ಹಾವೇರಿ: ಭಾವಿ ಪತಿಯೊಂದಿಗೆ ರೀಲ್ಸ್ ಮಾಡುವ ನೆಪದಲ್ಲಿ 17 ವರ್ಷದ ಬಾಲಕಿಯೊಬ್ಬಳು ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿರುವ (Attempt to murder) ಘಟನೆ ರಾಣೆಬೆನ್ನೂರು ನಗರದ ಹೊರವಲಯದ ಸ್ವರ್ಣ ಪಾರ್ಕ್‌ನಲ್ಲಿ (swarna Park) ಶುಕ್ರವಾರ (ಏ.8) ನಡೆದಿದೆ. ಹರಪನಹಳ್ಳಿ ತಾಲೂಕಿನ ಮೈದೂರ ಗ್ರಾಮದ ನಿವಾಸಿ ದೇವೇಂದ್ರಗೌಡ ಕಾಡನಗೌಡ ಮಂಡಗಟ್ಟಿ (30) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ.
ದೇವೇಂದ್ರಗೌಡ ಕುಟುಂಬದವರೆಲ್ಲ ಸೇರಿ ಇತ್ತೀಚೆಗಷ್ಟೇ ಬಾಲಕಿ ಜತೆಗೆ ನಿಶ್ಚಿತಾರ್ಥ ಮಾಡಿಸಿದ್ದರು. ಏ.6 ರಂದು ಆಕೆಯ ಹುಟ್ಟುಹಬ್ಬ ಇದ್ದ ಕಾರಣಕ್ಕೆ ರಾಣೆಬೆನ್ನೂರಿಗೆ ದೇವೇಂದ್ರ ಬಂದಿದ್ದ. ಆಕೆಗೆ ಹುಟ್ಟುಹಬ್ಬದ ಉಡುಗೊರೆ ಕೊಡಿಸಲೆಂದು ಹೊರಗೆ ಕರೆದುಕೊಂಡು ಬಂದಿದ್ದ. ಈ ವೇಳೆ ಆ ಬಾಲಕಿ ಒಂದು ವಿಶೇಷ ಸ್ಥಳಕ್ಕೆ ಕರೆದುಕೊಂಡು ಹೋಗುವೆ ಬಾ ಎಂದು ಆಟೋದಲ್ಲಿ ನಗರದ ಹೊರವಲಯದಲ್ಲಿರುವ ಸ್ವರ್ಣ ಪಾರ್ಕ್‌ಗೆ ಕರೆದುಕೊಂಡು ಹೋಗಿದ್ದಾಳೆ.
ಈ ವೇಳೆ ಹುಡುಗಿ ನಿನಗೊಂದು ಸರ್ಪ್ರೈಸ್ ಕೊಡುವೆ ನನ್ನೊಟ್ಟಿಗೆ ರೀಲ್ಸ್ ಮಾಡಬೇಕು ಎಂದಿದ್ದಾಳೆ. ಭಾವಿ ಪತ್ನಿಯ ಮಾತಿಗೆ ದೇವೇಂದ್ರ ತಲೆಯಾಡಿಸಿದ್ದಾರೆ. ಇತ್ತ ಹೊಸ ಎರಡು ವೇಲ್, ಒಂದು ಕರ್ಚಿಫ್ ಖರೀದಿಸಿದ್ದ ಆಕೆ ಅದರಿಂದಲೇ ಯುವಕನ ಕೈ ಹಾಗೂ ಕಣ್ಣು ಕಟ್ಟಿದ್ದಾಳೆ. ಆಗ ದೇವೆಂದ್ರ ನಿನ್ನ ಬರ್ತ್‌ಡೇಗೆ ನನಗೇನಪ್ಪ ಸರ್ಪೈಸ್ ಎಂದು ಹೇಳುತ್ತಿದ್ದಂತೆ, ಬ್ಯಾಗ್‌ನಿಂದ ಚೂಪಾದ ಚಾಕು ತೆಗೆದುಕೊಂಡು ಕುತ್ತಿಗೆ ಕೊಯ್ದಿದ್ದಾಳೆ.
