ಮೈಸೂರು: ಒಂದೆಡೆ ಸಾರಿಗೆ ಬಸ್‌ಗಳಲ್ಲಿ ಉಚಿತ ಬಸ್ ಪ್ರಯಾಣ ವ್ಯವಸ್ಥೆ (Free Bus Service) ಮಾಡಿರುವುದಕ್ಕೆ ಮಹಿಳೆಯರು ಸಂತಸ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಆಟೋ ಚಾಲಕರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಶಕ್ತಿ ಯೋಜನೆಯಿಂದ ಯಾರೂ ಬಾಡಿಗೆಗೆ ಬರುತ್ತಿಲ್ಲ. ಮಹಿಳೆಯರಿಗೆ ಫ್ರೀ ಬಸ್ ನೀಡಿ ಸರ್ಕಾರ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬಾಡಿಗೆ ಇಲ್ಲದೆ ಪರದಾಡಿದ ಕೆಲ ಆಟೋ ಚಾಲಕರು ಪ್ರತಿಕ್ರಿಯಿಸಿ, ಮೊದಲು ಬೈಕ್ ಟ್ಯಾಕ್ಸಿಗಳು ನಮಗೆ ತೊಂದರೆ ಮಾಡುತ್ತಿದ್ದವು. ಈಗ ಸರ್ಕಾರದ ಈ ಫ್ರೀ ಬಸ್‌ಗಳಿಂದ ನಮಗೆ ತೊಂದರೆಯಾಗಿದೆ. ಹೆಚ್ಚು ಮಹಿಳೆಯರು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರಿಗೆ ಉಚಿತ ಬಸ್ ನೀಡಿದ್ದರಿಂದ ಯಾರೂ ಆಟೋ ಹತ್ತುತ್ತಿಲ್ಲ. ಮಧ್ಯಾಹ್ನದ ಮೇಲೆ ಆಟೋ ಬಾಡಿಗೆ ಪಡೆಯುವವರ ಸಂಖ್ಯೆ ಕಡಿಮೆ ಆಗಿದೆ. ಆದರೆ, ಸರ್ಕಾರವೂ ಆಟೋ ಚಾಲಕರ ನೆರವಿಗೆ ಬರುತ್ತಿಲ್ಲ ಎಂದು ಆಟೋ ಚಾಲಕರು ಕಿಡಿ ಕಾರಿದರು.
ಇದನ್ನೂ ಓದಿ | Free Bus Service : ವಿದ್ಯುತ್ ದರ ಏರಿಕೆಯಲ್ಲಿ ಕಾಂಗ್ರೆಸ್ ಸರ್ಕಾರದ ಪಾತ್ರವಿಲ್ಲ : ಸಿಎಂ ಸಿದ್ದರಾಮಯ್ಯ
ಲೋಕಸಭಾ ಚುನಾವಣಾ ದೃಷ್ಟಿಯಿಂದ ಫ್ರೀ ಬಸ್
ವಿಜಯನಗರ: ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ ಎಂದು ಶಕ್ತಿ ಯೋಜನೆ ಜಾರಿ ಮಾಡುತ್ತಿದೆ. ಆದರೆ ರಾಜ್ಯದ ಎಷ್ಟೋ ಗ್ರಾಮಗಳಿಗೆ ಬಸ್ ವ್ಯವಸ್ಥೆಯೇ ಇಲ್ಲ. ಲೋಕಸಭಾ ಚುನಾವಣಾ ದೃಷ್ಟಿಯಿಂದ ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿದೆ ಎಂದು ಆಟೋ ಚಾಲಕರ ಸಂಘದ ಸದಸ್ಯರು ಕಿಡಿಕಾರಿದ್ದಾರೆ.
ನಗರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಆಟೋ ಚಾಲಕರು, ಶಾಲಾ ಮಕ್ಕಳನ್ನು ಕಂಡರೆ ಬಸ್‌ನವರು ನಿಲ್ಲಿಸದೆ ಮುಂದೆ ಸಾಗುವ ಸ್ಥಿತಿ ಇತ್ತು. ಮುಂದೇ ಮಹಿಳೆಯರಿಗೂ ಇದೇ ಸ್ಥಿತಿ ಬರುತ್ತದೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ರಾಜ್ಯ ಸರ್ಕಾರ ಫ್ರೀ ಬಸ್ ಕೊಡುತ್ತಿದೆ. ಇದಕ್ಕೆ ನಮ್ಮ ವಿರೋಧ ಇದೆ ಹೇಳಿದ್ದಾರೆ.
ಆಟೋ, ಮಿನಿ ಗೂಡ್ಸ್, ಕ್ರಷರ್ ಚಾಲಕರು ತೊಂದರೆಯಲ್ಲಿದ್ದಾರೆ. ಆದರೆ, ಸರ್ಕಾರ ಏನಾದರೂ ಸೌಲಭ್ಯ ಕೊಟ್ಟಿದೆಯಾ? ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಸಾರಿಗೆ ನೌಕರರಿಗೆ ಸಣ್ಣ ಸೌಲಭ್ಯ ಕೊಟ್ಟಿದ್ದಾರಾ? ಬರೀ ಮಹಿಳೆಯರಿಗೆ ಫ್ರೀ ಕೊಡ್ತಿವಿ ಅಂದಿದ್ದಾರೆ. ನಾವು ಕಾಂಗ್ರೆಸ್‌ಗೆ ವೋಟ್ ಹಾಕಿಲ್ವಾ? ನಾವು ಕೂಡಾ ಮತದಾರರು, ನಾವು ಕೂಡ ತೆರಿಗೆ ಕಟ್ಟುತ್ತೇವೆ. ನಮಗೂ ಉಚಿತ ಎಲ್‌ಪಿಜಿ, ಉಚಿತ ಡೀಸೆಲ್, ಪೆಟ್ರೋಲ್ ಕೊಟ್ಟರೆ ಫ್ರೀ ಸರ್ವಿಸ್ ಕೊಡುತ್ತೇವೆ ಎಂದು ತಿಳಿಸಿದ್ದಾರೆ.