ಮಾನ್, ಇಲ್ಲು ಹಾಗೂ ಜಾಫರ್ ವಿರುದ್ಧ ಎಫ್‌ಐಆರ್ ಹಾಕಲಾಗಿದೆ.
ಇದನ್ನೂ ಓದಿ: Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್‌ನಿಂದ ಬಡಿದು ಕೊಂದೇಬಿಟ್ಟರು ದುರುಳರು
ಏರಿಯಾದಲ್ಲಿ ಹವಾ ಮೆಂಟೇನ್ ಗೀಳು
ನಂಜನಗೂಡು ಗಲಾಟೆ ವಿಚಾರಕ್ಕೆ ಟ್ವಿಸ್ಟ್ ಸಿಕ್ಕಿದೆ. ಏರಿಯಾದಲ್ಲಿ ಹವಾ ಸೃಷ್ಟಿಸಲು ಆರೋಪಿಗಳು ಕತ್ತಿ, ತಲವಾರ್ ಹಿಡಿದು ಓಡಾಟ ನಡೆಸುತ್ತಿರುವುದು ತಿಳಿದು ಬಂದಿದೆ. ನೀಲಕಂಠನಗರ ಗಲಾಟೆ ಆರೋಪಿಗಳು ರೀಲ್ಸ್ ಮಾಡಿರುವ ವಿಡಿಯೊ ಕೂಡ ವೈರಲ್ ಆಗಿದೆ.