ಬೀದರ್: ಕರ್ನಾಟಕದಲ್ಲಿ ವಿಧಾನಸಭೆ (Karnataka Election 2023) ಚುನಾವಣೆ ಕಾವು ಬೇಸಿಗೆಯ ಬಿಸಿಲಿಗಿಂತ ಹೆಚ್ಚಾಗುತ್ತಿದೆ. ಚುನಾವಣೆ ಅಭ್ಯರ್ಥಿಗಳ ಅಬ್ಬರದ ಭಾಷಣ, ಪ್ರಚಾರ, ಭರವಸೆಗಳ ಜತೆಗೆ ಜನರಿಗೆ ಗೌಪ್ಯವಾಗಿ ಹಣ ಹಂಚುವ, ಆಮಿಷ ಒಡ್ಡುವ ಚಟುವಟಿಕೆಗಳು ಶುರುವಾಗಿವೆ. ಅಕ್ರಮವಾಗಿ ಸಾಗಿಸುತ್ತಿದ್ದ ನೂರಾರು ಕೋಟಿ ರೂಪಾಯಿಯನ್ನು ಅಧಿಕಾರಿಗಳು ಜಪ್ತಿ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬೀದರ್‌ನ ಔರಾದ್‌ನಲ್ಲಿ ಮತದಾರರೊಬ್ಬರು ಅಭ್ಯರ್ಥಿಯ ಪ್ರಚಾರಕ್ಕಾಗಿಯೇ 50 ಸಾವಿರ ರೂ. ದೇಣಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ನೋಟು ಕೊಡಿ, ಒಂದು ವೋಟು ಪಡೆಯಿರಿ ಎಂಬ ಕಾಲದಲ್ಲಿ ಔರಾದ್ ಮೀಸಲು ಕ್ಷೇತ್ರದ ಹಸಿಕೇರಾ ಗ್ರಾಮದ ಗೋರಕ್ ಎಂಬುವರು ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ್ ಶಿಂಧೆ ಅವರಿಗೆ ಚುನಾವಣೆ ಪ್ರಚಾರಕ್ಕಾಗಿ 50 ಸಾವಿರ ನೀಡಿದ್ದಾರೆ. ದಿನಗೂಲಿ ಕೆಲಸ ಮಾಡುವ ಇವರು ಕೂಡಿಟ್ಟ ಹಣವನ್ನು ಅಭ್ಯರ್ಥಿಗೆ ನೀಡಿದ್ದಾರೆ.
ಗೋರಕ್ ಅವರು ಹೈದರಾಬಾದ್‌ನಲ್ಲಿ ದಿನಗೂಲಿ ಕೆಲಸ ಮಾಡುತ್ತಾರೆ. ಔರಾದ್ ಕ್ಷೇತ್ರದ ಹಿತಕ್ಕಾಗಿ ಡಾ. ಭೀಮಸೇನರಾವ್ ಶಿಂಧೆ ಗೆಲುವು ಸಾಧಿಸಬೇಕು ಎನ್ನುವ ಕಾರಣಕ್ಕಾಗಿ ನಾನು ಶಿಂಧೆ ಸಾಹೇಬರಿಗೆ ಹಣ ನೀಡಿದ್ದೇನೆ.
ಕೆಲ ವಿರೋಧಿಗಳು ಡಾ. ಭೀಮಸೇನರಾವ ಶಿಂಧೆ ಅವರ ಬಳಿ ಹಣವಿಲ್ಲ ಎಂದು ಪ್ರಚಾರ ಮಾಡುತ್ತಿರುವುದು ನನಗೆ ಗೊತ್ತಾಗಿದೆ. ಆದ್ದರಿಂದ ಮತದಾರರಾದ ನಾವೇ ಡಾ. ಭೀಮಸೇನರಾವ್ ಶಿಂಧೆ ಅವರಿಗೆ ದೇಣಿಗೆ ನೀಡಿ ಗೆಲ್ಲಿಸಿ ತರಬೇಕೆಂಬ ಕಾರಣದಿಂದ ಹಣ ನೀಡಿದ್ದೇನೆ ಎಂದು ಗೋರಕ್ ತಿಳಿಸಿದ್ದಾರೆ.
ಇದನ್ನೂ ಓದಿ: DK Shivakumar: ಸಿಬಿಐ ತನಿಖೆ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ; ಚುನಾವಣೆಗೆ ಮೊದಲೇ ಡಿಕೆಶಿಗೆ ಸಂಕಷ್ಟ