ಚಿಕ್ಕಬಳ್ಳಾಪುರ: ಹಲವು ಕಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಠಾಣೆಗೆ ಹಾಜರಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ವಿಷ ಸೇವಿಸಿ ಪೊಲೀಸ್ ಠಾಣೆಗೆ ತೆರಳಿ ಆತ್ಮಹತ್ಯೆ ಬೆದರಿಕೆ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ. ಪೊಲೀಸರ ಕಾಟ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ (Attempted suicide) ವ್ಯಕ್ತಿ ಆರೋಪಿಸಿದ್ದಾರೆ.
ಕುರ್ಲಹಳ್ಳಿ ಗ್ರಾಮದ ಕಲ್ಲು ಒಡೆಯುವ ಕೆಲಸಗಾರ ಸುಬ್ರಮಣಿ ವಿಷ ಸೇವಿಸಿದ ವ್ಯಕ್ತಿ. ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಕೇಬಲ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದರಿಂದ ಅನುಮಾನಗೊಂಡ ನಗರ ಠಾಣೆ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸುಬ್ರಮಣಿಗೆ ಸೂಚಿಸಿದ್ದಾರೆ.
ಹಲವು ಬಾರಿ ಮನೆ ಬಳಿ ಹೋಗಿ ಕರೆದರೂ ಸುಬ್ರಮಣಿ ವಿಚಾರಣೆಗೆ ಬಂದಿಲ್ಲ. ಮತ್ತೆ ಮತ್ತೆ ಪೊಲೀಸರು ಕರೆಯುತ್ತಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಪತ್ನಿಯೊಂದಿಗೆ ವ್ಯಕ್ತಿ ಠಾಣೆಗೆ ಹೋಗಿದ್ದಾರೆ. ಠಾಣೆಗೆ ಹಾಜರಾಗುವ ಮುನ್ನವೇ ವಿಷ ಸೇವಿಸಿದ್ದರು ಎನ್ನಲಾಗಿದ್ದು, ವಿಚಾರಣೆ ವೇಳೆ ಅಸ್ವಸ್ಥಗೊಂಡಿದ್ದರಿಂದ ಪೊಲೀಸರು ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಬಗ್ಗೆ ಸಬ್ ಇನ್ಸ್‌ಪೆಕ್ಟರ್ ಪ್ರದೀಪ್ ಪೂಜಾರಿ ಪ್ರತಿಕ್ರಿಯಿಸಿ, ಪೊಲೀಸ್ ಠಾಣೆಯಲ್ಲಿ ವಿಷ ಸೇವಿಸಿರುವುದಾಗಿ ಸುಬ್ರಮಣಿ ಹೇಳಿದ್ದು, ಪೊಲೀಸರ ಕಾಟ ತಾಳಲಾರದೆ ವಿಷ ಸೇವಿಸಿರುವುದಾಗಿ ಆರೋಪಿಸಿದ್ದಾರೆ ಎಂದು ಹೇಳಿದ್ದಾರೆ. ವಿಷ ಕುಡಿದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿಲ್ಲ. ಹೊರಗಡೆ ವಿಷ ಸೇವನೆ ಮಾಡಿ ಪೊಲೀಸರ ವಿರುದ್ಧ ಆರೋಪಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.