ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bangalore mysore Expressway) ಅಪಘಾತಗಳ ಹೆದ್ದಾರಿಯಾಗುತ್ತಿದೆ ಎಂಬ ಆರೋಪಗಳ ನಡುವೆ ಅವಘಡಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ (Police Department) ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ನಡುವೆ ಹೆದ್ದಾರಿ ಇಲಾಖೆ (National High way Authority) ಕೆಲವೊಂದು ವಾಹನಗಳಿಗೆ ನಿಷೇಧ (Restriction on vehicle) ಹೇರಿದೆ. ಅತ್ಯಂತ ವೇಗವಾಗಿ ವಾಹನಗಳು ಸಾಗುವ, ಮಲ್ಟಿ ಆ್ಯಕ್ಸಿಸ್ ಕಂಟ್ರೋಲ್ (Multi axis Control) ಇರುವ ಈ ಹೆದ್ದಾರಿಯಲ್ಲಿ ಇನ್ನು ಮುಂದೆ ಬೈಕ್ ಮಾತ್ರವಲ್ಲ, ಆಟೊ, ಟ್ರ್ಯಾಕ್ಟರ್ ಸೇರಿದಂತೆ ಹಲವು ವಾಹನಗಳ ಸಂಚಾರಕ್ಕೆ ನಿಷೇಧ (Vehicle Ban) ವಿಧಿಸಲಾಗಿದೆ. ಆಗಸ್ಟ್ 1ರಿಂದ ಈ ನಿಯಮ ಜಾರಿಗೆ ಬರಲಿದೆ. ಒಂದು ವೇಳೆ ಈ ವಾಹನಗಳನ್ನು ಚಲಾಯಿಸಿದರೆ 500 ರೂಪಾಯಿ ದಂಡ ಬೀಳಲಿದೆ.
ಈ ಬಗ್ಗೆ ಮಾತನಾಡಿದ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ದ್ವಿಚಕ್ರ, ತ್ರಿಚಕ್ರ ಸೇರಿ ಕೆಲವು ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಅಪಘಾತಗಳ ತಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿರ್ಧಾರ ಕೈಗೊಂಡಿದೆ. ಅದರ ಅನುಸಾರ ಬೈಕ್, ಆಟೋ, ಟ್ರ್ಯಾಕ್ಟರ್‌ಗಳಿಗೆ ಹೆದ್ದಾರಿಯಲ್ಲಿ ಸಂಚರಿಸಲು ಅನುಮತಿ ನೀಡಲಾಗಿಲ್ಲ. ಬದಲಿಗೆ ಸರ್ವಿಸ್ ರಸ್ತೆ ಬಳಸಿ ಸಂಚಾರ ಮಾಡಬೇಕು. ಜು.12ರಂದೇ ಈ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ (ಆಗಸ್ಟ್ 1) ಹೊಸ ನಿಯಮ ಅನ್ವಯ ಆಗಲಿದೆ.
ಇದನ್ನೂ ಓದಿ: Gruha lakshmi scheme : ಮುಂದಿನ ವರ್ಷ ಗೃಹಲಕ್ಷ್ಮಿ ಭಾಗ್ಯ ಇಲ್ಲ? ಆರ್ಥಿಕ ಇಲಾಖೆ ಹೇಳಿದ್ದೇನು?
ಕೆಲವೆಡೆ ಸರ್ವಿಸ್ ರಸ್ತೆಯಲ್ಲಿ ಸಮಸ್ಯೆ ಇದೆ. ಅದನ್ನು ಶೀಘ್ರವಾಗಿ ಸರಿಪಡಿಸುವಂತೆ ಎನ್ಎಚ್‌ಎ ಅಧಿಕಾರಿಗಳ ಜತೆ ಮಾತನಾಡಲಾಗಿದೆ. ವಾಹನ ಸವಾರರು ನಿಯಮ ಪಾಲನೆ ಮಾಡಬೇಕು. ಉಲ್ಲಂಘನೆ ಮಾಡಿದರೆ ಪೊಲೀಸ್ ಇಲಾಖೆಯಿಂದ ದಂಡ ಹಾಕಲಾಗುತ್ತದೆ ಎಂದು ಕಾರ್ತಿಕ್ ರೆಡ್ಡಿ ಹೇಳಿದರು.
ಯಾವೆಲ್ಲಾ ವಾಹನಗಳು ನಿಷೇಧ?
