ಆನೇಕಲ್: ತಾಲೂಕಿನ ಅತ್ತಿಬೆಲೆ ಗಡಿಭಾಗದ ಪಟಾಕಿ ಗೋದಾಮಿನಲ್ಲಿ ಶನಿವಾರ (ಅಕ್ಟೋಬರ್ 7) ಭೀಕರ ನಡೆದ ಅಗ್ನಿ ದುರಂತದಲ್ಲಿ (Attibele Fire Accident) 14 ಜನ ಮೃತಪಟ್ಟಿದ್ದಾರೆ. ಭಾನುವಾರ (ಅಕ್ಟೋಬರ್ 8) ಬೆಳಗ್ಗೆ ಗೋದಾಮಿನ ಬಳಿ ಬಂದ ಕುಟುಂಬಸ್ಥರ ಆಕ್ರಂದನವು ಮುಗಿಲುಮುಟ್ಟಿದೆ. ಇದರ ಬೆನ್ನಲ್ಲೇ, ಮೃತಪಟ್ಟ 14 ಜನರಲ್ಲಿ ಎಂಟು ಯುವಕರು ಒಂದೇ ಗ್ರಾಮದವರಾಗಿದ್ದಾರೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ಧರ್ಮಪುರ ಜಿಲ್ಲೆ ಕೆ. ಅಮ್ಮಾಪೇಟೆ ಗ್ರಾಮದ 10 ಕಾರ್ಮಿಕರು ಕೆಲಸಕ್ಕೆಂದು ಬಂದಿದ್ದರು. ಇವರಲ್ಲಿ ಎಂಟು ಯುವಕರು ಅಗ್ನಿ ದುರಂತದ ವೇಳೆ ಮೃತಪಟ್ಟಿದ್ದಾರೆ. ಆದಿಕೇಶವನ್ (17), ಗಿರಿ (17), ವೇಡಪ್ಪನ್ (22), ಆಕಾಶ್ (17), ವಿಜಯರಾಘವನ್(19), ವೆಳಂಬರದಿ (20), ವಿನೋದ್ (18), ಮುನಿವೇಲ್ (19) ಮೃತರು. ಇವರೆಲ್ಲ ವಿದ್ಯಾರ್ಥಿಗಳಾಗಿದ್ದು, ಬಡತನದ ಹಿನ್ನೆಲೆಯಲ್ಲಿ ದೀಪಾವಳಿ ವೇಳೆ ಹೀಗೆ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಎಂಟು ವಿದ್ಯಾರ್ಥಿಗಳ ಸಾವಿನ ಹಿನ್ನೆಲೆಯಲ್ಲಿ ಕೆ. ಅಮ್ಮಾಪೇಟೆಯಲ್ಲಿ ಸೂತಕದ ಛಾಯೆ ಆವರಿಸಿದೆ ಎಂದು ತಿಳಿದುಬಂದಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ದುರಂತ
ಅಗ್ನಿ ದುರಂತ ಸಂಭವಿಸಿದ ಪಟಾಕಿ ಗೋದಾಮಿಗೆ ಅಧಿಕಾರಿಗಳು ಭೇಟಿ ನೀಡಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಗ್ನಿ ದುರಂತ ಸಂಭವಿಸಿದ ಗೋದಾಮಿಗೆ ವಿದ್ಯುತ್ ಕಂಬವೊಂದು ಅಂಟಿಕೊಂಡಿದ್ದು, ಕಂಬದಲ್ಲಿ ಬೆಂಕಿ ಕಾಣಿಸಿಕೊಂಡು, ಗೋದಾಮಿಗೆ ಆವರಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಎಮರ್ಜನ್ಸಿ ಎಕ್ಸಿಟ್ ಇದ್ದಿದ್ದರೆ ಬದುಕುಳಿಯುತ್ತಿದ್ದರು
ಭಾರಿ ಪ್ರಮಾಣದಲ್ಲಿ ಸಂಗ್ರಹಿಸಿದ್ದ ಗೋದಾಮಿನಲ್ಲಿ ಎಮರ್ಜೆನ್ಸಿ ಎಕ್ಸಿಟ್ (ತುರ್ತು ನಿರ್ಗಮನ ದ್ವಾರ) ಇದ್ದಿದ್ದರೆ ಕಾರ್ಮಿಕರು ಬದುಕುಳಿಯುತ್ತಿದ್ದರು ಎಂದು ತಿಳಿದುಬಂದಿದೆ. ಮೊದಲು ಗೋದಾಮಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹಾಗಾಗಿ, ತಪ್ಪಿಸಿಕೊಳ್ಳಲು ಕಾರ್ಮಿಕರು ಗೋದಾಮಿನ ಹಿಂಬದಿಗೆ ಹೋಗಿದ್ದರು. ಆದರೆ, ಅಲ್ಲಿಂದ ಪರಾರಿಯಾಗಬೇಕು ಎಂದರೆ ಎಮರ್ಜನ್ಸಿ ಎಕ್ಸಿಟ್ ಇರಲಿಲ್ಲ. ಹಾಗಾಗಿ, ತಪ್ಪಿಸಿಕೊಳ್ಳಲು ಆಗದೆ ಮೃತಪಟ್ಟಿದ್ದಾರೆ. ಒಂದೇ ಜಾಗದಲ್ಲಿ ಏಳು ಯುವಕರು ಸುಟ್ಟು ಕರಕಲಾಗಿದ್ದರು ಎಂದು ತಿಳಿದುಬಂದಿದೆ.