ಬಳ್ಳಾರಿ: ಚಾಲಕ ಸೇರಿ 11 ಜನ ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ಆಟೋ HLC ಕಾಲುವೆಗೆ ಪಲ್ಟಿಯಾಗಿದ್ದು, ನೀರುಪಾಲಾದ 1೧ ಜನರಲ್ಲಿ ಮೂವರ ಶವ ಪತ್ತೆಯಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. ಐವರು ಪಾರಾಗಿದ್ದಾರೆ.
ಬಳ್ಳಾರಿ ತಾಲೂಕಿನ ಕೊಳಗಲ್ ಸಮೀಪ ಘಟನೆ ನಡೆದಿದೆ. ಕೊಳಗಲ್ ಗ್ರಾಮದಿಂದ ಕೃಷ್ಣಾನಗರಕ್ಕೆ ಆಟೋದಲ್ಲಿ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವಾಗ ಕಲ್ಲಿನ ಮೇಲೆ ಚಕ್ರ ಹತ್ತಿದ ಆಟೋ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದೆ. ಕೂಡಲೇ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ.
ಚಾಲಕ ಭೀಮಾ ಮತ್ತು ಬಾಲಕ ಮಹೇಶ ಆಟೋ ಬಿದ್ದಾಕ್ಷಣ ಹೊರಗೆ ಜಿಗಿದಿದ್ದಾರೆ. ದಮ್ಮೂರು ಎರ್ರೆಮ್ಮ, ಹೇಮಾವತಿ, ಶಿಲ್ಪ ಅವರನ್ನು ರಕ್ಷಣೆ ಮಾಡಿದ್ದಾರೆ. ದುರ್ಗಮ್ಮ, ನಿಂಗಮ್ಮ ಅವರ ಮೃತ ದೇಹಗಳು ಪತ್ತೆಯಾಗಿವೆ. ಪುಷ್ಪವತಿ ಅವರನ್ನು ರಕ್ಷಿಸಲಾಗಿದ್ದರೂ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕುಡತಿನಿ ಲಕ್ಷ್ಮಿ, ಹುಲಿಗೆಮ್ಮ, ನಾಗರತ್ನಮ್ಮ ನಾಪತ್ತೆಯಾಗಿದ್ದಾರೆ.
ಆಟೋ ಉರುಳಿದ ಕೂಡಲೇ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದರು. ಕಾಲುವೆಗೆ ಬಿದ್ದವರ ಆರ್ತನಾದ ಆಲಿಸಿದ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಣ್ಣ ದೊಡ್ಡಪ್ಪ ಎಂಬವರು ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ.
ಸ್ಥಳಕ್ಕೆ ಎಡಿಸಿ ಮಂಜುನಾಥ್, ಎಸಿ ಡಾ.ಆಕಾಶ ಶಂಕರ್, ಎಸ್ಪಿ ಸೈದುಲಾ ಅಡಾವತ್, ಡಿವೈಎಸ್ಪಿ ಶೇಖರಪ್ಪ, ಸತ್ಯನಾರಾಯಣ ರಾವ್, ಇನ್ಸ್ ಪೆಕ್ಟರ್ ನಿರಂಜನ್, ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಮೂಲಕ ಕಾಣೆಯಾದವರ ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ | Rain News | ಮನೆ ಕುಸಿದು ಯುವಕ ಸಾವು, ಅಪ್ಪ-ಅಮ್ಮನನ್ನು ಬೇರೆಡೆ ಬಿಟ್ಟು ಬಂದು ಮನೆ ಪ್ರವೇಶಿಸಿದಾಗ ನಡೆಯಿತು ದುರಂತ