ಕೂಡಲೇ ಕತ್ತಲು ಆವರಿಸಿದ್ದಂತಾಗಿ ದೇವೇಂದ್ರ ಆಕೆಯನ್ನು ತಳ್ಳಿದ್ದಾನೆ. ಕೆಳಗೆ ಬಿದ್ದವಳು ಮತ್ತೆ ಎದ್ದು ಬಂದವಳೇ ನನ್ನೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತೀಯಾ ನೀನು? ನನಗೆ ಲವರ್ ಇದ್ದಾನೆ. ನೀನ್ಯಾರು ನನ್ನ ಮದುವೆ ಮಾಡಿಕೊಳ್ಳೋಕೆ ಎಂದು ಹೇಳುತ್ತಾ ಮತ್ತೆ ಎರಡೂ ಬಾರಿ ಚಾಕುವಿನಿಂದ ಚುಚ್ಚಲು ಮುಂದಾಗಿದ್ದಾಳೆ. ಅಷ್ಟರಲ್ಲಿ ದೇವೇಂದ್ರ ಕೈ ಕಟ್ಟಿದ್ದನ್ನು ಬಿಡಿಸಿಕೊಂಡು ಆಕೆಯನ್ನು ಹಿಡಿದುಕೊಳ್ಳಲು ಮುಂದಾಗಿದ್ದಾನೆ. ಆಗ ಆತನನ್ನು ತಳ್ಳಿ ಬಾಲಕಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ ಎನ್ನಲಾಗಿದೆ.
ಪರಾರಿ ಆಗುತ್ತಿದ್ದವಳ ಬೆನ್ನಿಗೆ ಬಿದ್ದ ಸ್ಥಳೀಯರು
ಯುವಕನ ಕುತ್ತಿಗೆ ಸೀಳಿ ಅಲ್ಲಿಂದ ಪರಾರಿ ಆಗುತ್ತಿದ್ದವಳನ್ನು ಸ್ಥಳೀಯರು ನೋಡಿದ್ದು, ಬೆನ್ನಿಗೆ ಬಿದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಾರ್ಕಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ದೇವೇಂದ್ರನನ್ನು ತಕ್ಷಣವೇ ಹಲಗೇರಿ ಠಾಣೆ ಪೊಲೀಸರು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ (Davangere) ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ದೇವೇಂದ್ರ ಕುಟುಂಬಸ್ಥರು ನೀಡಿದ ದೂರಿನ ಮೇಲೆ ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ. ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: NCF 2023 Draft: ಪಿಯುಗೆ ವರ್ಷಕ್ಕೆ ಇನ್ಮುಂದೆ ಒಂದಲ್ಲ 2 ಬಾರಿ ಪರೀಕ್ಷೆ; ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ವರದಿಯಲ್ಲಿ ಏನಿದೆ?
ಪ್ರೀಪ್ಲಾನ್ ಮಾಡಿ ಹತ್ಯೆಗೆ ಸ್ಕೆಚ್
ಕುಟುಂಬದವರ ಸಮ್ಮುಖದಲ್ಲಿ ದೇವೇಂದ್ರಗೌಡನೊಂದಿಗೆ ಕಳೆದ ಮಾ. 31ರಂದು ಬಾಲಕಿಯ ನಿಶ್ಚಿತಾರ್ಥವಾಗಿತ್ತು. ಆದರೆ, ಈಕೆ ಬೇರೆಯವನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ದೇವೇಂದ್ರಗೌಡನ ಹತ್ಯೆಗೆ ಮುಂದಾಗಿದ್ದಳು ಎನ್ನಲಾಗಿದೆ. ಬಾಲಕಿ ಹತ್ಯೆಗೆ ಯತ್ನಿಸಿದ ಸಮಯದಲ್ಲಿ ಘಟನಾ ಸ್ಥಳದಲ್ಲಿ ಆಕೆಯನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಆದರೆ, ಕೃತ್ಯ ನಡೆಯುವ ಹಿಂದಿನ ದಿನ ಆಕೆ ತನ್ನ ಪ್ರಿಯಕರನ ಜತೆ ಫೋನ್‌ನಲ್ಲಿ ಮಾತನಾಡಿದ್ದಾಳೆ ಎಂದು ತಿಳಿದು ಬಂದಿದೆ.