- ಬೈಕ್, ಸ್ಕೂಟರ್ ಮತ್ತು ಇತರೆ ದ್ವಿಚಕ್ರವಾಹನಗಳು
- ಆಟೋ ರಿಕ್ಷಾ ಸೇರಿದಂತೆ ಎಲ್ಲ ತ್ರಿಚಕ್ರವಾಹನಗಳು
- ಮೋಟಾರು ಎಂಜಿನ್ ಇಲ್ಲದ ವಾಹನಗಳು
- ಕೃಷಿ ಬಳಕೆ ಸೇರಿದಂತೆ ಯಾವುದೇ ಟ್ರ್ಯಾಕ್ಟರ್ಗಳು
- ಮಲ್ಟಿ ಆ್ಯಕ್ಸೆಲ್ ಹೈಡ್ರಾಲಿಕ್ ವಾಹನಗಳು
- ಕ್ವಾಡ್ರಿ ಚಕ್ರಗಳು
ಜು.12ರಂದು ಆದೇಶ ಹೊರಡಿಸಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆ ಮಾಡಿದ ದಿನದಿಂದಲೂ ಈ ಸಂಚಾರ ನಿಷೇಧದ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಬೈಕ್‌ಗಳಿಗೆ ಪ್ರವೇಶವಿಲ್ಲ, ರಿಕ್ಷಾ ಇಲ್ಲ ಎಂಬೆಲ್ಲ ಸುದ್ದಿಗಳಿದ್ದವು. ಹಾಗಿದ್ದರೂ ಕೆಲವು ಕಡೆ ಈ ವಾಹನಗಳು ಹೆದ್ದಾರಿ ಪ್ರವೇಶ ಮಾಡುತ್ತಿದ್ದವು. ಇದೀಗ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವುದಕ್ಕಾಗಿ ಹೆದ್ದಾರಿ ಪ್ರಾಧಿಕಾರವೇ ಅಧಿಕೃತವಾಗಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೆದ್ದಾರಿ ಪ್ರಾಧಿಕಾರವು ಕಳೆದ ಜು.12ರಂದೇ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಜನ ಏನು ಹೇಳ್ತಾರೆ? ಇಲ್ಲಿದೆ ವಿಡಿಯೊ!
ಸರ್ವಿಸ್ ರಸ್ತೆಯಲ್ಲೇ ಸಾಗಬೇಕು
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೋಟಾರು ವಾಹನ ಕಾಯಿದೆ ಅನ್ವಯ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು ದ್ವಿಚಕ್ರ, ತ್ರಿಚಕ್ರವಾಹನ ಸೇರಿದಂತೆ ಕೆಲವು ವಾಹನಗಳು ಇನ್ನು ಸರ್ವಿಸ್ ರಸ್ತೆಯಲ್ಲಿಯೇ ಪ್ರಯಾಣ ಬೆಳೆಸಬೇಕಾಗುತ್ತದೆ.
ಇದನ್ನೂ ಓದಿ: Shakti Scheme : ಸಾರಿಗೆಗೆ ಶಕ್ತಿ ಬರೆ! ಸಂಬಳ ಕೊಡೋಕೂ ದುಡ್ಡಿಲ್ಲ, ಜೂನ್ ಬಾಕಿ ಕೊಟ್ಟಿಲ್ಲ!
ವಾಹನ ಸಂಚಾರಕ್ಕೆ ವೇಗ ಮಿತಿ ಪ್ರಕಟ
ಇದೇ ವೇಳೆ ಹೆದ್ದಾರಿ ಪ್ರಾಧಿಕಾರವು ಎಕ್ಸ್‌ಪ್ರೆಸ್ ವೇನಲ್ಲಿ ವಾಹನಗಳ ಸಂಚರಿಸುವ ಗರಿಷ್ಠ ವೇಗಕ್ಕೆ ಮಿತಿ ಹಾಕಿದೆ. ಅಧಿಸೂಚನೆಯ ಪ್ರಕಾರ ವಾಹನಗಳು ಪ್ರತಿ ಗಂಟೆಗೆ 80ರಿಂದ 100 ಕಿಲೋಮೀಟರ್ ವೇಗದಲ್ಲಿ ಮಾತ್ರ ಸಂಚರಿಸಬೇಕು. ಪ್ರಾಧಿಕಾರ ವೇಗ ಮಿತಿ ಆದೇಶ ಹೊರಡಿಸುವ ಮುನ್ನವೇ ಹೆದ್ದಾರಿಯಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಪೊಲೀಸರೇ ಸಂಚಾರ ನಿಯಂತ್ರಣಕ್ಕೆ ವೇಗ ಮಿತಿ ಅಳವಡಿಸಿದ್ದರು ಮತ್ತು ಅತಿ ವೇಗದಲ್ಲಿ ಚಲಾಯಿಸುವ ವಾಹನಗಳಿಗೆ ದಂಡ ವಿಧಿಸಿದ್ದರು.