ಬೆಂಗಳೂರು: ಆನ್‌ಲೈನ್‌ನಲ್ಲಿ ಹಣ ಸುಲಿಗೆ ಮಾಡಲು ಸೈಬರ್ ಕಳ್ಳರು ಹೊಸ ತಂತ್ರವನ್ನು ಕಂಡುಕೊಂಡಿದ್ದಾರೆ. ಜನರಿಗೆ ವಾಟ್ಸ್‌ಆ್ಯಪ್‌ನಲ್ಲಿ ಅಶ್ಲೀಲ ವಿಡಿಯೊ ಕಾಲ್ ಮಾಡಿ, ನಂತರ ಫೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ (Digital Honey Trap) ಮಾಡಿ ಹಣ ಪೀಕುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರಿಗೆ ಅಶ್ಲೀಲ ವಿಡಿಯೊ ಕಾಲ್ ಮಾಡಿ, ಹಣ ಕೀಳಲು ಯತ್ನಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ವಾಟ್ಸ್ಆ್ಯಪ್‌ನಲ್ಲಿ ಅಶ್ಲೀಲ ವಿಡಿಯೊ ಕಾಲ್ ಮಾಡಿ ಡಿಜಿಟಲ್ ಹನಿಟ್ರ್ಯಾಪ್ (ಸೆಕ್ಸ್ ಟಾರ್ಷನ್) ಮಾಡಿದ ಬಗ್ಗೆ ಸಂಸದ ಸಿದ್ದೇಶ್ವರ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ತನಿಖೆಗೆ ಮುಂದಾಗಿದ್ದರಿಂದ ಖದೀಮರು ತಮ್ಮ ಸುಲಿಗೆ ತಂತ್ರವನ್ನು ಅಲ್ಲಿಗೇ ನಿಲ್ಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸಿದ್ದೇಶ್ವರ ಅವರಿಗೆ ರಾಜಸ್ಥಾನದಿಂದ ವಿಡಿಯೊ ಕಾಲ್ ಬಂದಿತ್ತೆಂದು ತಿಳಿದುಬಂದಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | Udupi Toilet Video : ಟಾಯ್ಲೆಟ್ಟಲ್ಲಿ ಹೆಣ್ಮಕ್ಕಳ ವಿಡಿಯೊ ಮಾಡಿದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ FIR
ಜಿ.ಎಂ. ಸಿದ್ದೇಶ್ವರ್ ಅವರು ಚಿಕಿತ್ಸೆಗಾಗಿ ಪತ್ನಿಯೊಂದಿಗೆ ಬೆಂಗಳೂರಿಗೆ ಆಗಮಿಸಿದ್ದು, ಖಾಸಗಿ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ಜು.20ರಂದು ರಾತ್ರಿ ಹೊಸ ನಂಬರ್‌ನಿಂದ ವಾಟ್ಸ್ಆ್ಯಪ್ ಸಂದೇಶ ಬಂದಿದೆ. ಅದರಲ್ಲಿ ‘ಹಾಯ್, ಹೌ ಆರ್ ಯೂ’ ಎಂದು ಬರೆಯಲಾಗಿತ್ತು. ಹೊಸ ನಂಬರ್‌ನಿಂದ ಮೆಸೇಜ್ ಬಂದಿದ್ದರಿಂದ ಮೊದಲಿಗೆ ಸಂಸದರು ಉತ್ತರಿಸಲು ಹೋಗಿಲ್ಲ.
ನಂತರ ಸ್ವಲ್ಪ ಹೊತ್ತಿಗೆ ಅದೇ ಸಂಖ್ಯೆಯಿಂದ ವಾಟ್ಸ್ಆ್ಯಪ್ ವಿಡಿಯೊ ಕಾಲ್ ಬಂದಿದೆ. ಕರೆ ಸ್ವೀಕರಿಸಿದ ಸಿದ್ದೇಶ್ವರ್ ಅವರ ಜತೆ ಮಹಿಳೆಯೊಬ್ಬರು ಹಿಂದಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಸಿದ್ದೇಶ್ವರ್ ಅವರು, ಯಾರು ನೀವು, ಏನು ವಿಷಯ ಎಂದು ಕೇಳುವಷ್ಟರಲ್ಲೇ ಆ ಮಹಿಳೆಯು ತನ್ನ ಖಾಸಗಿ ಭಾಗಗಳನ್ನು ತೋರಿಸಲು ಆರಂಭಿಸಿದ್ದು, ಗಾಬರಿಗೊಂಡ ಸಂಸದರು ವಾಟ್ಸ್ಆ್ಯಪ್ ಕಾಲ್ ಅನ್ನು ಕಟ್ ಮಾಡಿದ್ದಾರೆ. ಅದಾದ ನಂತರ ಮತ್ತೊಮ್ಮೆ ಕಾಲ್ ಬಂದಾಗ ಸಂಸದರ ಪತ್ನಿ ಮಾತನಾಡಿದ್ದು, ಆಗಲೂ ಅದೇ ಪುನರಾವರ್ತನೆಯಾಗಿದೆ.
ಇದನ್ನೂ ಓದಿ | Dating App: ಡೇಟಿಂಗ್ ಆ್ಯಪ್ ಯುವಕರ ಭೇಟಿಗೂ ಮುನ್ನ ಎಚ್ಚರ; ಹೋಟೆಲ್‌ಗೆ ಕರೆಸಿ ಯುವತಿಯನ್ನು ರೇಪ್ ಮಾಡಿದ ದುಷ್ಟ
ಇದಾದ ಬಳಿಕ ಸಿದ್ದೇಶ್ವರ ಅವರಿಗೆ ವಿಡಿಯೊ ಕಾಲ್‌ನ ರೆಕಾರ್ಡಿಂಗ್‌ಗಳನ್ನು ಮಹಿಳೆಯು ಕಳುಹಿಸಿದ್ದು, ನೀವು ನನ್ನ ಜತೆಗೆ ವಿಡಿಯೊ ಕಾಲ್‌ನಲ್ಲಿ ಮಾತನಾಡಿದ್ದೀರಿ, ನನ್ನ ಖಾಸಗಿ ವಿಡಿಯೊಗಳನ್ನೂ ನೋಡಿದ್ದೀರಿ. ನಾವು ಕೇಳಿದಷ್ಟು ಹಣ ಕೊಡದೇ ಹೋದರೆ ಈ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾರೆ. ಹೀಗಾಗಿ ತಕ್ಷಣವೇ ಸಿದ್ದೇಶ್ವರ ಅವರು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ಅವರಿಗೆ ಫೋನ್ ಮಾಡಿ, ವಿಚಾರ ತಿಳಿಸಿದ್ದಾರೆ. ಎಸ್‌ಪಿ ಅವರು ಮರುದಿನ ಬೆಂಗಳೂರಿನಲ್ಲಿ ಡಿಸಿಪಿಯಾಗಿರುವ ಸಿ.ಆರ್. ಗೀತಾ ಅವರನ್ನು ಭೇಟಿಯಾಗಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.