Site icon Vistara News

Attempt to Murder: ಮಂಡ್ಯದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ, ಮಚ್ಚು ಬೀಸಿದವನಿಗೆ ಥಳಿಸಿದ ಸಾರ್ವಜನಿಕರು

ಮಂಡ್ಯ: ಹಳೇ ದ್ವೇಷದಿಂದ ವ್ಯಕ್ತಿಯೊಬ್ಬನ ಕಣ್ಣಿಗೆ ಖಾರದ ಪುಡಿ ಎರಚಿ, ಮಚ್ಚು ಬೀಸಿ ಕತ್ತು ಕೊಯ್ದು ಮಾರಣಾಂತಿಕ ಹಲ್ಲೆ (Attempt to Murder) ನಡೆಸಿರುವ ಘಟನೆ ಮದ್ದೂರು ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಎದುರಲ್ಲೇ ನಡೆದಿದೆ. ಹಲ್ಲೆ ಮಾಡುವುದನ್ನು ನೋಡಿ ಬೆಚ್ಚಿ ಬಿದ್ದ ಜನರು ಹಲ್ಲೆಗೆ ಒಳಗಾಗಿದ್ದ ವ್ಯಕ್ತಿಯನ್ನು ರಕ್ಷಿಸುವ ಸಂಬಂಧ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ಆರೋಪಿಯನ್ನು ಹಿಡಿದು ಥಳಿಸಿದ್ದಾರೆ.

ಮದ್ದೂರು ತಾಲೂಕಿನ ಮರಳಿಗ ಗ್ರಾಮದ ನಂದನ್ ಎಂಬಾತ ಅದೇ ಗ್ರಾಮದ ಚನ್ನರಾಜುವಿನ ಮೇಲೆ ಹಲ್ಲೆ ನಡೆಸಿದ್ದಾನೆ. ಕತ್ತಿನ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದ್ದು, ರಕ್ತಸ್ರಾವದಿಂದ ನರಳಾಡುತ್ತಿದ್ದವನ್ನು ಮದ್ದೂರು ತಾಲೂಕಾಸ್ಪತ್ರೆಗೆ ಸ್ಥಳೀಯರು ದಾಖಲು ಮಾಡಿದ್ದಾರೆ.

ಇಷ್ಟಕ್ಕೂ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದ್ದು ಮದುವೆ ವಿಚಾರ ಎಂದು ಹೇಳಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಚನ್ನರಾಜು ಅವರ ಮಗಳನ್ನು ನಂದನ್‌ ಬೇರೆಯವರೊಂದಿಗೆ ಮದುವೆ ಮಾಡಿಸಿದ ಕಾರಣಕ್ಕೆ ಇಬ್ಬರ ನಡುವೆ ದ್ವೇಷ ಮೂಡಿತ್ತು ಎಂದು ಹೇಳಲಾಗಿದೆ. ಎದುರು ಬದುರು ಮನೆಯವರಾಗಿದ್ದ ಇವರು ಆಗಾಗ್ಗೆ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಿದ್ದರು. ಇದೇ ವಿಚಾರದಲ್ಲಿ ಬೇಸತ್ತ ನಂದನ್ ಮಂಗಳವಾರ ತಾಲೂಕು ಕಚೇರಿ ಬಳಿ ಕಾದು ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.

