Site icon Vistara News

Moral policing : ಪೊಲೀಸ್ ಸಿಬ್ಬಂದಿ ಪತ್ನಿ ಮೇಲೆ ಮಾನಭಂಗ ಯತ್ನ, ನೈತಿಕ ಪೊಲೀಸ್ ಗಿರಿ?

Moral policing

ಮಂಗಳೂರು: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿ ನೈತಿಕ ಪೊಲೀಸ್ ಗಿರಿ (Moral policing) ಮಾಡಿರುವ ಪ್ರಕರಣವೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ‌. ರೋಡ್ ಬಳಿ ನಡೆದಿದೆ. ‘ಮುಸ್ಲಿಂ-ಹಿಂದು ಹುಡುಗಿಯರನ್ನು ಎಲ್ಲಿ ಕರೆದು ಕೊಂಡು ಹೋಗಿದ್ದೀಯಾ?” ಎಂದು ಹಲ್ಲೆ ಮಾಡಿದ್ದಲ್ಲದೆ, ಆ ಪೊಲೀಸ್‌ ಸಿಬ್ಬಂದಿಯೊಬ್ಬರ (police personnel) ಪತ್ನಿಯ ಮೇಲೆ ಮಾನಭಂಗಕ್ಕೆ (molestation case) ಯತ್ನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಕುಟುಂಬದವರ ಮೇಲೆ ಮಾನಭಂಗಕ್ಕೆ ಯತ್ನಿಸಿ ಕರ್ತವ್ಯಕ್ಕೂ ಅಡ್ಡಿಪಡಿಸಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Karnataka Politics : ಸಚಿವರಿಂದ 6 ಪರ್ಸೆಂಟ್ ವರ್ಗಾವಣೆ‌, ಬಾಕಿಯದ್ದು ಸಿಎಂಗೆ: ಸತೀಶ್‌ ಜಾರಕಿಹೊಳಿ

ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ್ ಆಚಾರ್ಯ ಬಂಧಿತ ಆರೋಪಿಗಳಾಗಿದ್ದಾರೆ. ಬಂಟ್ವಾಳ ಡಿವೈಎಸ್‌ಪಿ ಕಚೇರಿಯ ಸಿಬ್ಬಂದಿ ಪ್ರಸ್ತುತ ಎನ್‌ಐಎ ವಿಭಾಗದಲ್ಲಿ (NIA Division) ಕರ್ತವ್ಯ ನಿರ್ವಹಿಸುತ್ತಿರುವ ಕುಮಾರ್ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜತೆಗೆ ಕುಟುಂಬದ ಮೇಲೆ ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ದೂರು ನೀಡಲಾಗಿದೆ.

ಕುಮಾರ್ ಎಂಬುವವರು ಎನ್‌ಐಎ ವಿಭಾಗದ ಒಂದು ಪ್ರಕರಣದ ಕರ್ತವ್ಯದಲ್ಲಿದ್ದರು. ಹೀಗಾಗಿ ಬಿಸಿರೋಡಿನಲ್ಲಿರುವ ಪೊಲೀಸ್ ವಸತಿಗೃಹದಲ್ಲಿ ತಂಗಿದ್ದರು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಇವರು ಎನ್‌ಐಎ ವಿಭಾಗದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಏನಿದು ಪ್ರಕರಣ?

ಜುಲೈ 27 ರಂದು ಪತ್ನಿ ಹಾಗೂ ಪತ್ನಿಯ ಅಕ್ಕನ ಜತೆ ಬಿ.ಸಿ. ರೋಡಿನ ವಸತಿ ಗೃಹದಲ್ಲಿ ಕುಮಾರ್ ತಂಗಿದ್ದರು. ರಾತ್ರಿ ವೇಳೆ ಊಟಕ್ಕೆ ಬಿ.ಸಿ. ರೋಡಿನ ಹೋಟೆಲ್ ಒಂದಕ್ಕೆ ಹೋಗಿ ವಾಪಸಾಗುತ್ತಿದ್ದರು. ಈ ವೇಳೆ ಇಬ್ಬರು ಯುವಕರು ಕುಮಾರ್ ಕುಟುಂಬವನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: Tahsildar Transfer : ಕಂದಾಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ; 46 ತಹಸೀಲ್ದಾರ್‌ ವರ್ಗಾವಣೆ

ಅಲ್ಲದೆ, ಇಬ್ಬರು ಆರೋಪಿಗಳು ಇವರಿಗೆ ಅವಾಚ್ಯವಾಗಿ ಬೈದಿದ್ದಾರೆ. ನೀನು ಮುಸ್ಲಿಂ ಮತ್ತು ಹಿಂದು ಹುಡುಗಿಯರನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದೀಯಾ? ಇಲ್ಲಿನ ವಿಚಾರ ನಿನಗೆ ಗೊತ್ತಲ್ಲವೇ ಎಂದು ಬೆದರಿಕೆ ಹಾಕಿದ್ದಾರೆ. ತಾನು ಪೊಲೀಸ್ ಎಂದು ಎಷ್ಟೇ ಹೇಳಿದರೂ ಲೆಕ್ಕಿಸದೆ ಹಲ್ಲೆಗೂ ಮುಂದಾಗಿದ್ದಾರೆ. ಈ ವೇಳೆ ಮೊಬೈಲ್‌ನಲ್ಲಿ ಕುಮಾರ್ ಪತ್ನಿಯ ಚಿತ್ರೀಕರಣ ಮಾಡಿ ಮಾನಭಂಗಕ್ಕೆ ಯತ್ನ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

Exit mobile version