ನಂದನ್‌ ಮಚ್ಚಿನಿಂದ ಹಲ್ಲೆ ಮಾಡುವಾಗ ಸಾರ್ವಜನಿಕರು ಬಿಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ವೇಳೆ ಅವರಿಗೆ ಮಚ್ಚು ತೋರಿಸಿ ಬೆದರಿಸಿದ್ದು, ಪರಾರಿಯಾಗಲು ಯತ್ನಿಸಿದ್ದಾನೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರೆಲ್ಲರೂ ಸೇರಿ ಕಲ್ಲು ತೂರಾಟ ಮಾಡಿದ್ದು, ಇದರಿಂದ ತಪ್ಪಿಸಿಕೊಳ್ಳಲು ಮುಂದಾದರೂ ನಂದನ್‌ ಸಿಕ್ಕಿಬಿದ್ದಿದ್ದಾನೆ. ಆಗ ಎಲ್ಲರೂ ಸೇರಿ ಆತನಿಗೆ ಥಳಿಸಿದ್ದಾರೆ. ಈ ಎಲ್ಲ ವಿಡಿಯೊ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಮದ್ದೂರು ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ಎಸ್‌ಪಿ ಯತೀಶ್ ಭೇಟಿ ನೀಡಿದ್ದು, ಹಲ್ಲೆಯ ವಿಚಾರವಾಗಿ ಮಾಹಿತಿ ತೆಗೆದುಕೊಂಡಿದ್ದಾರೆ. ಜತೆಗೆ ಸ್ಥಳದಲ್ಲಿದ್ದ ಪೊಲೀಸರಿಗೂ ತರಾಟೆಗೆ ತೆಗೆದುಕೊಂಡಿದ್ದಾರೆ. ತಾಲೂಕು ಕಚೇರಿಯಲ್ಲಿ ಹಲ್ಲೆಯಾಗುವವರೆಗೆ ಏನು ಮಾಡುತ್ತಿದ್ದಿರಿ ಎಂದು ಗರಂ ಆಗಿದ್ದಾರೆ.

ಇದನ್ನೂ ಓದಿ: Kiren Rijiju: ಗುಪ್ತಚರ ಇಲಾಖೆಗಳ ಸೂಕ್ಷ್ಮ ಮಾಹಿತಿ ಸುಪ್ರೀಂ ಕೋರ್ಟ್‌ನಿಂದ ಬಹಿರಂಗ, ಸಚಿವ ರಿಜಿಜು ಅಸಮಾಧಾನ

ಜಮೀನು ತಗಾದೆ

ಜಮೀನಿನಲ್ಲಿ ಪಾಲು ಬರಬೇಕು ಎಂದು ಆರೋಪಿ ನಂದನ್ ಕೋರ್ಟ್‌ ಮೆಟ್ಟಿಲೇರಿದ್ದು, ಈ ಸಂಬಂಧ ಮಂಗಳವಾರ ತಹಸೀಲ್ದಾರ್‌ ಕೋರ್ಟ್‌ ಇದ್ದ ಕಾರಣ ಕಚೇರಿಗೆ ಬಂದಿದ್ದಾಗಿ ಹಲ್ಲೆಗೊಳಗಾದ ಚನ್ನರಾಜು ಅವರ ಪತ್ನಿ ಪದ್ಮಮ್ಮ ತಿಳಿಸಿದ್ದಾರೆ. ನಮಗೆ ತಿಳಿಯದಂತೆ ಈ ನಂದನ್‌ ನಮ್ಮ ಮಗಳನ್ನು ಬೇರೊಬ್ಬರ ಜತೆ ಮದುವೆ ಮಾಡಿಸಿದ್ದರು. ಈ ವಿಚಾರವನ್ನು ಸ್ವತಃ ಮಗಳೇ ಹೇಳಿದ್ದಳು. ಅಲ್ಲಿಂದ ನಮಗೆ ಮತ್ತು ಅವರ ನಡುವೆ ದ್ವೇಷ ಬೆಳೆದಿತ್ತು. ಈ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ನಮ್ಮನ್ನು ಕೊಲ್ಲುವುದಾಗಿ ನಂದನ್ ಬೆದರಿಕೆ ಹಾಕಿದ್ದ. ಹೀಗಾಗಿ ಆತನ ವಿರುದ್ಧ ದೂರು ಕೂಡ ನೀಡಿದ್ದೆವು, ಈಗಲೂ ಆ ಕೇಸ್ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ನಮಗೂ ಆತನಿಗೂ ಯಾವುದೇ ಸಂಬಂಧ ಇಲ್ಲ, ಹೀಗಿದ್ದರೂ ಜಮೀನು ನನಗೆ ಬರಬೇಕೆಂದು ಕೇಸ್ ಹಾಕಿದ್ದಾನೆ. ಈ ಬಗ್ಗೆ ಸೋಮವಾರ ರಾಜಿ ಪಂಚಾಯಿತಿ ಸಹ ನಡೆದಿತ್ತು. ಆದರೆ, ಜಮೀನು ಪಿತ್ರಾರ್ಜಿತವಾಗಿ ಬಂದಿದ್ದು, ನನ್ನ ಪತಿ, ನನ್ನ ಹಾಗೂ ಮಗಳ ಹೆಸರಿಗೆ ಜಮೀನು ಮಾಡಿದ್ದರು. ಇವತ್ತು ಇದೇ ವಿಚಾರವಾಗಿ ತಹಸೀಲ್ದಾರ್ ಕೋರ್ಟ್ ಇತ್ತು. ಅಧಿಕಾರಿಯನ್ನು ಕಾಣಲು ನನ್ನ ಪತಿ ಕಚೇರಿ ಒಳಗೆ ಹೋಗಿದ್ದರು. ಈ ವೇಳೆ ಆಗಮಿಸಿದ ನಂದನ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ವಿವರಿಸಿದ್ದಾರೆ.

ಇತ್ತ ಆತನ ಕೃತ್ಯದಿಂದಾಗಿ ಪದ್ಮಮ್ಮ ಅವರಿಗೂ ಕೈ ಕಟ್‌ ಆಗಿದ್ದು, ಕಿವಿ, ತಲೆ, ಬೆನ್ನಿಗೆ ತೀವ್ರ ಪೆಟ್ಟಾಗಿದೆಯಂತೆ. ಆತ ಮನಸ್ಸೋ ಇಚ್ಛೆ ಥಳಿಸುತ್ತಿದ್ದರೂ ಯಾರೊಬ್ಬರು ಬಿಡಿಸಲಿಲ್ಲ. ವಕೀಲರೊಬ್ಬರು ಕಲ್ಲಿನಲ್ಲಿ ಹೊಡೆದಾಗ ನಂದನ್ ಹಲ್ಲೆ ಮಾಡುವುದನ್ನು ನಿಲ್ಲಿಸಿದ ಎಂದು ಘಟನೆಯನ್ನು ಪದ್ಮಮ್ಮ ವಿವರಿಸಿದ್ದರು.

ಕುಡಿದು ಮನೆಗೆ ಕಲ್ಲು ತೂರಾಟ

ಈ ಹಿಂದೆಯೂ ನಂದನ್‌ ಕುಡಿದು ಬಂದು ಮನೆ ಮುಂದೆ ಜಗಳವಾಡಿದ್ದ. ಮನೆಗೆ ಕಲ್ಲು ಹೊಡೆದು ದಾಂಧಲೆ ನಡೆಸಿ, ನಿಮ್ಮಪ್ಪನ್ನ ಉಳಿಸಲ್ಲ ಎಂದು ನನ್ನ ಮಗಳಿಗೆ ಹೆದರಿಸಿದ್ದಾನೆ. ಅಲ್ಲದೆ, ಈ ಹಿಂದೆ ನಮ್ಮ ಮಗಳನ್ನು ಆತ ಬೇರೆಯವರೊಂದಿಗೆ ಮದುವೆ ಮಾಡಿಸಿದ್ದರಿಂದ ಆತನ ಮೇಲೆ ಅಪಹರಣ ದೂರು ದಾಖಲಿಸಿದ್ದೆವು. ಇವತ್ತಿನವರೆಗೂ ಅದರ ವಿಚಾರಣೆ ನಡೆಯುತ್ತಿದೆ ಎಂದು ಪದ್ಮಮ್ಮ ಕಣ್ಣೀರಿಟ್ಟು ಪರಿಸ್ಥಿತಿಯನ್ನು ವಿವರಿಸಿದರು.

ಜಿಲ್ಲಾವಾರು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version